

ಶಿವಾನಂದ ತಗಡೂರು ಬೆಂಗಳೂರು
ಹೋಟೆಲ್ ಉದ್ಯಮ ಹಿಂದೆಂದೂ ಕಂಡು ಕೇಳರಿಯದಷ್ಟು ಕುಸಿದಿದ್ದು, ಈ ಉದ್ಯಮವನ್ನೇ ನಂಬಿಕೊಂಡಿದ್ದ 10 ಲಕ್ಷ ಕಾರ್ವಿುಕರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಹೋಟೆಲೋದ್ಯಮ ಎಂದರೆ ಲಾಡ್ಜಿಂಗ್, ಬಾರ್ ಆಂಡ್ ರೆಸ್ಟೋರೆಂಟ್, ಬೇಕರಿ ಎಲ್ಲವೂ ಸೇರಿಕೊಳ್ಳುತ್ತದೆ. ಇವೆಲ್ಲ ಸೇರಿ ರಾಜ್ಯದಲ್ಲಿ ಪ್ರತಿವರ್ಷ 5ರಿಂದ 6 ಸಾವಿರ ಕೋಟಿ ರೂ. ವಹಿವಾಟು ನಡೆಯುತ್ತಿದ್ದು, ರಾಜ್ಯ ಸರ್ಕಾರಕ್ಕೂ ದೊಡ್ಡ ಆದಾಯದ ಮೂಲವಾಗಿದೆ. ಆದರೀಗ, ಕರೊನಾ ಎಫೆಕ್ಟ್ ನಿಂದಾಗಿ ಕನಿಷ್ಠ ಇನ್ನೊಂದು ವರ್ಷ ಹೋಟೆಲ್ ಮತ್ತು ಲಾಡ್ಜಿಂಗ್ ಉದ್ಯಮಕ್ಕೆ ದೊಡ್ಡ ಹೊಡೆತ. ಜನರು ಜೀವಭಯ ಮತ್ತಿತರ ಕಾರಣದಿಂದ ಹೋಟೆಲ್-ಲಾಡ್ಜಿಂಗ್ಗೆ ತೆರಳುವುದು ಕಷ್ಟ. ಆದ್ದರಿಂದ ಈ ಉದ್ಯಮವನ್ನೇ ನಂಬಿ ಬದುಕು ಸಾಗಿಸುತ್ತಿರುವ ಲಕ್ಷಾಂತರ ಕುಟುಂಬಗಳು ಬೀದಿಪಾಲಾಗುವ ಸ್ಥಿತಿ ನಿರ್ವಣವಾಗಿದೆ.
15 ಸಾವಿರ ಹೋಟೆಲ್: ರಾಜ್ಯದಲ್ಲಿ 15 ಸಾವಿರಕ್ಕೂ ಹೆಚ್ಚು ಹೋಟೆಲ್ಗಳಿದ್ದು, ಅದರಲ್ಲಿ ಅತ್ಯಧಿಕ ಎಂದರೆ 6 ಸಾವಿರ ಹೋಟೆಲ್ ಬೆಂಗಳೂರಿನಲ್ಲಿಯೇ ನೆಲೆಯೂರಿವೆ. ಇನ್ನು ಮೈಸೂರು, ಮಂಗಳೂರು, ಹುಬ್ಬಳ್ಳಿ, ಬೆಳಗಾವಿಯಲ್ಲೂ ಹೆಚ್ಚಿನ ಪ್ರಮಾಣದಲ್ಲಿವೆ. ಉಳಿದಂತೆ ಜಿಲ್ಲೆ, ತಾಲೂಕು, ಹೋಬಳಿ ಕೇಂದ್ರದಲ್ಲೂ ಹೋಟೆಲ್ಗಳು ನೆಲೆ ವಿಸ್ತರಿಸಿಕೊಂಡಿವೆ. ಒಂದು ಅಂದಾಜಿನ ಪ್ರಕಾರ, ರಾಜ್ಯದಲ್ಲಿ ವಸತಿಸಹಿತ (ಲಾಡ್ಜಿಂಗ್) ಹೋಟೆಲ್ಗಳು 10 ಸಾವಿರ ಇವೆ. ಯಾವುದಾದರೂ ನಗರಕ್ಕೆ ವಲಸೆ ಬರುವ ಕಾರ್ವಿುಕರಿಗೆ ಮೊದಲು ನೆಲೆ ಸಿಗುವ ಸ್ಥಳ ಹೋಟೆಲ್, ಈಗ ಅವರಿಗೆ ಕೆಲಸವಿಲ್ಲ. ಮತ್ತೊಂದೆಡೆ 8 ಸಾವಿರ ಬಾರ್ ಆಂಡ್ ರೆಸ್ಟೋರೆಂಟ್ಸ್ ಇದ್ದು, ಇವುಗಳನ್ನೇ ನಂಬಿರುವ ಕಾರ್ವಿುಕರ ದೊಡ್ಡ ಸಮೂಹವೇ ಇದೆ. ಈಗ ಪಾರ್ಸೆಲ್ ನೀಡಲಷ್ಟೇ ಅವಕಾಶ ಕೊಟ್ಟಿರುವುದರಿಂದ ಬಹಳಷ್ಟು ಕಾರ್ವಿುಕರಿಗೆ ಕೆಲಸ ಇಲ್ಲದಂತಾಗಿದೆ. ರಾಜ್ಯದಲ್ಲಿ 17 ಸಾವಿರ ಬೇಕರಿಗಳಿವೆ. ಈ ಉದ್ಯಮ ಅವಲಂಭಿಸಿದ ಎಲ್ಲರೂ ಕರೊನಾ ಸಂಕಷ್ಟದಲ್ಲಿ ಸಿಲುಕಿ ಕೊಂಡಿದ್ದಾರೆ. ಮುಂದೇನು ಎನ್ನುವ ದಾರಿ ಕಾಣದೆ ಕಂಗಾಲಾಗಿದ್ದಾರೆ.
ಪರಸ್ಪರ ಅಂತರ ಮರೆತ ಕೈ ಕಾರ್ಯಕರ್ತರು
ಕೊಪ್ಪಳ: ವಿಪಕ್ಷ ನಾಯಕ ಸಿದ್ದರಾಮಯ್ಯ ನಗರಕ್ಕೆ ಆಗಮಿಸಿದ್ದ ವೇಳೆ ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದ ಕಾರ್ಯಕರ್ತರು ಪರಸ್ಪರ ಅಂತರ ಕಾಪಾಡಿಕೊಳ್ಳುವುದನ್ನು ಮರೆತು, ನಿಯಮ ಉಲ್ಲಂಘಿಸಿದರು. ವಿಮಾನ ನಿಲ್ದಾಣದಿಂದ ಪ್ರವಾಸಿ ಮಂದಿರಕ್ಕೆ ಸಿದ್ದರಾಮಯ್ಯ ಆಗಮಿಸುತ್ತಿದ್ದಂತೆ ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಜಮಾಯಿಸಿದರು. ಸುದ್ದಿಗೋಷ್ಠಿ ನಡೆಯುವಾಗಲೂ ಅವರ ಹಿಂದೆ 50ಕ್ಕೂ ಅಧಿಕ ಜನ ನಿಂತಿದ್ದರು. ಅನೇಕರು ಒಳ ನುಗ್ಗುತ್ತಿರುವುದನ್ನು ತಡೆಯಲು ಪೊಲೀಸರು ಸಾಕಷ್ಟು ಪ್ರಯತ್ನಿಸಿದರೂ ಫಲಿಸಲಿಲ್ಲ. ಶಾಲೆ ಆರಂಭದ ಬಗ್ಗೆ ಮಾತನಾಡುವಾಗ ಸಿದ್ದರಾಮಯ್ಯ, ಮಕ್ಕಳು ಪರಸ್ಪರ ಅಂತರ ಕಾಯ್ದುಕೊಳ್ಳುವಂತೆ ಸರ್ಕಾರ ಕ್ರಮ ವಹಿಸಬೇಕು ಎಂದು ಉಪದೇಶಿಸಿದರು. ಆದರೆ, ಅವರ ಹಿಂದೆಯೇ ಇರುವ ಕಾರ್ಯಕರ್ತರಿಂದ ಈ ನಿಯಮ ಉಲ್ಲಂಘನೆಯಾಗಿದ್ದನ್ನು ಗಮನಿಸಲಿಲ್ಲ. ಸುದ್ದಿಗೋಷ್ಠಿ ಮುಗಿಸಿ ತೆರಳುವಾಗ ಕೆಲವರು ಸೆಲ್ಪಿ ತೆಗೆದುಕೊಳ್ಳಲು ಓಡಾಡುತ್ತಿದ್ದದ್ದು ಕಂಡುಬಂತು.
ಮೃತ ವ್ಯಕ್ತಿಯಲ್ಲಿ ಸೋಂಕು
ಗದಗ: ಮೃತಪಟ್ಟ ವ್ಯಕ್ತಿಗೆ ಸೋಂಕು ಇರುವುದು ನಂತರ ಖಚಿತವಾದ ಘಟನೆ ನಡೆದಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ತಾಲೂಕಿನ ಲಕ್ಕುಂಡಿ ಗ್ರಾಮದ 44 ವರ್ಷದ ವ್ಯಕ್ತಿಯೊಬ್ಬರು ಹುಬ್ಬಳ್ಳಿ ಕಿಮ್ಸ್ನಲ್ಲಿ ಮೃತಪಟ್ಟಿದ್ದಾರೆ. ಅವರ ಗಂಟಲ ದ್ರವ ಮಾದರಿಯ ವೈದ್ಯಕೀಯ ವರದಿ ನಂತರ ಬಂದಿದ್ದು, ಕರೊನಾ ಸೋಂಕು ಇರುವುದು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದ್ದಾರೆ. ಕಳೆದ ಒಂದು ವಾರದಿಂದ ಪಾಸಿಟಿವ್ ಪ್ರಕರಣಗಳು ಇಲ್ಲದೆ ನೆಮ್ಮದಿಯಿಂದ ಇದ್ದ ಜಿಲ್ಲೆಯ ಜನರಿಗೆ ಕರೊನಾ ವೈರಸ್ ಆಘಾತ ನೀಡಿದೆ. ಗ್ರಾಮೀಣ ಭಾಗಕ್ಕೂ ವೈರಸ್ ಕಾಲಿಟ್ಟಿದ್ದರಿಂದ ಜನ ಭಯಪಡುವಂತಾಗಿದೆ. ಲಕ್ಕುಂಡಿ ಗ್ರಾಮಸ್ಥರು ರಸ್ತೆಗಳಲ್ಲಿ ಮುಳ್ಳು ಹಾಕಿ ವಾಹನ ಸಂಚಾರ ಬಂದ್ ಮಾಡಿದ್ದಾರೆ. ತಮ್ಮ ಮನೆಯ ಮುಂದೆ ಯಾರೂ ಸಂಚರಿಸದಂತೆ ಜಾಗೃತಿ ವಹಿಸುತ್ತಿದ್ದಾರೆ.
ಕುವೈತ್ನಲ್ಲಿ ಕನ್ನಡಿಗ ಸಾವು
ಕಾರವಾರ: ಕರ್ನಾಟಕ ಮೂಲದ ವ್ಯಕ್ತಿ ಕುವೈತ್ನಲ್ಲಿ ಕರೊನಾದಿಂದ ಮೃತಪಟ್ಟಿದ್ದಾರೆ. ಕಾರವಾರ ತಾಲೂಕಿನ ಸದಾಶಿವಗಡ ಮೂಲದ ಸುಶಾಂತ ಗಜಾನನ ಕಡವಾಡಕರ್ (39) ಮೃತರು. ಕುವೈತ್ನ ಹೋಟೆಲ್ನಲ್ಲಿ ರಿಸೆಪ್ಶನಿಸ್ಟ್ ಆಗಿದ್ದ ಅವರಿಗೆ ಮೇ 24ರಂದು ಜ್ವರ ಕಾಣಿಸಿಕೊಂಡಿತ್ತು. 27ರಂದು ಉಸಿರಾಟ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಮಂಗಳವಾರ ಮೃತಪಟ್ಟಿದ್ದು, ಶಿಷ್ಟಾಚಾರದಂತೆ ಕುವೈತ್ನಲ್ಲೇ ಅಂತ್ಯಸಂಸ್ಕಾರ ನಡೆಸಲಾಗಿದೆ. ಸುಶಾಂತರ ಪತ್ನಿ ಮತ್ತು ಮಕ್ಕಳು ಭಟ್ಕಳದಲ್ಲಿ ವಾಸವಾಗಿದ್ದಾರೆ.