

ಕಾರ್ಕಳ: ಎಸ್.ಕೆ ಬಾರ್ಡರ್ ಬಳಿಯಲ್ಲಿ ಶನಿವಾರ ಮಧ್ಯಾಹ್ನ ಕಳಸಕ್ಕೆ ಹೋಗುತ್ತಿದ್ದ ಟೆಂಪೋ ಟ್ರಾವೆಲರ್ ವಾಹನವೊಂದರಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ವಾಹನ ಸುಟ್ಟು ಭಸ್ಮಗೊಂಡಿದೆ.
ಕಟಪಾಡಿಯ ಪ್ರಶಾಂತ ಎಂಬುವರಿಗೆ ಸೇರಿದ ವಾಹನದಲ್ಲಿ ಯಾತ್ರಾರ್ಥಿಗಳು ಕಳಸಕ್ಕೆ ಹೋಗುತ್ತಿದ್ದಾಗ ಎಸ್.ಕೆ ಬಾರ್ಡರ್ ದಾಟಿ ಮುಂದೆ ಹೋಗುತ್ತಿದ್ದಾಗ ಏಕಾಏಕಿ ಹೊಗೆ ಕಾಣಿಸಿಕೊಂಡಿದ್ದು, ಇದರ ಬೆನ್ನಲ್ಲೇ ಕಾಣಿಸಿಕೊಂಡ ಬೆಂಕಿಯ ಜ್ವಾಲೆಯಿಂದ ಇಡೀ ವಾಹನ ಹೊತ್ತಿ ಉರಿದು ಭಸ್ಮವಾಗಿದೆ.
ಘಟನಾ ಸ್ಥಳದಲ್ಲಿ ಮೊಬೈಲ್ ಸಂಪರ್ಕ ಸಿಗದೇ ಇದ್ದುದರಿಂದ ಮಾಹಿತಿ ಬೆಳಕಿಗೆ ಬರಲು ಒಂದಿಷ್ಟು ತಡವಾಗಿತ್ತು. ಬಳಿಕ ಎಸ್.ಕೆ ಬಾರ್ಡರ್ನಲ್ಲಿ ಕಾರ್ಯನಿರ್ವಹಿಸುವ ಅರಣ್ಯ ಇಲಾಖಾ ಸಿಬ್ಬಂದಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ತೆರಳಿ ಬೆಂಕಿ ನಂದಿಸುವ ಪ್ರಯತ್ನಪಟ್ಟರೂ ಅದಾಗಲೇ ವಾಹನ ಸಂಪೂರ್ಣ ಹೊತ್ತಿ ಉರಿದಿದೆ. ಬೆಂಕಿ ಕಾಣಿಸಿಕೊಳ್ಳುತ್ತಿದಂತೆ ವಾಹನದಲ್ಲಿದ್ದ ಪ್ರಯಾಣಿಕರು ವಾಹನದಿಂದ ಇಳಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.