ಜ್ಞಾನದೇಗುಲ ಕಟ್ಟಡವಿನ್ನು ನೆನಪು ಮಾತ್ರ

COLLEGE
ಲಿಂಗಸುಗೂರು ಪಟ್ಟಣದಲ್ಲಿ ಶಿಥಿಲಾವಸ್ಥೆಗೆ ತಲುಪಿದ ಸರ್ಕಾರಿ ಪದವಿ ಪೂರ್ವ ಕಾಲೇಜನ್ನು ನೆಲಸಮಗೊಳಿಸುತ್ತಿರುವ ಜೆಸಿಬಿ ಯಂತ್ರ.
Published on

ಲಿಂಗಸುಗೂರು: ತಾಲೂಕಿನಲ್ಲಿ ಪ್ರಪ್ರಥಮ ಎಂಬ ಹೆಗ್ಗಳಿಕೆಗೆ ಪಾತ್ರವಾದ ಮತ್ತು ಸಹಸ್ರಾರು ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಕಾರಣವಾಗಿದ್ದ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯ ನೆಲಸಮಗೊಳ್ಳುತ್ತಿದ್ದು, ಬೃಹತ್ ಕಟ್ಟಡವಿನ್ನು ನೆನಪು ಮಾತ್ರವಾಗಲಿದೆ.

ಪಟ್ಟಣದ ಹೃದಯ ಭಾಗದಲ್ಲಿ ವಿಶಾಲವಾದ ಮೈದಾನ ಹಾಗೂ ಕಲಾ, ವಾಣಿಜ್ಯ ಮತ್ತು ವಿಜ್ಞಾನ ತರಗತಿಗಳನ್ನು ಹೊಂದಿದ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯವು 1981 ಡಿಸೆಂಬರ್ 4 ರಂದು ಅಂದಿನ ಸಿಎಂ ಆರ್.ಗುಂಡೂರಾವ್ ಉದ್ಘಾಟಿಸಿದ್ದರು. ಮಾರುಕಟ್ಟೆ ಮತ್ತು ಮುಜರಾಯಿ ಸಚಿವರಾಗಿದ್ದ ಸುಧೀಂದ್ರರಾವ್ ಕಸಬೆ, ಸಹಕಾರ ಸಚಿವರಾಗಿದ್ದ ಎಚ್.ಸಿ.ಶ್ರೀಕಂಠಯ್ಯ, ಸಂಸದರಾಗಿದ್ದ ಬಿ.ವಿ.ದೇಸಾಯಿ ಹಾಗೂ ಶಾಸಕರಾಗಿದ್ದ ಬಸವರಾಜ ಪಾಟೀಲ್ ಆನ್ವರಿ ಸೇರಿದಂತೆ ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಶಿಥಿಲಾವಸ್ಥೆಗೆ

ತಾಲೂಕು ಸೇರಿದಂತೆ ನೆರೆಯ ತಾಲೂಕುಗಳ ಗ್ರಾಮೀಣ ಪ್ರದೇಶಗಳ ರೈತ, ಕೂಲಿ, ಕಾರ್ಮಿಕರ ಸಾವಿರಾರು ಮಕ್ಕಳು ಕಳೆದ ನಾಲ್ಕು ದಶಕಗಳಿಂದ ಇದೇ ಕಾಲೇಜಿನಲ್ಲಿ ಶಿಕ್ಷಣ ಪಡೆದು, ಉನ್ನತ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ ಕಾಲೇಜು ಪ್ರಾರಂಭಗೊಂಡ ಮೂರು ದಶಕಗಳಲ್ಲಿ ಶಿಥಿಲಾವಸ್ಥೆಗೆ ತಲುಪಿತು. ಕಾಲೇಜಿನ ಬಹುತೇಕ ಕೊಠಡಿಗಳ ಮೇಲ್ಛಾವಣಿ, ಸಿಮೆಂಟ್ ಒಳಪದರು ಉದುರಿ ಬೀಳಹತ್ತಿತು. ಗೋಡೆಗಳು, ಕಾಲಮ್ ಕಂಬಗಳು ಅಲ್ಲಲ್ಲಿ ಸಿಮೆಂಟ್ ಕಿತ್ತಿ ಹೋಗಿ ಅಸ್ತಿ ಪಂಜರದಂತೆ ಭಾಸವಾಗುತ್ತಿತ್ತು. ಮಳೆ ಬಂದರೆ ಬಹುತೇಕ ಕೊಠಡಿಗಳು ಸೋರುತ್ತಿದ್ದವು. ಪ್ರಾಚಾರ್ಯ, ಉಪನ್ಯಾಸಕರು, ಸಿಬ್ಬಂದಿ, ವಿದ್ಯಾರ್ಥಿಗಳು ಆತಂಕದಲ್ಲಿ ದಿನಗಳನ್ನು ದೂಡುತ್ತಿದ್ದರು.

ಇದನ್ನೂ ಓದಿ: ಹೆಣ್ಮಕ್ಕಳ ಯೋಜನೆಗೆ ಅನುದಾನ ಕೊರತೆ: 2ವರ್ಷದಿಂದ ನೆರವು ಸ್ಥಗಿತ; ಬೇಟಿ ಬಚಾವೋ, ಬೇಟಿ ಪಢಾವೋಗೆ ಹಿನ್ನಡೆ
ಕಳೆದ ಐದಾರು ವರ್ಷಗಳ ಹಿಂದೆ ಸರ್ಕಾರದ ನಾನಾ ಯೋಜನೆಯಡಿ ನೂತನ ಕಾಲೇಜು ಕಟ್ಟಡಗಳ ನಿರ್ಮಾಣದ ಬಳಿಕ ಪ್ರಾಚಾರ್ಯರ, ಉಪನ್ಯಾಸಕರ, ಸಿಬ್ಬಂದಿ ವರ್ಗಗಳ ಕಚೇರಿ ಮತ್ತು ವಿದ್ಯಾರ್ಥಿಗಳ ಅಕ್ಷರಭ್ಯಾಸ ನೂತನ ಕಟ್ಟಡದಲ್ಲಿ ಸ್ಥಳಾಂತರಿಸಲಾಯಿತು. ಅಂದಿನಿಂದ ಪಾಳುಬಿದ್ದಿದ್ದ ಹಳೆಯ ಕಟ್ಟಡ ಕಿಡಿಗೇಡಿಗಳ ಅನೇಕ ಅವಗಢಗಳಿಗೆ ತುತ್ತಾಗುತ್ತ ಮತ್ತು ಅನೈತಿಕ ಚಟುವಟಕೆಗಳ ತಾಣವಾಗಿ ಮಾರ್ಪಟ್ಟಿತ್ತು. ಶಿಥಿಲಾವಸ್ಥೆಗೆ ತಲುಪಿದ ಹಳೆದ ಕಾಲೇಜು ಕಟ್ಟಡ ತೆರವುಗೊಳಿಸುವಂತೆ ಸಾರ್ವಜನಿಕರಿಂದ ಒತ್ತಾಯಗಳು ಕೇಳಿ ಬರುತ್ತಿದ್ದವು. ಇದಕ್ಕೆ ಇಚ್ಛಾಶಕ್ತಿ ಮತ್ತು ಅನುದಾನ ಕೊರತೆ ಸೇರಿ ನಾನಾ ತಾಂತ್ರಿಕ ತೊಂದರೆಯಿಂದ ನನೆಗುದಿಗೆ ಬಿದ್ದಿತ್ತು.

ಇದೀಗ ಕಾಲೇಜು ಅಭಿವೃದ್ಧಿ ಸಮಿತಿ ಕಟ್ಟಡ ತೆರವಿಗೆ ಇಚ್ಛಾಶಕ್ತಿ ತೋರಿದ್ದು, ಕಾಲೇಜು ಕಟ್ಟಡಕ್ಕೆ ಬಳಸಿದ ಸಾವಿರಾರು ಸೈಜು ಕಲ್ಲುಗಳು, ಕಬ್ಬಿಣದ ಸರಳು, ಕಿಟಕಿ, ಬಾಗಿಲು ಸೇರಿ ಒಟ್ಟು 24 ಕೊಠಡಿಗಳನ್ನು ನೆಲಸಮಗೊಳಿಸಿ, ಇದರ ಎಲ್ಲ ಸಾಮಗ್ರಿಗಳನ್ನು ಗುತ್ತಿಗೆದಾರರೇ ತೆಗೆದುಕೊಂಡು ಹೋಗಲು ಇತ್ತೀಚೆಗೆ ನಡೆದ ಬಹಿರಂಗ ಹರಾಜು ಪ್ರಕ್ರಿಯೆ ನಡೆದು, ಸ್ಥಳೀಯ ಗುತ್ತಿಗೆದಾರರ ಪಾಲಾಗಿದೆ.

ಸ್ಥಳೀಯ ಗುತ್ತಿಗೆದಾರ ರಮೇಶ ರಾಯಭಾಗ ಅವರು 7.90 ಲಕ್ಷ ರೂ.ಗಳಿಗೆ ಟೆಂಡರ್ ಪಡೆದು ಹಣ ಮುಂಗಡ ಪಾವತಿಸಿದ್ದಾರೆ. ಹಳೆಯ ಕಟ್ಟಡದ ಕಲ್ಲು, ಮಣ್ಣು, ಕಬ್ಬಿಣ, ಕಟ್ಟಿಗೆ ಸೇರಿ ಎಲ್ಲ ಸಾಮಗ್ರಿ ಅವರೇ ತೆಗೆದುಕೊಂಡು ಸ್ವಚ್ಛ ಮೈದಾನ ವ್ಯವಸ್ಥೆ ಮಾಡಲು ಕರಾರಿನಲ್ಲಿ ತಿಳಿಸಲಾಗಿದೆ.

ಮುರುಘೇಂದ್ರಪ್ಪ

ಪ್ರಾಚಾರ್ಯ, ಸ.ಪ.ಪೂ.ಕಾಲೇಜು ಲಿಂಗಸುಗೂರು.

ಸರ್ಕಾರಿ ಪದವಿ ಪೂರ್ವ ಕಾಲೇಜು ಕಟ್ಟಡ ನಿರ್ಮಾಣಗೊಂಡು 33 ವರ್ಷ ಸಂದಿವೆ. ಸೂಕ್ತ ಸಮಯದಲ್ಲಿ ದುರಸ್ತಿಗೊಳಿಸಿದ್ದರೆ ಸಾರ್ವಜನಿಕರ ಹಣ ಪೋಲಾಗುತ್ತಿರಲಿಲ್ಲ. ಅಂದಿನ ವಿದ್ಯಾರ್ಥಿಗಳ ಹೋರಾಟದ ಫಲವಾಗಿ ಲಭಿಸಿದ ಕಾಲೇಜು ಭವ್ಯ ಕಟ್ಟಡ ನಿರ್ವಹಣೆ ಕೊರತೆ ಎದ್ದು ಕಾಣುತ್ತಿದೆ. ಸದರಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ ನಾನೂ ಸೇರಿ ಹಳೆಯ ವಿದ್ಯಾರ್ಥಿಗಳಿಗೆ ಕೇವಲ ನೆನಪು ಮಾತ್ರ ಉಳಿಯಲಿದೆ.


ನಾಗರಾಜ ಗಸ್ತಿ

ವಕೀಲ ಮತ್ತು ಹಳೆಯ ವಿದ್ಯಾರ್ಥಿ, ಲಿಂಗಸುಗೂರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net