

ಉಪ್ಪಿನಂಗಡಿ: ಹೆದ್ದಾರಿ ವಿಸ್ತರಣೆ ಕಾಮಗಾರಿಯಿಂದ ಕುಮಾರಾಧಾರಾ ಸೇತುವೆ ಬಳಿ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ದೇವಾಲಯಕ್ಕೆ ಇದ್ದ ರಸ್ತೆಯು ಮುಚ್ಚಲ್ಪಟ್ಟು, ಅದರ ಅರಿವಿಲ್ಲದೆ ಸೇತುವೆಯ ಬಳಿ ಬಸ್ಸಿನಿಂದ ಇಳಿಯುವ ಭಕ್ತರು ಅಪಾಯ ಎದುರಿಸುತ್ತಿರುವ ಬಗ್ಗೆ ‘ವಿಜಯವಾಣಿ’ ವರದಿ ಪ್ರಕಟಿಸಿದ ಬೆನ್ನಲ್ಲೇ ತಾತ್ಕಾಲಿಕ ರಸ್ತೆ ನಿಮಾಣ ಕಾರ್ಯ ಸೋಮವಾರ ನಡೆಯಿತು.
ಹೆದ್ದಾರಿ ಕಾಮಗಾರಿ ನಿರತ ಕೆಎನ್‌ಆರ್ ಸಂಸ್ಥೆಯು ಈ ಹಿಂದೆ ಇದ್ದ ರಸ್ತೆಯ ಭಾಗದಲ್ಲೇ ತಾತ್ಕಾಲಿಕ ನೆಲೆಯಲ್ಲಿ ರಸ್ತೆಯನ್ನು ನಿರ್ಮಿಸಿದ್ದು, ಲಘು ವಾಹನಗಳೂ ಕೂಡಾ ಈ ರಸ್ತೆಯನ್ನು ಬಳಸುವಂತಿದೆ. ತನ್ಮೂಲಕ ದೇವಾಲಯಕ್ಕೆ ಮೊದಲಿದ್ದಂತೆಯೇ ಶಾರ್ಟ್ ಕಟ್ ರಸ್ತೆಯೊಂದು ನಿರ್ಮಾಣವಾಗಿ ಭಕ್ತರು ಅಪಾಯಕಾರಿ ಪ್ರಯತ್ನಕ್ಕೆ ಮುಂದಾಗುವುದು ತಪ್ಪಿದಂತಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಉದ್ಯಮಿ ಸ್ವರ್ಣೇಶ್ ಗಾಣಿಗ, ಈ ಸಮಸ್ಯೆಯ ಬಗ್ಗೆ ‘ವಿಜಯವಾಣಿ’ ವರದಿ ಪ್ರಕಟಿಸಿದ್ದು, ಹೆದ್ದಾರಿ ಇಲಾಖೆ ಹಾಗೂ ಕಾಮಗಾರಿ ನಿರತ ಕೆಎನ್‌ಆರ್ ಸಂಸ್ಥೆಯ ಅಧಿಕಾರಿಗಳು ತುರ್ತು ಸ್ಪಂದನೆ ನೀಡಿರುವುದು ಸ್ವಾಗತಾರ್ಹ ಎಂದಿದ್ದಾರೆ.