ಕಾಸರಗೋಡಿನ ಪಡನ್ನದಿಂದ ಉಗ್ರ ವಶ : ಎನ್‌ಐಎ ಕಾರ್ಯಾಚರಣೆ : ಅಸ್ಸಾಂನಲ್ಲಿ ನಡೆದ ಕೃತ್ಯದಲ್ಲಿ ಭಾಗಿ

New Project
Published on

ಕಾಸರಗೋಡು: ಅಸ್ಸಾಂನಲ್ಲಿ ಇತ್ತೀಚೆಗೆ ನಡೆದಿದ್ದ ಉಗ್ರಗಾಮಿ ಪ್ರಕರಣವೊಂದರ ಆರೋಪಿ ಎಂ.ಬಿ. ಶಾಬ್‌ಶೇಖ್(32) ಎಂಬಾತನನ್ನು ಎನ್‌ಐಎ ಅಧಿಕಾರಿಗಳು ಚಂದೇರ ಪೊಲೀಸ್ ಠಾಣೆ ವ್ಯಾಪ್ತಿಯ ಪಡನ್ನದಲ್ಲಿ ಬಂಧಿಸಿದ್ದಾರೆ.

ಈತ ಬಾಂಗ್ಲಾದೇಶದ ಪ್ರಜೆಯಾಗಿದ್ದು, ಅಕ್ರಮವಾಗಿ ನುಸುಳಿ ಭಯೋತ್ಪಾದಕ ಕೃತ್ಯದಲ್ಲಿ ತೊಡಗಿಸಿಕೊಂಡಿದ್ದನೆನ್ನಲಾಗಿದೆ. ಶಾಬ್‌ಶೇಖ್ ಅಸ್ಸಾಂನಲ್ಲಿ ನಡೆದ ಭಯೋತ್ಪಾದಕ ಕೃತ್ಯದಲ್ಲಿ ಆರೋಪಿಯಾಗಿದ್ದು, ಆತನ ವಿರುದ್ಧ ಯುಎಪಿಎ ಅನ್ವಯ ಕೇಸು ದಾಖಲಾಗುತ್ತಿದ್ದಂತೆ ಅಲ್ಲಿಂದ ಕೇರಳಕ್ಕೆ ಪಲಾಯನಗೈದಿದ್ದನು. ಆತನ ಪತ್ತೆಗೆ ಅಸ್ಸಾಂ ಪೊಲೀಸ್ ಇಲಾಖೆ ಹಾಗೂ ಎನ್‌ಐಎ ಲುಕೌಟ್ ನೋಟಿಸ್ ಜಾರಿಗೊಳಿಸಿತ್ತು.

ಪಶ್ಚಿಮಬಂಗಾಳ ನಿವಾಸಿಗಳೆಂದು ತಿಳಿಸಿ ಕೇರಳದ ಕೆಂಪುಕಲ್ಲಿನ ಕ್ವಾರಿ, ಕಾರ್ಖಾನೆ ಸೇರಿದಂತೆ ನಾನಾ ಕಡೆ ಕೆಲಸ ನಿರ್ವಹಿಸುತ್ತಿದ್ದು, ಅವರ ಬಗ್ಗೆ ನಿಗಾ ವಹಿಸುವುದಾಗಲಿ, ಅವರಿಗೆ ವಸತಿ ಒದಗಿಸುವವರಿಗೆ ಸೂಕ್ತ ಮಾನದಂಡ ರೂಪಿಸುವ ಬಗ್ಗೆ ಕಾರ್ಮಿಕ ಇಲಾಖೆ, ಪೊಲೀಸ್ ಇಲಾಖೆ ಅಥವಾ ಸ್ಥಳೀಯಾಡಳಿತ ಸಂಸ್ಥೆಗಳು ಮುಂದಾಗುತ್ತಿಲ್ಲ ಎಂಬ ದೂರು ಕೇಳಿ ಬರುತ್ತಿದೆ.

ಐಸಿಸ್‌ಗೆ ರಿಕ್ರೂಟ್ ನಡೆದಿದ್ದ ಪ್ರದೇಶ

2016ರಲ್ಲಿ ಐಸಿಸ್‌ಗೆ ರಿಕ್ರೂಟ್ ನಡೆದಿದ್ದ ಪ್ರದೇಶದಲ್ಲಿ ಚಂದೇರ ಪೊಲೀಸ್ ಠಾಣೆಯ ಪಡನ್ನ ಒಳಗೊಂಡಿತ್ತು. ಈ ಪ್ರದೇಶದ ಕೆಲವರು ಐಸಿಸ್ ಸೇರ್ಪಡೆಗೊಂಡಿರುವುದನ್ನು ಎನ್‌ಐಎ ಖಚಿತಪಡಿಸಿತ್ತು. ಕೇರಳದಿಂದ ನಾಪತ್ತೆಯಾಗಿ ಐಸಿಸ್ ಸೇರಿದವರಲ್ಲಿ ಪಡನ್ನ ನಿವಾಸಿಗಳಿದ್ದು, ಈ ಬಗ್ಗೆ ಚಂದೇರ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net