ಎಳನೀರು ಕುಡಿಯಿರಿ ಆದ್ರೆ ಗಂಜಿ ಮಾತ್ರ ಕೇಳ್ಬೇಡಿ ಎನ್ನುತ್ತಿರುವ ವ್ಯಾಪಾರಿಗಳ ಉದ್ದೇಶವೇನು?

Tender Cocunut
Published on

ಮೈಸೂರು: ಮಹಾಮಾರಿ ಕರೊನಾ ವೈರಸ್​ ಬಂದಾಗಿನಿಂದ ಪ್ರತಿಯೊಬ್ಬರಲ್ಲೂ ಆರೋಗ್ಯ ಕುರಿತು ಭಾರಿ ಕಾಳಜಿ ವ್ಯಕ್ತವಾಗುತ್ತಿದ್ದು, ತಮ್ಮ ಜೀವನ ಶೈಲಿಯಲ್ಲಿ ಹಲವು ಬದಲಾವಣೆಗಳನ್ನು ತಂದುಕೊಂಡಿದ್ದಾರೆ ಎನ್ನುವುದಕ್ಕೆ ಈ ಒಂದು ಘಟನೆ ಉದಾಹರಣೆಯಾಗಿದೆ.

ಬೇಸಿಗೆ ತಣಿಸಲು ಅಥವಾ ತಂಪಾಗಿಸಲು ಬಹುತೇಕರು ಎಳನೀರು ಮೊರೆ ಹೋಗುತ್ತಾರೆ. ಎಳನೀರು ಕುಡಿಯುವುದು ಎಷ್ಟು ಚಂದವೋ, ಅದರ ಗಂಜಿ ತಿನ್ನುವುದು ಕೂಡ ಅನೇಕರಿಗೆ ಬಲು ಇಷ್ಟ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಕರೊನಾ ಅದಕ್ಕೂ ಬ್ರೇಕ್​ ಹಾಕಿದೆ.

ಹೌದು, ಸಾಂಸ್ಕೃತಿಕ ನಗರಿ ಮೈಸೂರಿನಲ್ಲೊಂದು ಅಘೋಷಿತ ನಿಯಮ ಪಾಲನೆಯಾಗುತ್ತಿದೆ. ಎಳನೀರು ಮಾತ್ರ ಕೊಡುವ ವ್ಯಾಪಾರಿಗಳು, ಗ್ರಾಹಕರು ಕೇಳಿದರೂ ಸಹ ಗಂಜಿ ಮಾತ್ರ ಕೊಡುತ್ತಿಲ್ಲ. ಎಳನೀರು ಚಿಪ್ಪು ಓಪನ್ ಮಾಡಲ್ಲ ಎಂದು ನಿರಾಕರಿಸುತ್ತಿದ್ದಾರೆ.

ಗ್ರಾಹಕರು ಚಿಪ್ಪಿಗೆ ತುಟಿಯಿಟ್ಟು ಎಳನೀರು ಕುಡಿಯುತ್ತಾರೆ. ಒಂದು ವೇಳೆ ಕರೊನಾ ವೈರಸ್ ಇದ್ದರೆ ಮಚ್ಚಿಗೆ ಸೋಂಕು ತಗುಲುತ್ತದೆ. ವ್ಯಾಪಾರಿ ಮೂಲಕ ಮತ್ತಷ್ಟು ಜನರಿಗೆ ಆತಂಕ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಗಂಜಿ ಕೊಡುವುದಕ್ಕೆ ತಾತ್ಕಾಲಿಕ ಬ್ರೇಕ್ ಹಾಕಿದ್ದೇವೆ ಎನ್ನುತ್ತಾರೆ ವ್ಯಾಪಾರಿಗಳು.

ಗಂಜಿ ಕೊಡಬಾರದು ಅಂತ ನಿಯಮವೇನೂ ಇಲ್ಲ. ಆದರೆ, ಮಹಾನಗರ ಪಾಲಿಕೆ, ಪೊಲೀಸ್ ಇಲಾಖೆಯಿಂದ ಮೌಖಿಕ ಸೂಚನೆ ಬಂದಿದೆ. ಈ ಬಗ್ಗೆ ಸ್ಪಷ್ಟನೆ ನೀಡಿದ ಮಹಾನಗರ ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ, ಪಾಲಿಕೆಯಿಂದ ಗಂಜಿ ಕೊಡಬಾರದು ಎಂಬ ಆದೇಶ ನೀಡಿಲ್ಲ ಎಂದಿದ್ದಾರೆ. ಆದರೂ ಅಘೋಷಿತ ನಿಮಯ ಮುಂದುವರಿದಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net