ವ್ಯವಸ್ಥಾಪನಾ ಸಮಿತಿಯಲ್ಲಿ ವಿಶ್ವಕರ್ಮರಿಗಿಲ್ಲ ಪ್ರಾತಿನಿಧ್ಯ

Endoment
Published on

ಬೆಂಗಳೂರು: ರಾಜ್ಯ ಧಾರ್ಮಿಕ ದತ್ತಿ ಇಲಾಖೆ ಅಡಿಯಲ್ಲಿ ಬರುವ ‘ಎ’ದರ್ಜೆ ದೇವಾಲಯಗಳಲ್ಲಿ ವ್ಯವಸ್ಥಾಪನಾ ಸಮಿತಿ ರಚನೆ ಕುರಿತು ಸರ್ಕಾರ ಆದೇಶ ಹೊರಡಿಸಿದ್ದು, ಈ ಆದೇಶ ಸಮರ್ಪಕವಾಗಿ ಬಹಳಷ್ಟು ದೇವಾಲಯಗಳಿಗೆ ಈವರೆಗೂ ತಲುಪಿಲ್ಲದ ಕಾರಣ ಮನಸ್ಸಿಗೆ ಬಂದಂತೆ ಸಮಿತಿ ರಚನೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿವೆ.

ಇತ್ತೀಚಿಗೆ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ದೇವಾಲಯಗಳ ವ್ಯವಸ್ಥಾಪನಾ ಸಮಿತಿಯಲ್ಲಿ ಹಿಂದು ದೇವಾಲಯದ ವಾಸ್ತುಶಿಲ್ಪ ಮತ್ತು ಶಿಲ್ಪಶಾಸದಲ್ಲಿ ಕೌಶಲವುಳ್ಳ ವಿಶ್ವಕರ್ಮ ಸಮಾಜದ ಒಬ್ಬ ವ್ಯಕ್ತಿಯನ್ನು ಸೇರ್ಪಡೆಗೊಳಿಸಿ ಕರ್ನಾಟಕ ಹಿಂದು ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ವಿಧೇಯಕಕ್ಕೆ ಅಂಗೀಕಾರ ನೀಡಲಾಗಿತ್ತು. ಈ ಸಂಬಂಧ ಹೊರಡಿಸಿರುವ ಸರ್ಕಾರಿ ಆದೇಶದಲ್ಲಿ 25 ಲಕ್ಷ ರೂ. ಆದಾಯ ಮೀರಿದ ‘ಎ’ ದರ್ಜೆಯ ದೇವಾಲಯಗಳಲ್ಲಿ ವ್ಯವಸ್ಥಾಪನಾ ಸಮಿತಿಯಲ್ಲಿ ಒಂದು ದೇವಾಲಯದ ಒಬ್ಬರು ಪ್ರಧಾನ ಅರ್ಚಕ ಅಥವಾ ಅರ್ಚಕ, ಒಬ್ಬರು ವಿಶ್ವಕರ್ಮ, ಅನುಸೂಚಿತ ಜಾತಿ ಅಥವಾ ಬುಡಕಟ್ಟಿಗೆ ಸೇರಿದ ಒಬ್ಬರು, ಇಬ್ಬರು ಮಹಿಳೆಯರು ಹಾಗೂ ಇತರ ನಾಲ್ವರನ್ನು ನೇಮಿಸಿಕೊಳ್ಳುವಂತೆ ಸೂಚಿಸಿಲಾಗಿದೆ.

ಆದರೆ ಇಲಾಖೆಯಿಂದ ದೇವಾಲಯಗಳಿಗೆ ಈ ಆದೇಶ ತಲುಪದ ಕಾರಣ ಅಂತಹ ದೇವಾಲಯಗಳಲ್ಲಿ ಅವರಿಗೆ ಇಷ್ಟ ಬಂದಂತೆ ಸಮಿತಿ ರಚನೆ ಮಾಡಲಾಗುತ್ತಿದೆ. ಎರಡು ದಿನದಲ್ಲಿ ಸಮಿತಿಗಳ ಪಟ್ಟಿ ಬಿಡುಗಡೆಯಾಗಲಿದ್ದು, ವಿಶ್ವಕರ್ಮ ಸಮುದಾಯವನ್ನು ಕಡೆಗಣಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಆದರೆ, ಈ ಆರೋಪವನ್ನು ಇಲಾಖೆ ಅಧಿಕಾರಿಗಳು ನಿರಾಕರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net