

ಮೈಸೂರು: ಮೈಸೂರನ್ನು ಹಸಿರುಮಯಗೊಳಿಸಲು ಸಂಕಲ್ಪ ತೊಟ್ಟಿರುವ ‘ಹಸಿರು ಮೈಸೂರು’ ತಂಡ ಲಕ್ಷ ವೃಕ್ಷ ಆಂದೋಲನದ ಭಾಗವಾಗಿ ಪ್ರಸಕ್ತ ವರ್ಷ 15 ಸಾವಿರ ಸಸಿಗಳನ್ನು ನಗರದಲ್ಲಿ ನೆಡಲು ಸಿದ್ಧತೆ ಕೈಗೊಂಡಿದೆ.
ಎಚ್.ವಿ.ರಾಜೀವ್ ಸ್ನೇಹ ಬಳಗ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿ ಹಾಗೂ ಜಿಲ್ಲಾ ಪತ್ರಕರ್ತರ ಸಂಘವನ್ನು ಒಳಗೊಂಡ ‘ಹಸಿರು ಮೈಸೂರು’ ತಂಡ ನಗರದ ನಂಜನಗೂಡು ರಸ್ತೆಯ ದಳವಾಯಿ ಕೆರೆಯ ಬಳಿ ಇರುವ ತೋಟದಲ್ಲಿ 15 ಸಾವಿರ ಸಸಿಗಳನ್ನು ಬೆಳೆಸಿದ್ದು, ಪ್ರತಿಯೊಂದು ಗಿಡಗಳು 7 ರಿಂದ 10 ಅಡಿ ಎತ್ತರದವರೆಗೆ ಬೆಳೆದು ನಿಂತಿವೆ. ನಗರದಲ್ಲಿ ಒಟ್ಟು 1 ಲಕ್ಷ ಸಸಿಗಳನ್ನು ನೆಟ್ಟು ಬೆಳೆಸುವ ಗುರಿಯನ್ನು ಹಸಿರು ಮೈಸೂರು ತಂಡ ಹೊಂದಿದ್ದು, ಪ್ರಥಮ ಬಾರಿಗೆ 2019ರಲ್ಲಿ 15 ಸಾವಿರ ಸಸಿಗಳನ್ನು ನೆಡಲಾಯಿತು. ಪ್ರಸಕ್ತ ವರ್ಷ ಸಹ 15 ಸಾವಿರ ಸಸಿಗಳನ್ನು ಬೆಳೆಸಲಾಗಿದೆ.
ನಗರದ ವರ್ತುಲ ರಸ್ತೆ ವ್ಯಾಪ್ತಿಯೊಳಗೆ ಈ ಸಸಿಗಳನ್ನು ಬೆಳೆಸಿ ಮೈಸೂರನ್ನು ಹಸಿರುಮಯಗೊಳಿಸಲು ಉದ್ದೇಶಿಸಲಾಗಿದೆ. ಮೈಸೂರಿನಲ್ಲಿ ಸಸಿ ನೆಡಲು ಯಾರು ಬೇಕಾದರೂ ಉಚಿತವಾಗಿ ಇಲ್ಲಿಂದ ಸಸಿಗಳನ್ನು ಪಡೆದುಕೊಳ್ಳಬಹುದು. ಇಲ್ಲಿ ಬೆಳೆಸಿರುವ ಸಸಿಗಳು ಸಾಕಷ್ಟು ಎತ್ತರಕ್ಕೆ ಬೆಳೆದಿರುವ ಹಿನ್ನೆಲೆಯಲ್ಲಿ ಪ್ರಕೃತಿಯೊಂದಿಗೆ ಹೊಂದಿಕೊಂಡು ಬದುಕುಳಿಯುತ್ತವೆ. ನಾವು ನೆಟ್ಟ ಗಿಡಗಳು ಶೇ.98 ರಷ್ಟು ಬದುಕುಳಿದಿವೆ ಎಂದು ಎಚ್.ವಿ.ರಾಜೀವ್ ಬಳಗದ ಸಂಸ್ಥಾಪಕ ಎಚ್.ವಿ.ರಾಜೀವ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹಸಿರು ಮೈಸೂರು ತಂಡವು ದೀರ್ಘ ಕಾಲ ಬಾಳುವಂತಹ ಹಲಸು, ಬೀಟೆ, ನೇರಳೆ, ಬೇವು, ಕಾಡುಬಾದಾಮಿ, ಸಂಪಿಗೆ, ಬಸವನಪಾದ, ಅರಳಿ, ಮಹಾಗನಿ ಮುಂತಾದ ಗಿಡಗಳನ್ನು ಬೆಳೆಸಿದೆ. ನಮ್ಮ ಪರಿಸರಕ್ಕೆ ಹೊಂದಿಕೊಂಡು ದೀರ್ಘಕಾಲ ಬದುಕುವ ಮರಗಳನ್ನು ಹೆಚ್ಚಾಗಿ ಬೆಳೆಸುತ್ತಿದ್ದೇವೆ. ಮಳೆ, ಗಾಳಿಗೆ ಮುರಿದು ಬೀಳುವ ದುರ್ಬಲ ಮರಗಳನ್ನು ನಾವು ಬೆಳೆಸುತ್ತಿಲ್ಲ ಎಂದು ತಿಳಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ವಿ.ವಿಜಯಕುಮಾರ್ ನಾಗನಾಳ ಮಾತನಾಡಿ, ಮೈಸೂರಿನಲ್ಲಿ ನಮ್ಮ ಸಂಸ್ಥೆಗೆ ಸೇರಿದ 2,500 ಸ್ವ-ಸಹಾಯ ಸಂಘಗಳು ಇವೆ. ಈ ಸಂಘಗಳ ಮೂಲಕ ಹಸಿರು ಮೈಸೂರು ತಂಡ ನೀಡುವ ಗಿಡಗಳನ್ನು ನೆಟ್ಟು ಬೆಳೆಸುತ್ತಿದ್ದೇವೆ. ನಮ್ಮ ಸಂಸ್ಥೆ ಹಿನಕಲ್‌ನಲ್ಲಿ ಅಭಿವೃದ್ಧಿ ಪಡಿಸಿದ ಕೆರೆಯ ಸುತ್ತ 250 ಗಿಡಗಳನ್ನು ಕಳೆದ ವರ್ಷ ನೆಡಲಾಗಿದ್ದು, ಗಿಡಗಳು ಅಲ್ಲಿನ ಪರಿಸರಕ್ಕೆ ಹೊಂದಿಕೊಂಡು ಉತ್ತಮವಾಗಿ ಬೆಳೆದಿವೆ ಎಂದರು.
ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿ ನಗರ ಸಂಘಟನಾ ಪ್ರಮುಖ್ ನಾಗಭೂಷಣ್ ಮಾತನಾಡಿ, ನಗರದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯು ನೂರಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿವೆ. ಶಾಖೆಗೆ ಆಗಮಿಸುವ ಪ್ರತಿಯೊಬ್ಬರಿಗೆ ಕೇವಲ ಯೋಗ ಶಿಕ್ಷಣ ಹೇಳಿಕೊಡುವುದು ಮಾತ್ರವಲ್ಲದೆ ಅವರಲ್ಲಿ ಪರಿಸರ ಕಾಳಜಿಯನ್ನು ಸಹ ಮೂಡಿಸುತ್ತಿದ್ದೇವೆ. ನಮ್ಮ ಸದಸ್ಯರ ಮೂಲಕ ಈಗಾಗಲೇ ವಿವಿಧ ಬಡಾವಣೆಗಳಲ್ಲಿ ನೂರಾರು ಗಿಡಗಳನ್ನು ನೆಟ್ಟು ಬೆಳೆಸಿದ್ದೇವೆ ಎಂದು ತಿಳಿಸಿದರು.
ಮಾಜಿ ಮೇಯರ್ ಬಿ.ಎಲ್. ಭೈರಪ್ಪ ಮಾತನಾಡಿ, ನಗರದಲ್ಲಿ ನಗರ ಪಾಲಿಕೆ ಹಾಗೂ ಅರಣ್ಯ ಇಲಾಖೆ ಪ್ರತಿವರ್ಷ ಸಸಿಗಳನ್ನು ನೆಟ್ಟು ಬೆಳೆಸುವ ಕಾರ್ಯ ಕೈಗೊಳ್ಳುತ್ತದೆ. ಆದರೆ, ಅವರು ಸಣ್ಣ ಸಸಿಗಳನ್ನು ನೆಡುತ್ತಿರುವ ಹಿನ್ನೆಲೆಯಲ್ಲಿ ಅವುಗಳು ಪರಿಸರಕ್ಕೆ ಹೊಂದಿಕೊಳ್ಳದೆ ಸಾವಿಗೀಡಾಗುತ್ತವೆ. ಆದರೆ, ಹಸಿರು ಮೈಸೂರು ತಂಡ ಬೆಳೆಸುತ್ತಿರುವ ಗಿಡಗಳು ಇತರರಿಗೆ ಮಾದರಿಯಾಗಿದೆ ಎಂದರು.
ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ. ಮಹೇಂದ್ರ ಮಾತನಾಡಿ, ನಗರದಲ್ಲಿ ಸಸಿಗಳನ್ನು ನೆಟ್ಟು ಬೆಳೆಸಲು ಇಚ್ಛಿಸುವ ಯಾರು ಬೇಕಾದರೂ ಹಸಿರು ಮೈಸೂರು ತಂಡವನ್ನು (93530 06616) ಸಂಪರ್ಕಿಸಬಹುದು. ಎಪಿಎಂಸಿ, ಮುಡಾ, ಎನ್‌ಐಇ ಕಾಲೇಜು ಸೇರಿದಂತೆ ವಿವಿಧ ಕಡೆಗಳಿಂದ ಈ ಬಾರಿ ಸಸಿಗಳಿಗೆ ಬೇಡಿಕೆ ಬಂದಿದೆ. ಎನ್‌ಐಇ ಕಾಲೇಜಿನವರು ರಸ್ತೆ ಬದಿಯಲ್ಲಿ ಹನಿ ನೀರಾವರಿ ಮೂಲಕ ಸಸಿಗಳನ್ನು ಬೆಳೆಸಲು ಯೋಜನೆ ರೂಪಿಸಿದ್ದು, ಇದು ನಗರದ ಮಟ್ಟಿಗೆ ಹೊಸ ಪ್ರಯೋಗವಾಗಿದೆ ಎಂದರು.