ತಾತ್ಕಾಲಿಕ ರಸ್ತೆ ನಿರ್ಮಾಣ : ಕುಮಾರಧಾರಾ ನದಿ ಮೂಲಕ ಬಳ್ಪ-ಕೇನ್ಯ ಸಂಪರ್ಕಕ್ಕೆ ಅನುಕೂಲ : ಗ್ರಾಮಸ್ಥರ ಶ್ರಮದಾನ

4
Published on

ಕಡಬ: ಕಡಬ ತಾಲೂಕಿನ ಸಂಸದರ ಆದರ್ಶ ಗ್ರಾಮ ಬಳ್ಪ ಹಾಗು ಕೊಡಿಂಬಾಳ ಗ್ರಾಮಗಳ ಮಧ್ಯೆ ಹರಿಯುವ ಕುಮಾರಧಾರಾ ನದಿಗೆ ಗ್ರಾಮಸ್ಥರು ಒಟ್ಟಾಗಿ ಹಣ ಸಂಗ್ರಹಿಸಿ ಶ್ರಮದಾನದ ಮೂಲಕ ಕೊಂಡಿಂಬಾಳ ಗ್ರಾಮದ ಮಜ್ಜಾರು ಕಡವು ಹಾಗೂ ಅತ್ತ ಬಳ್ಪ ಗ್ರಾಮದ ಕೇನ್ಯ ಎಂಬ ಪ್ರದೇಶವನ್ನು ಸಂಪರ್ಕಿಸುವ ಜಾಗದಲ್ಲಿ ತಾತ್ಕಾಲಿಕ ಮಣ್ಣಿನ ರಸ್ತೆ ನಿರ್ಮಿಸುವ ಕಾರ್ಯ ನಡೆಸುತ್ತಿದ್ದಾರೆ. ಭಾನುವಾರ ಆರಂಭವಾದ ಕೆಲಸ ನಾಲ್ಕು ದಿನದೊಳಗಡೆ ಸಂಪೂರ್ಣಗೊಳಿಸಿ ಸಂಚಾರ ನಡೆಸುವ ಸಂಕಲ್ಪ ತೊಡಲಾಗಿದೆ.

ಕಡಬ ತಾಲೂಕಿನ ಸಂಸದರ ಆದರ್ಶ ಗ್ರಾಮವಗಿರುವ ಬಳ್ಪದ ಜನರು ತಾಲೂಕು ಕೇಂದ್ರವನ್ನು ಸಂಪರ್ಕಿಸಲು ಪಂಜ ಮೂಲಕ 20 ಕಿ.ಮೀ ಸುತ್ತು ಬಳಸಿ ಸಂಚರಿಸಬೇಕು. ಆದರೆ ಈ ಕುಮಾರಧಾರಾ ನದಿಯಲ್ಲಿ ನಿರ್ಮಿಸಿದ ತಾತ್ಕಾಲಿಕ ರಸ್ತೆಯಲ್ಲಿ 6 ಕಿ.ಮೀ ಸಂಪರ್ಕಿಸಬಹುದು. ಇದೇ ರಸ್ತೆಯ 3 ಕಿ.ಮೀ ಯಲ್ಲಿ ಮಂಗಳೂರು-ಬೆಂಗಳೂರು ನಡುವಿನ ಕೋಡಿಂಬಾಳ ರೈಲ್ವೆ ನಿಲ್ದಾಣವೂ ಸಿಗುತ್ತದೆ.

ಈ ನಿಟ್ಟಿನಲ್ಲಿ ಗ್ರಾಮಸ್ಥರೇ ಸೇರಿಕೊಂಡು ಮಜ್ಜಾರು ಕಡವು ಎಂಬಲ್ಲಿಂದ ಬಳ್ಪ ಗ್ರಾಮದ ಕೇನ್ಯ ಎಂಬ ಪ್ರದೇಶವನ್ನು ಸಂಪರ್ಕಿಸುವ ತಾತ್ಕಾಲಿಕ ರಸ್ತೆಯೊಂದನ್ನು ನಿರ್ಮಾಣ ಮಾಡಲು ತೀರ್ಮಾನಿಸಿ ಸಮಿತಿಯನ್ನು ರಚಿಸಿ ಗ್ರಾಮಸ್ಥರ ಸಹಕಾರದಿಂದ ಐದು ಲಕ್ಷ ರೂ. ಸಂಗ್ರಹಿಸಿ ತಾತ್ಕಾಲಿಕ ರಸ್ತೆ ಕೆಲಸ ಆರಂಭಿಸಿದ್ದಾರೆ.

ಬಳ್ಪ, ಕೇನ್ಯ, ಮಜ್ಜಾರು ಭಾಗದ ಹಿರಿಯರು, ಯುವಕರು ಮಕ್ಕಳೆನ್ನದೆ 200ಕ್ಕೂ ಅಧಿಕ ಗ್ರಾಮಸ್ಥರು ಶ್ರಮದಾನದ ಮೂಲಕ ಈ ರಸ್ತೆ ನಿರ್ಮಾಣ ಮಾಡುತ್ತಿದ್ದಾರೆ.

200 ಮೀಟರ್ ಉದ್ದದ ರಸ್ತೆಯನ್ನು ಕಲ್ಲು, ಮಣ್ಣು, ಮರಳು, ಮತ್ತು 16 ಸಿಮೆಂಟ್ ಪೈಪ್ ಮುಂತಾದ ಪರಿಕರಗಳಿಂದ ನಿರ್ಮಿಸುತ್ತಿದ್ದಾರೆ. ಈ ತಾತ್ಕಾಲಿಕ ರಸ್ತೆ ಮಳೆಗಾಲದಲ್ಲಿ ನೆರೆ ನೀರಿನಿಂದ ಕೊಚ್ಚಿ ಹೋಗುತ್ತದೆ. ಮುಂದಿನ ವರ್ಷ ಬೇಸಿಗೆಯಲ್ಲಿ ಪುನಃ ನಿರ್ಮಾಣ ಮಾಡಬೇಕಾಗುತ್ತದೆ. ಇಲ್ಲಿ ಶಾಶ್ವತ ಸಂಪರ್ಕ ಸೇತುವೆ ಬೇಡಿಕೆ ಈಡೇರಿದರೆ ಕಡಬ, ಕೋಡಿಂಬಾಳ ರೈಲ್ವೆ ನಿಲ್ದಾಣ, ಪ್ರಸಿದ್ಧ ಪ್ರವಾಸಿ ಮತ್ತು ಕಾರಣಿಕ ಕ್ಷೇತ್ರಗಳಾದ ಮಜ್ಜಾರು, ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ, ಸೇರಿದಂತೆ ಮಂಗಳೂರು, ಬೆಂಗಳೂರು ಮತ್ತು ಸುಳ್ಯ, ಮಡಿಕೇರಿ, ಕೇರಳ ಕಡೆಗೂ ಸಂಪರ್ಕ ಕೊಂಡಿಯಾಗಲಿದೆ.

ಬಳ್ಪ ಸಂಸದರ ಆದರ್ಶ ಗ್ರಾಮವಾಗಿರುವುದರಿಂದ ಈ ಸೇತುವೆ ಸಂಪರ್ಕ ಕಲ್ಪಿಸುವ ಬಳ್ಪ ಗ್ರಾಮದ ರಸ್ತೆಗಳು ಈಗಾಗಲೇ ಬಹುತೇಕ ಎಲ್ಲ ಕಡೆಗಳಲ್ಲಿ ಕಾಂಕ್ರೀಟ್ ಕಾಮಗಾರಿ ಮಾಡಲಾಗಿದೆ. ಆದ್ದರಿಂದ ಸಂಬಂಧಿಸಿದ ಇಲಾಖಾಧಿಕಾರಿಗಳು ಮತ್ತು ಜನ ಪ್ರತಿನಿಧಿಗಳು ಮಜ್ಜಾರುಕಡವು ಭಾಗದಲ್ಲಿ ಸರ್ವ ಋತು ಸೇತುವೆ ನಿರ್ಮಾಣಕ್ಕೆ ಮುಂದಾಗಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಬಳ್ಪ ಹಾಗೂ ಕೊಡಿಂಬಾಳ ಗ್ರಾಮಸ್ಥರು ಹಾಗೂ ಸಾರ್ವಜನಿಕರ ಹಣ ಮತ್ತು ಶ್ರಮದಾನದಿಂದ ತಾತ್ಕಾಲಿಕ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಮಳೆಗಾಲಕ್ಕೆ ಈ ರಸ್ತೆ ಉಪಯೋಗ ಮಾಡುವ ಹಾಗಿಲ್ಲ. ಹಾಗಾಗಿ ಇಲ್ಲೊಂದು ಸರ್ವಋತು ಸೇತುವೆ ಬೇಕೆಂಬ ಹಕ್ಕೊತ್ತಾಯ ಮಾಡಲಾಗುವುದು. ಇದಕ್ಕಾಗಿ ಸಾರ್ವಜನಿಕರ ಸಹಕಾರದೊಂದಿಗೆ ಎರಡು ಗ್ರಾಮಸ್ಥರ ಹೋರಾಟ ಸಮಿತಿ ರಚಿಸಿಕೊಂಡು ಮುಂದಿನ ದಿನಗಳಲ್ಲಿ ಹೊರಾಟ ನಡೆಸಲು ಚಿಂತನೆ ನಡೆಸಲಾಗಿದೆ. ವಾಸುದೇವ ಕೆರೆಕೊಡಿ, ಕೊಡಿಂಬಾಳ-ಬಳ್ಪ ತಾತ್ಕಾಲಿಕ ರಸ್ತೆ ನಿರ್ಮಾಣ ಸಮಿತಿ ಸಂಚಾಲಕ https://www.vijayavani.net/shifting-of-administrative-office-of-srisha-souharda-society

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net