ಸರ್ಕಾರಿ ಶಾಲೆಯಲ್ಲಿ ತೆನೆಹಬ್ಬ : ಬೇಸಾಯದ ಹಿಂದಿನ ಪರಿಶ್ರಮದ ಅರಿವು ಮೂಡಿಸಲು ವಿಭಿನ್ನ ಪ್ರಯತ್ನ

gadde
Published on

ಸ್ವಾತಿ ಬಾಳ್ತಿಲ್ಲಾಯ ಕೊಕ್ಕಡ

ಗದ್ದೆ ಬೇಸಾಯ ಮಾಡಿ ಸುದ್ದಿಯಾಗಿದ್ದ ಬೆಳ್ತಂಗಡಿ ತಾಲೂಕಿನ ಹೇವಾಜೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಈಗ ಸಾಂಪ್ರದಾಯಿಕವಾಗಿ ತೆನೆಹಬ್ಬ ಆಚರಿಸಿ ಬೇಸಾಯದ ಪರಿಪೂರ್ಣ ಪಾಠವನ್ನು ಮಕ್ಕಳಿಗೆ ಮಾಡಿದೆ.

ಮಕ್ಕಳು, ಪಾಲಕರು, ಹಳೇ ವಿದ್ಯಾರ್ಥಿಗಳು ಹಾಗೂ ಶಾಲಾಭಿಮಾನಿಗಳು ಸೇರಿ ತಳಿರು ತೋರಣಗಳಿಂದ ಶಾಲೆಯನ್ನು ಸಿಂಗರಿಸಿ ಹಬ್ಬದ ವಾತಾವರಣ ಸೃಷ್ಟಿಸಿದ್ದರು. ಮಕ್ಕಳು ಹಾಗೂ ಪಾಲಕರು ತೆನೆ ಪೂಜೆ ಮಾಡಿದರು. ಸಂಪ್ರದಾಯದಂತೆ ತೆನೆ, ಬಿದಿರಿನ ಎಲೆಗಳನ್ನು ಹಲಸು ಹಾಗೂ ಮಾವಿನ ಎಲೆಯಲ್ಲಿಟ್ಟು, ದಡ್ಡಾಲಿನ ನಾರಿನಿಂದ ಕಟ್ಟಿ ಬಾಗಿಲು, ತೆಂಗಿನಮರ, ಬಾಳೆಗಿಡ, ಅಕ್ಕಿ ಡಬ್ಬಿ, ವಾಹನಗಳು ಇವುಗಳಿಗೆಲ್ಲ ಕಟ್ಟಿದರು. ಮಕ್ಕಳ ತಾಯಂದಿರು ಹಬ್ಬದಡುಗೆಯನ್ನು ಮಾಡಿ, ಹೊಸ ಅಕ್ಕಿಯ ಸಾಂಪ್ರದಾಯಿಕ ಖಾದ್ಯವಾದ ಕಾಯಿ ಗಂಜಿಯ ಜತೆಗೆ, ಕೆಸುವಿನ ಬಳ್ಳಿ , ಕರಿಕೆಸುವಿನ ದಂಟು, ಹಲಸಿನ ಬೀಜ ಇನ್ನೂ ಮುಂತಾದ ವಿಶೇಷ ಪದಾರ್ಥಗಳನ್ನು ಬಳಸಿ ಬಗೆಬಗೆಯ ಸಾಂಪ್ರದಾಯಿಕ ಖಾದ್ಯಗಳನ್ನು ತಯಾರಿಸಿ ಹೊಸ ಅಕ್ಕಿ ಊಟ ಕೊಟ್ಟು ಮಕ್ಕಳನ್ನು ಸಂತೋಷಗೊಳಿಸಿದ್ದಾರೆ.

ನಮ್ಮ ದೇಶದ ಬೆನ್ನೆಲುಬು ಕೃಷಿ. ಬೇಸಾಯ ಮಾಡುವ ಬಗ್ಗೆ ತಿಳಿಸಿದಂತೆ, ತುಳುನಾಡಿನ ಸಂಪ್ರದಾಯ ತೆನೆಹಬ್ಬ ಆಚರಣೆಯನ್ನು ಮಕ್ಕಳಿಗೆ ತಿಳಿಸುವುದು ನಮ್ಮ ಉದ್ದೇಶವಾಗಿತ್ತು. ನಾಗರಾಜ್ ಬಿ.ಮುಖ್ಯಶಿಕ್ಷಕರು ಈ ವರ್ಷವೂ ನಾವು ಶಾಲೆಯಲ್ಲಿ ಗದ್ದೆ ಬೇಸಾಯ ಪದ್ಧತಿ ಮಕ್ಕಳಿಗೆ ತಿಳಿಸಿ, ಮಕ್ಕಳು ನೇಜಿ ನಾಟಿ ಮಾಡಿದ ನಂತರ ಗದ್ದೆ ಕೆಲಸದ ವಿವಿಧ ಹಂತವನ್ನು ನೋಡುತ್ತಿರುವುದನ್ನು ಗಮನಿಸಿದ್ದೇವೆ. ಬಹಳ ಸಂಭ್ರಮದಿಂದ ತೆನೆಹಬ್ಬ ಆಚರಿಸಿದ್ದು ಎಲ್ಲರಿಗೂ ಖುಷಿಯಾಗಿದೆ. ಗಣೇಶ್ ಪ್ರಸಾದ್ ಎಸ್‌ಡಿಎಂಸಿ ಅಧ್ಯಕ್ಷ ನಾವು ಅಂದು ನೆಟ್ಟಿದ್ದ ನೇಜಿ ಇಷ್ಟು ದೊಡ್ಡದಾಗಿ ಬೆಳೆದಿರುವುದು ನೋಡಿ ಖುಷಿ ಆಯಿತು. ಭತ್ತದಿಂದ ಅಕ್ಕಿಯನ್ನು ಮಾಡುತ್ತಾರೆ ಎಂದು ತಿಳಿದೆವು. ಅದಕ್ಕೆ ಪೂಜೆ ಮಾಡಿದೆವು. ಮೈತ್ರೇಯಿ ಭಟ್ 2ನೇ ತರಗತಿ ವಿದ್ಯಾರ್ಥಿನಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net