

ಮಂಜೇಶ್ವರ: ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು, ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಕಾಸರಗೋಡು ಸಂಸ್ಥೆಯ ಸಹಯೋಗದೊಂದಿಗೆ ಆ.24 ಹಾಗೂ 25ರಂದು ಸಿರಿಬಾಗಿಲು ಸಾಂಸ್ಕೃತಿಕ ಭವನದಲ್ಲಿ ತೆಂಕುತಿಟ್ಟು ಯಕ್ಷಮಾರ್ಗ ಶಿಬಿರ ಹಾಗೂ ಯಕ್ಷಗಾನ ಪ್ರದರ್ಶನ ಜರುಗಲಿದೆ.
24ರಂದು ಬೆಳಗ್ಗೆ 10.30ಕ್ಕೆ ಕರ್ನಾಟಕ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಶಿಬಿರ ಉದ್ಘಾಟಿಸಲಿದ್ದಾರೆ. ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದು, ಉಳಿಯತ್ತಾಯ ವಿಷ್ಣು ಆಸ್ರ ದೀಪ ಪ್ರಜ್ವಲನೆಗೈಯ್ಯುವರು. ಮುಖ್ಯಅತಿಥಿಗಳಾಗಿ ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್, ಕರ್ಗಲ್ಲು ವಿಶ್ವೇಶ್ವರ ಭಟ್ ಭಾಗವಹಿಸುವರು. ಬೆಳಗ್ಗೆ 11.30ರಿಂದ ಕರ್ಗಲ್ಲು ವಿಶ್ವೇಶ್ವರ ಭಟ್ ಅವರಿಂದ ಶಾಸ್ತ್ರೀಯ ನಾಟ್ಯ ಪ್ರಾತ್ಯಕ್ಷಿಕೆ, ಪ್ರಸ್ತುತಿ, ಪ್ರದರ್ಶನ, ಸಂವಾದ ಜರುಗಲಿದೆ.
ಮಧ್ಯಾಹ್ನ 2ರಿಂದ ತೆಂಕುತಿಟ್ಟು ಯಕ್ಷಗಾನ ನಾಟ್ಯದ ಪ್ರಾಥಮಿಕ ಹಂತದ ದಾಖಲೀಕರಣ, ಪ್ರಸಾರ, ಪ್ರಸ್ತುತಿ, ಪ್ರಾತ್ಯಕ್ಷಿಕೆ ಜರುಗಲಿದೆ. ಸಂಪನ್ಮೂಲ ವ್ಯಕ್ತಿಗಳಾಗಿ ತೆಂಕುತಿಟ್ಟಿನ ಅನುಭವಿ ಕಲಾವಿದರಾದ ರವಿಶಂಕರ ವಳಕ್ಕುಂಜ, ಲಕ್ಷ್ಮಣ ಕುಮಾರ್ ಮರಕಡ, ಡಾ.ಶ್ರುತ ಕೀರ್ತಿರಾಜ್ ಉಜಿರೆ, ಗಣೇಶ ಪಾಲೆಚ್ಚಾರು, ಶ್ರೀಕೃಷ್ಣ ಭಟ್ ದೇವಕಾನ, ರಾಮಮೂರ್ತಿ ಕುದ್ರೆಕ್ಕೋಡ್ಲು, ಗಣೇಶ ಭಟ್ ಬೆಳಾಲು, ರವಿ ಮುಂಡಾಜೆ, ರಂಜಿತ್ ಗೋಳಿಯಡ್ಕ, ರಾಮಕೃಷ್ಣ ಮಯ್ಯ ಸಿರಿಬಾಗಿಲು, ವಸಂತ ಗೌಡ ಕಾಯರ್ತಡ್ಕ ಭಾಗವಹಿಸಲಿದ್ದಾರೆ.
ಆ.25ರಂದು ಬೆಳಗ್ಗೆ 10.30ರಿಂದ ಶಿಬಿರಾರ್ಥಿಗಳಿಗೆ ಅಭ್ಯಾಸ ಶಿಬಿರ ಜರುಗಲಿದ್ದು ಮಧ್ಯಾಹ್ನ 1ರಿಂದ ಯಕ್ಷಬಳಗ ಹೊಸಂಗಡಿ ಮಂಜೇಶ್ವರ ತಂಡದಿಂದ ವಾದ-ಸಂವಾದ-ತಾಳಮದ್ದಳೆ ನಡೆಯಲಿದೆ. ಮಧ್ಯಾಹ್ನ 3ರಿಂದ ಸಮಾರೋಪ ಸಮಾರಂಭ ಜರುಗಲಿದ್ದು ಡಾ.ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸುವರು. ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು ಹಾಗೂ ಕಾಸರಗೋಡು ಬೊಂಬೆಯಾಟ ಬಳಗದ ಸಂಚಾಲಕ ಕೆ.ವಿ.ರಮೇಶ್ ಭಾಗವಹಿಸಲಿದ್ದಾರೆ. ಸಂಜೆ 5ರಿಂದ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಕಾಸರಗೋಡು ಅವರಿಂದ ಭಕ್ತ ಪ್ರಹ್ಲಾದ ಯಕ್ಷಗಾನ ಪ್ರದರ್ಶನ ಜರುಗಲಿದೆ.