ಶೀಘ್ರವೇ ಟೆಂಡರ್ ಕರೆದು ಕಾಮಗಾರಿ ಆರಂಭ

ಶೀಘ್ರವೇ ಟೆಂಡರ್ ಕರೆದು ಕಾಮಗಾರಿ ಆರಂಭ
Published on

ಬೇಲೂರು: ತಾಲೂಕಿನ ಚೀಕನಹಳ್ಳಿಯಿಂದ-ಬಾಣಾವರದವರೆಗೆ 80 ಕಿಲೋಮೀಟರ್ ರಸ್ತೆ ವಿಸ್ತರಣೆ ಮತ್ತು ಅಭಿವೃದ್ಧಿ ಕಾಮಗಾರಿಗೆ ಕೇಂದ್ರ ಸರ್ಕಾರ 1200 ಕೋಟಿ ರೂ. ಅನುಮೋದನೆ ನೀಡಿದ್ದು, ಬಜೆಟ್ ಮತ್ತು ಪ್ಲಾೃನ್‌ನಲ್ಲೂ ಸೇರ್ಪಡೆಯಾಗಿದೆ. ಶೀಘ್ರವೇ ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು.

ತಾಲೂಕಿನ ಚೀಕನಹಳ್ಳಿಯಿಂದ ಬೇಲೂರು ಪಟ್ಟಣದವರೆಗೆ ರಾಷ್ಟ್ರೀಯ ಹೆದ್ದಾರಿ ರಸ್ತೆ ಅಭಿವೃದ್ಧಿ ಸಂಬಂಧಿಸಿದಂತೆ ಡಿಪಿಆರ್ ತಯಾರಿಕೆಗಾಗಿ ಮಂಗಳವಾರ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲಿಸಿ ಮಾತನಾಡಿದರು.

ಕೇಂದ್ರ ಭೂ ಸಾರಿಗೆ ಮಂತ್ರಿ ನಿತಿನ್ ಗಡ್ಕರಿ ಅವರಲ್ಲಿ ಮನವಿ ಮಾಡಿದ ಹಿನ್ನೆಲೆ, ಅನುಮೋದನೆ ನೀಡಿದ್ದಾರೆ. ಬೇಲೂರು ದೇಗುಲ ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿದ ಪ್ರವಾಸಿ ತಾಣ. ದೇಶ-ವಿದೇಶಗಳಿಂದ ಪ್ರವಾಸಿಗರು ಬರುತ್ತಾರೆ. ಇಲ್ಲಿನ ವಾಹನ ದಟ್ಟಣೆ ಎಲ್ಲರನ್ನು ಕಾಡುತ್ತದೆ. ಆದ್ದರಿಂದ ಪಟ್ಟಣದ ಒಳಗೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯನ್ನು ತುರ್ತಾಗಿ ವಿಸ್ತರಿಸಲು ಕೇಂದ್ರ ಮಂತ್ರಿಗಳನ್ನು ಭೇಟಿ ಮಾಡಿ ಮನವಿ ಮಾಡಲಾಗಿತ್ತು ಎಂದರು.

80 ಕಿಲೋಮೀಟರ್ ರಸ್ತೆ ಅಭಿವೃದ್ಧಿಗೆ ಅನುಮೋದನೆ ದೊರಕಿದೆ. ಡಿಪಿಆರ್ ತಯಾರಿಸಲು ಮತ್ತು ಎಲ್ಲೆಲ್ಲಿ ಯಾವ ಕಾಮಗಾರಿ ಮಾಡಿಸಬೇಕು ಎಂಬುದರ ಬಗ್ಗೆ ಅಧಿಕಾರಿಗಳು, ಸಾರ್ವಜನಿಕರಿಂದ ಸಲಹೆ ಪಡೆಯುತ್ತಿದ್ದೇವೆ. ಡಿಪಿಆರ್ ನಂತರ 6 ಹಂತದಲ್ಲಿ ಟೆಂಡರ್ ಪ್ರಕ್ರಿಯೆ ನಡೆಸಿ, ಸರ್ವೆ ನಂತರ ಲ್ಯಾಂಡ್‌ಗಳನ್ನು ವಶಕ್ಕೆ ಪಡೆದು ಪರಿಹಾರ ನೀಡಿದ ನಂತರದಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ ಎಂದರು.

ಪಟ್ಟಣದ ಮುಖ್ಯರಸ್ತೆಯ ಇಕ್ಕೆಲಗಳಲ್ಲೂ 10 ಮೀಟರ್ ಫುಟ್‌ಪಾತ್, ಪಾತ್ ವೇ, ಸೆಂಟರ್‌ನಲ್ಲಿ ಸ್ಟ್ರೀಟ್ ಲೈಟ್‌ಗಳನ್ನು ಅಳವಡಿಸಲು ಡಿಪಿಆರ್‌ನಲ್ಲಿ ಸೇರಿಸಲು ತಿಳಿಸಿದ್ದೇನೆ. ಬೇಲೂರಿನ ಜನರ ಕನಸಿನಂತೆ ಹೊಳೆಬೀದಿ ಮತ್ತು ಮುಖ್ಯರಸ್ತೆ ಕೆಲಸವು ಈ ವರ್ಷದಲ್ಲೇ ಪ್ರಾರಂಭವಾಗಲಿದೆ. ಇದರೊಂದಿಗೆ ಎರಡನೇ ಹಂತದಲ್ಲಿ ರಾಮೇನಹಳ್ಳಿ, ಸನ್ಯಾಸಿಹಳ್ಳಿ ಮಾರ್ಗದಲ್ಲಿ ನವಿಲಹಳ್ಳಿ ಗಡಿವರೆಗಿನ ಬೈಪಾಸ್ ರಸ್ತೆಗೂ ಡಿಪಿಆರ್ ಮಾಡಿಸಲು ಕ್ರಮ ಕೈಗೊಳ್ಳಲಾಗುವುದು. 1200 ಕೋಟಿ ರೂ.ನಲ್ಲಿ ನಗರದ ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಹಣದ ಅವಶ್ಯಕತೆ ಇದೆ. ಹಾಸನ ರಸ್ತೆ ಮೂಲಕ ಪಟ್ಟಣ ನೆಹರು ನಗರ, ಪ್ಲಾಂಟರ್ಸ್ ಕ್ಲಬ್‌ವರೆಗಿನ ಸಂಪರ್ಕ ರಸ್ತೆ ಪ್ಲಾೃನ್‌ನಲ್ಲಿ ಸೇರಿಲ್ಲ. ಇದನ್ನು ಸೇರಿಸುವುದಕ್ಕೆ ಕೇಂದ್ರ ಸಚಿವರಲ್ಲಿ ಮಾತನಾಡಲು ಮಾಜಿ ಸಚಿವ ಸಿ.ಟಿ.ರವಿ ಅವರೊಂದಿಗೆ ಮಾತನಾಡಿರುವುದಾಗಿ ತಿಳಿಸಿದರು.

ಮುದಿಗೆರೆಯಿಂದ ಹಾಸನದವರೆಗಿನ ರಸ್ತೆ ಕೆಲಸ ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆ. ಇದಕ್ಕಾಗಿ ಭೂ ಸಾರಿಗೆ ಸಚಿವರನ್ನು ಭೇಟಿ ಮಾಡಲಾಗುವುದು. ಇನ್ನು ಹೆಚ್ಚಿನ ಕೆಲಸ ಕಾರ್ಯಗಳ ಬಗ್ಗೆ ಜನಸಾಮಾನ್ಯರು ಸಲಹೆ ಸೂಚನೆಗಳನ್ನು ಕೊಟ್ಟರೆ ಅವುಗಳನ್ನು ಸ್ವೀಕರಿಸಿ ಕೆಲಸ ಮಾಡಿಸಲಾಗುವುದು ಎಂದರು.

ಪುರಸಭೆ ಅಧ್ಯಕ್ಷ ಎ.ಆರ್.ಅಶೋಕ್ ಮಾತನಾಡಿ, ಪುರಸಭೆಯಿಂದ ಎಲ್ಲ ಸಹಕಾರ ನೀಡಲಾಗುವುದು ಎಂದರು. ರಾಷ್ಟ್ರೀಯ ಹೆದ್ದಾರಿ ಉಪ ವಿಭಾಗದ ಯೋಜನಾಧಿಕಾರಿ ತರುಣ್, ಸರ್ವೆಯರ್ ಆಕಾಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net