

ಹಾಸನ: ತಾಲೂಕಿನ ಮೊಸಳೆ ಹೊಸಳ್ಳಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದ ದುರಂತಕ್ಕೆ ಪೊಲೀಸ್ ವೈಫಲ್ಯವೇ ಕಾರಣ ಎಂದು ಮತ್ತೆ ಆರೋಪಿಸಿದ ಮಾಜಿ ಸಚಿವ ಎಚ್.ಡಿ.ರೇವಣ್ಣ, ತಪ್ಪಿತಸ್ಥರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಘಟನೆ ಸಂಬಂಧ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಅವರ ಹೇಳಿಕೆಯನ್ನೂ ನೋಡಿದ್ದೇನೆ. ಆದರೆ ನನ್ನ ಪ್ರಕಾರ ಪೊಲೀಸ್ ಇಲಾಖೆ ವೈಫಲ್ಯದಿಂದಲೇ ದುರಂತ ಘಟಿಸಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ವಿದ್ಯಾರ್ಥಿಗಳು ಸೇರಿ ಹತ್ತು ಜನರು ಮೃತಪಟ್ಟಿದ್ದಾರೆ. ಹಾಗಾಗಿ ಹೆಚ್ಚು ಪರಿಹಾರ ಕೊಡಿ ಎಂದು ಒತ್ತಾಯಿಸುತ್ತಿದ್ದೇನೆ. ಪೊಲೀಸ್ ಇಲಾಖೆ ಸರ್ಕಾರದ ಅಡಿಯಲ್ಲಿ ಬರಲಿದ್ದು, ಇದು ಸರ್ಕಾರದ ವೈಫಲ್ಯ ಕೂಡ ಎಂದು ಕಿಡಿಕಾರಿದರು.
ಗಣಪತಿ ಬಿಡುವಾಗ ಐನೂರು ಮೀಟರ್ ಹಿಂದೆ ಬ್ಯಾರಿಕೇಡ್ ಹಾಕಿ ಇಬ್ಬರು ಪೊಲೀಸರನ್ನು ಹಾಕಬೇಕಿತ್ತು. ಮೆರವಣಿಗೆ ಹೋಗುವವರೆಗೂ ಟ್ರಾಫಿಕ್ ಬಂದ್ ಮಾಡಬಹುದಿತ್ತು. ಆದರೆ ಹಾಗೆ ಮಾಡಲಿಲ್ಲ, ಮಾಡಿದ್ದರೆ ಹತ್ತು ಜನ ಮೃತಪಡುವುದನ್ನು ತಪ್ಪಿಸಬಹುದಿತ್ತು ಎಂದರು.
ದುರಂತದ ಬಗ್ಗೆ ತನಿಖೆ ಏನಾಗಿದೆ ಎಂದು ಸಾರ್ವಜನಿಕರ ತಿಳಿಸಿ, ಎಲ್ಲರಿಗೂ ವಿಮೆ ಹಣ ಬರುವಂತೆ ಮಾಡಬೇಕು. ಈ ಘಟನೆಯಲ್ಲಿ ಯಾರದ್ದು ತಪ್ಪಿದೆ ಎಂದು ಗೃಹ ಸಚಿವರೇ ಸ್ಥಳಕ್ಕೆ ಬಂದು ಪರಿಶೀಲಿಸಲಿ ಎಂದು ಆಗ್ರಹಿಸಿದ ಅವರು, ಐದಾರು ಸಾವಿರ ಜನ ಸೇರುತ್ತಾರೆ, ನಾಲ್ಕು ಸಾವಿರ ವಿದ್ಯಾರ್ಥಿಗಳಿರುವ ಗ್ರಾಮ, ಹೀಗಾಗಿ ಮೊದಲೇ ಎಸ್ಪಿ ಅವರು ಸಭೆ ನಡೆಸಬೇಕಿತ್ತು, ಎಸ್‌ಬಿ ಡ್ಯೂಟಿಯವರು ಏನು ವರದಿ ನೀಡಿದ್ದರು. ಯಾವ ಅಧಿಕಾರಿಯದ್ದು ತಪ್ಪಿದೆಯೊ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಅಮಾಯಕರನ್ನು ಕರೆತಂದು ಪೊಲೀಸರು ಹಲ್ಲೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದ ರೇವಣ್ಣ, ದುದ್ದ ಮಹಿಳಾ ಪಿಎಸ್‌ಐ ಅಮಾಯಕನ ಶರ್ಟ್ ಬಿಚ್ಚಿಸಿ ಹೊಡೆದಿದ್ದಾರೆ. ಒಂದು ವಾರ ಗಡುವು ನೀಡಿದ್ದೇನೆ. ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳದಿದ್ದರೆ ನಮ್ಮ ಶಾಸಕರೆಲ್ಲ ಚರ್ಚಿಸಿ ಮುಂದೆ ಏನು ಮಾಡಬೇಕೆಂದು ತೀರ್ಮಾನಿಸುತ್ತೇನೆ ಎಂದು ಹೇಳಿದರು.