ಸಹಬಾಳ್ವೆ ನಡೆಸಲು ದೇಗುಲಗಳು ಸಹಕಾರಿ

16 HANUR 1
Published on

ಹನೂರು: ದೇಗುಲಗಳು ಮನಸ್ಸಿಗೆ ಶಾಂತಿ ಹಾಗೂ ನೆಮ್ಮದಿ ನೀಡುವುದರ ಜತೆಗೆ ಗ್ರಾಮದ ಜನರು ಪರಸ್ಪರ ಸಹಬಾಳ್ವೆಯಿಂದ ಜೀವನ ನಡೆಸಲು ಸಹಕಾರಿಯಾಗಿವೆ ಎಂದು ಮಾಜಿ ಶಾಸಕ ಆರ್.ನರೇಂದ್ರ ತಿಳಿಸಿದರು.


ತಾಲೂಕಿನ ಕೌದಳ್ಳಿ ಗ್ರಾಮದ ನಾಯಕರ ಬಡಾವಣೆಯಲ್ಲಿ ಸೋಮವಾರ ಅಕ್ಕ ಮಾರಮ್ಮ ದೇಗುಲದ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.


ಹನೂರು ಕ್ಷೇತ್ರವು ಶ್ರೀಮಲೆಮಹದೇಶ್ವರರು, ಸಿದ್ದಪ್ಪಾಜಿ, ಮಂಟೇಸ್ವಾಮಿ ಹಾಗೂ ಇನ್ನಿತರ ಪವಾಡ ಪುರುಷರು ನೆಲೆಸಿರುವ ಧಾರ್ಮಿಕ ಸ್ಥಳ. ಹಾಗಾಗಿ ಇಲ್ಲಿಗೆ ರಾಜ್ಯದ ವಿವಿಧೆಡೆಯಿಂದ ಹೆಚ್ಚಿನ ಭಕ್ತರು ಆಗಮಿಸುತ್ತಾರೆ. ಹಾಗಾಗಿ ಕ್ಷೇತ್ರವು ತನ್ನದೇಯಾದ ಆಧ್ಯಾತ್ಮಿಕ ಹಿನ್ನೆಲೆಯನ್ನು ಒಳಗೊಂಡಿದೆ. ಹಾಗೆಯೇ ಗ್ರಾಮವು ಸಮೃದ್ಧಿಯಿಂದ ಕೂಡಿರಲಿ, ಉತ್ತಮ ಮಳೆ, ಬೆಳೆಯಾಗಲಿ, ದುಷ್ಟ ಶಕ್ತಿಗಳ ಕಾಟ ತಾಕದಿರಲಿ ಹಾಗೂ ಜನರ ನಡುವೆ ಉತ್ತಮ ಬಾಂಧವ್ಯ ವೃದ್ಧಿಸಲಿ ಎನ್ನುವ ಉದ್ದೇಶದಿಂದ ಪ್ರತಿ ಗ್ರಾಮದಲ್ಲೂ ದೇಗುಲಗಳನ್ನು ಹೊಂದಿದ್ದು, ಜನರು ಪೂಜಿಸುತ್ತಾ ಬಂದಿದ್ದಾರೆ. ಎಲ್ಲ ಸಮುದಾಯದ ಜನರು ಒಗ್ಗೂಟ್ಟಿನಿಂದ ಜಾತ್ರೆ ಆಚರಿಸುತ್ತಿರುವುದು ಗ್ರಾಮದ ಸಾಮರಸ್ಯತೆಯ ಪ್ರತೀಕವಾಗಿದೆ. ಇದರಿಂದ ಗ್ರಾಮದಲ್ಲಿ ಶಾಂತಿ, ಸೌಹಾರ್ದತೆಗೆ ಸಹಕಾರಿಯಾಗಿದೆ. ಈ ದೆಸೆಯಲ್ಲಿ ಗ್ರಾಮಸ್ಥರು ಹಾಗೂ ದಾನಿಗಳ ಸಹಾಯದಿಂದ 1.20 ಕೋಟಿ ರೂ. ವೆಚ್ಚದಲ್ಲಿ ಅಕ್ಕ ಮಾರಮ್ಮನ ದೇಗುಲವನ್ನು ನೂತನವಾಗಿ ನಿರ್ಮಿಸುತ್ತಿರುವುದು ಸಂತಸದ ಸಂಗತಿ. ಕಾಮಗಾರಿಯೂ ಪೂರ್ಣಗೊಂಡು ಆದಷ್ಟು ಬೇಗ ಭಕ್ತರ ಸೇವೆಗೆ ದೊರಕುವಂತಾಗಲಿ ಎಂದು ಆಶಿಸಿದರು.


ಬಳಿಕ ಮಾಜಿ ಶಾಸಕರು ಸಮುದಾಯ ಭವನಕ್ಕೆ ಭೇಟಿ ನೀಡಿದ್ದ ವೇಳೆ ಗ್ರಾಮಸ್ಥರು ಮೇಲಂತಸ್ತು ಹಾಗೂ ಅಡುಗೆ ಕೋಣೆ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ಕೊಡಿಸುವಂತೆ ಮನವಿ ಮಾಡಿದರು. ಇದಕ್ಕೆ ನರೇಂದ್ರ ಪ್ರತಿಕ್ರಿಯಿಸಿ, ಕಳೆದ ಅವಧಿಯಲ್ಲಿ ಗ್ರಾಮದಲ್ಲಿ ಸಮುದಾಯ ನಿರ್ಮಾಣಕ್ಕೆ 50 ಲಕ್ಷ ರೂ.ಮಂಜೂರು ಮಾಡಿಸಿದ್ದು, ಈಗಾಗಲೇ ಭವನ ನಿರ್ಮಾಣವಾಗಿದೆ. ಮುಂದುವರಿದ ಕಾಮಗಾರಿಗೆ ಅನುದಾನ ನೀಡುವಂತೆ ಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟ ಸಚಿವರ ಗಮನಕ್ಕೆ ತಂದು ಅಗತ್ಯ ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ಮುಖಂಡರಾದ ಗೋವಿಂದ, ವೆಂಕಟನಾಯ್ಕ, ಮಹದೇವ, ಮುತ್ತುರಾಜು ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net