

ಹುಣಸೂರು: ಪ್ರಸ್ತುತ ಸಾಲಿನಲ್ಲಿ ಈವರೆಗೆ ತಾಲೂಕಿನಲ್ಲಿ 10 ಬಾಲ್ಯವಿವಾಹ ಪ್ರಕರಣಗಳನ್ನು ಪತ್ತೆಹಚ್ಚಿದ್ದು, ಈ ಪೈಕಿ 6 ಪ್ರಕರಣಗಳನ್ನು ತಡೆಹಿಡಿಯಲಾಗಿದೆ. 4 ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ (ಸಿಡಿಪಿಒ)ಹರೀಶ್ ತಿಳಿಸಿದರು.
ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಬುಧವಾರ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಮನ್ವಯ ಸಮಿತಿ ಸಭೆಯಲ್ಲಿ ಮಾಹಿತಿ ನೀಡಿದ ಅವರು, ತಾಲೂಕಿನಲ್ಲಿ ಅಪೌಷ್ಟಿಕತೆಗೆ ಒಳಗಾಗಿರುವ 31 ಮಕ್ಕಳನ್ನು ಗುರುತಿಸಲಾಗಿದ್ದು, ಸೂಕ್ತ ಪೌಷ್ಟಿಕ ಆಹಾರಗಳ ವಿತರಣೆಗೆ ಕ್ರಮವಹಿಸಲಾಗಿದೆ. ಸುಕನ್ಯಾ ಸಮೃದ್ಧಿ ಯೋಜನೆಯಡಿ ಒಟ್ಟು 1,690 ಅರ್ಜಿಗಳು ಬಂದಿದ್ದು, 990 ಪಾಸ್ ಪುಸ್ತಕ ವಿತರಣೆ ಮಾಡಲಾಗಿದೆ. ಪೋಷಣ್ ಅಭಿಯಾನ ಯೋಜನೆಯಡಿ 16,890 ಗರ್ಭಿಣಿ, ಬಾಣಂತಿಯರನ್ನು ಗುರುತಿಸಿ ಎಲ್ಲರಿಗೂ ಪೌಷ್ಟಿಕ ಆಹಾರ ವಿತರಿಸಲು ಕ್ರಮವಹಿಸಲಾಗಿದೆ ಎಂದರು.
26 ಕೌಟುಂಬಿಕ ದೌರ್ಜನ್ಯ ಪ್ರಕರಣಗಳು: ತಾಲೂಕಿನಲ್ಲಿ 26 ಕೌಟುಂಬಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದು, 23 ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥ ಮಾಡಲಾಗಿದೆ. 3 ಪ್ರಕರಣಗಳನ್ನು ನ್ಯಾಯಾಲಯದಲ್ಲಿ ದಾಖಲಿಸಲಾಗಿದೆ. ಮಾತೃ ವಂದನಾ ಯೋಜನೆಯಡಿ 1,925 ಅರ್ಜಿಗಳು ಸ್ವೀಕೃತವಾಗಿದ್ದು, 1,886 ಮಂಜೂರಾಗಿವೆ. ಇಲಾಖೆಯ ಯೋಜನೆಗಳ ಅನುಷ್ಠಾನಕ್ಕೆ ಎಲ್ಲ ಇಲಾಖೆಗಳ ಸಹಕಾರ ಬೇಕು ಅಗತ್ಯ ಕೋರಿದರು.
ಗಂಭೀರವಾಗಿ ಪರಿಗಣಿಸಿ: ಸಮಿತಿ ಸದಸ್ಯ, ಬೆಳಕು ಸೇವಾ ಸಂಸ್ಥೆಯ ಮುಖ್ಯಸ್ಥ ನಿಂಗರಾಜ ಮಲ್ಲಾಡಿ ಮಾತನಾಡಿ, ಹುಣಸೂರು ನಗರವ್ಯಾಪ್ತಿಯಲ್ಲಿ ಗುಜರಿಯಲ್ಲಿ ಬಾಲಕಾರ್ಮಿಕರು ದುಡಿಯತ್ತಿದ್ದು, ಅವರನ್ನು ರಕ್ಷಿಸುವ ಮತ್ತು ಶಿಕ್ಷಣ ನೀಡುವ ಕಾರ್ ನಡೆಸಬೇಕಿದೆ. ತಾಲೂಕಿನ ಹಾಡಿಗಳಲ್ಲಿ ಬಾಲ್ಯವಿವಾಹ ಪದ್ಧತಿ ಜಾರಿಯಲ್ಲಿದ್ದು ಅಲ್ಲಿ ಅರಿವು ಮೂಡಿಸುವ ಕಾರ್ಯ ಸತತವಾಗಿ ನಡೆಯಬೇಕಿದೆ. ಅನಾಥ ಮಕ್ಕಳು ಮತ್ತು ಬಡತನಕ್ಕೆ ಸಿಲುಕಿರುವ ಕುಟುಂಬದ ಬಾಲಕರು ಬೀದಿಗೆ ಬೀಳುವ ಪರಿಸ್ಥಿತಿ ಇದ್ದು ತಾಲೂಕು ಆಡಳಿತ ಗಮನಹರಿಸಬೇಕೆಂದು ಒತ್ತಾಯಿಸಿದರು.
ಕಳವಳಕಾರಿ: ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಮಂಜುನಾಥ್ ಮಾತನಾಡಿ, ಇಷ್ಟೊಂದು ಆಡಳಿತದ ವ್ಯವಸ್ಥೆಯಿದ್ದರೂ ಚಿಕ್ಕವಯಸ್ಸಿನಲ್ಲೇ ಬಾಲ್ಯ ವಿವಾಹ ಪ್ರಕರಣಗಳು ನಡೆದಿರುವುದು ಕಳವಳಕಾರಿ. ಅವರಿಗೆ ಕಾನೂನಿನ ಅರಿವು ಇರಲಿಲ್ಲವೇ? ಬಾಲ್ಯವಿವಾಹಗಳು ನಡೆಯಲು ಆ ಕುಟುಂಬಗಳ ಸಾಮಾಜಿಕ ಸಮಸ್ಯೆಗಳೇನು ಎಂಬುದರ ಬಗ್ಗೆ ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳು ಸಮನ್ವಯತೆಯಿಂದ ಅಧ್ಯಯನ ಮಾಡಿ ಜನರಲ್ಲಿ ಜಾಗೃತಿ ಮೂಡಿಸಬೇಕು. ತಾಲೂಕಿನಲ್ಲಿ ಬಾಲ್ಯವಿವಾಹ ಪ್ರಕರಣವನ್ನು ಶೂನ್ಯಕ್ಕೆ ಇಳಿಸಬೇಕು ಎಂದರು.
ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ವೀಣಾ, ಮಹಿಳಾ ಸಂರಕ್ಷಣಾಧಿಕಾರಿ ಜಯಂತಿ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ರಾಜೇಶ್ವರಿ, ಶಿಕ್ಷಣ ಸಂಯೋಜಕ ಕುಮಾರಸ್ವಾಮಿ, ಕಾರ್ಮಿಕ ಇಲಾಖೆ ಅಧಿಕಾರಿ ಭಾಸ್ಕರ್, ಜಿಲ್ಲಾ ಮಕ್ಕಳ ರಕ್ಷಣಾ ಇಲಾಖೆಯ ರಘು, ಎಎಸ್‌ಐಗಳಾದ ಲಕ್ಷ್ಮಮ್ಮ, ರಾಘವೇಂದ್ರ, ತಿಮ್ಮರಾಜನಾಯ್ಕ ಇತರರು ಹಾಜರಿದ್ದರು.