18 ಜಿಲ್ಲೆಗಳಲ್ಲಿ ಉಷ್ಣಾಂಶ ತೀವ್ರ ಕುಸಿತ:ಹಲವೆಡೆ ಮೈನಡುಗುವ ಚಳಿ

coldwave
Published on

ಬೆಂಗಳೂರು: ಹಲವು ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನದಲ್ಲಿ ಗಣನೀಯವಾಗಿ ಉಷ್ಣಾಂಶ ಕುಸಿತ ಪರಿಣಾಮದಿಂದ ರಾಜ್ಯದಲ್ಲಿ ಚಳಿ ತೀವ್ರಗೊಂಡಿದ್ದು, ಬೆಂಗಳೂರು ನಗರ ಸೇರಿ ರಾಜ್ಯದ 18 ಜಿಲ್ಲೆಗಳಲ್ಲಿ ಉಷ್ಣಾಂಶ ಕುಸಿತವಾಗಿದೆ.

ಬೀದರ್​, ಕಲಬುರಗಿ,ವಿಜಯಪುರದಲ್ಲಿ ಮುಂದಿನ 2 ದಿನ ಭಾರಿ ಶೀತ ಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಕೋಲ್ಡ್​ ವೇವ್​ ಎಚ್ಚರಿಕೆ ಕೊಟ್ಟಿದೆ. ಮಳೆ ಕ್ಷೀಣವಾಗಿದ್ದ ಬೆನ್ನಲ್ಲೇ ವಾಡಿಕೆಗಿಂತ ಅಧಿಕವಾಗಿ ಕಾಣಿಸಿಕೊಂಡಿರುವ ಚಳಿ ಜನವರಿವರೆಗೆ ಮುಂದುವರಿಯಲಿದೆ. ಉತ್ತರದಿಂದ ದಣದತ್ತ ಗಾಳಿ ಬೀಸುತ್ತಿರುವುದು, ಲಾ ನಿನಾ ಪರಿಣಾಮ ಮುಂಗಾರು, ಹಿಂಗಾರು ಅವಧಿಯಲ್ಲಿ ವಾಡಿಕೆಗಿಂತ ಅಧಿಕ ಮಳೆ ಸುರಿದಿರುವುದು, ಮಣ್ಣು ಮತ್ತು ವಾತಾವರಣದಲ್ಲಿ ಹೆಚ್ಚು ತೇವಾಂಶ ಇರುವುದೂ ಸೇರಿ ಇತರ ಕಾರಣಗಳಿಂದ ಈ ಬಾರಿ ವಾಡಿಕೆಗಿಂತ ಅಧಿಕ ಚಳಿ ಇದೆ. ಹಗಲು ಮತ್ತು ರಾತ್ರಿ ವೇಳೆ ತಣ್ಣನೆ ಗಾಳಿ ಬೀಸುತ್ತಿದ್ದು, ಜನರಿಗೆ ಮೈ ನಡುಗುವ ಅನುಭವವಾಗುತ್ತಿದೆ. ಚಳಿ ಅವಧಿಯಲ್ಲಿ ಉತ್ತರ ಭಾರತದಿಂದ ದಣ ಭಾರತದ ಕಡೆಗೆ ಪ್ರಬಲವಾಗಿ ಶೀತ ಗಾಳಿ ಬೀಸುತ್ತಿರುವ ಹಿನ್ನೆಲೆಯಲ್ಲಿ ಮುಂಜಾನೆ 4ರಿಂದ 7ಗಂಟೆ ಅವಧಿಯಲ್ಲಿ ಚಳಿ ತೀವ್ರತೆ ಹೆಚ್ಚಿರಲಿದೆ.

ಕನಿಷ್ಠ ತಾಪಮಾನ ಕುಸಿತ

ಕನಿಷ್ಠ ತಾಪಮಾನದಲ್ಲಿ ವಿಜಯಪುರ 9,ಹಾಸನ, 10.3, ಬೆಳಗಾವಿ 10.4, ಚಿಂತಾಮಣಿ 10.4, ಧಾರವಾಡ 10.6, ಹಾವೇರಿ 11, ದಾವಣಗೆರೆ 11, ಚಾಮರಾಜನಗರ 11.1, ಚಿಕ್ಕಮಗಳೂರು 11.2, ಬೀದರ್​ 11.5, ಬಾಗಲಕೋಟೆ 11.8, ಮಂಡ್ಯ 11.9, ರಾಯಚೂರು 12, ಬೆಂಗಳೂರು 12.6, ಶಿವಮೊಗ್ಗ 12.8, ಕಲಬುರಗಿ 13.6 ಡಿ.ಸೆ.ಉಷ್ಣಾಂಶ ದಾಖಲಾಗಿದೆ. ಈ ಮೇಲಿನ ಎಲ್ಲ ಜಿಲ್ಲೆಗಳಲ್ಲಿ ವಾಡಿಕೆಗಿಂತ ಸರಾಸರಿ 3ರಿಂದ 6 ಡಿ.ಸೆ.ಉಷ್ಣಾಂಶ ಕುಸಿತವಾಗಿದೆ.ಕೆಲ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನದಲ್ಲಿಯೂ 1-2 ಡಿ.ಸೆ. ಇಳಿಮುಖವಾಗಿದೆ. ಮೇಲಿನ ಜಿಲ್ಲೆಗಳಲ್ಲಿ ರಾತ್ರಿ ವೇಳೆ ಚಳಿ ಅಧಿಕವಾಗಿದ್ದು, ಸಂಜೆ,ಮುಂಜಾನೆ ಇಬ್ಬನಿ ಬೀಳುತ್ತಿದೆ.

14 ವರ್ಷ ಬಳಿಕ ತೀವ್ರ ಚಳಿ

ರಾಜಧಾನಿಯಲ್ಲಿ 14 ವರ್ಷ ಬಳಿಕ ತೀವ್ರ ಚಳಿ ಕಾಣಿಸಿಕೊಂಡಿದೆ. ಶನಿವಾರ ಕನಿಷ್ಠ ತಾಪಮಾನದಲ್ಲಿ ಬೆಂಗಳೂರಿನಲ್ಲಿ 12.6 ಡಿ.ಸೆ.ಉಷ್ಣಾಂಶ ದಾಖಲಾಗಿದೆ. 2011ರ ಡಿ.24ರ ರಾತ್ರಿ 12.8 ಡಿ.ಸೆ. ಉಷ್ಣಾಂಶ ದಾಖಲಾಗಿತ್ತು. ಜನವರಿಯಲ್ಲಿ ಕನಿಷ್ಠ ತಾಪಮಾನದಲ್ಲಿ ವಾಡಿಕೆಯಂತೆ 16 ಡಿ.ಸೆ. ಉಷ್ಣಾಂಶ ದಾಖಲಾಗುತ್ತದೆ. ಆದರೆ, ಸೈಕ್ಲೋನ್​ ಬಂದು ಹೋಗಿರುವುದು ಸೇರಿ ವಿವಿಧ ಕಾರಣಗಳಿಂದ ನಗರದಲ್ಲಿ ವಾಡಿಕೆಗಿಂತ 2-3 ಡಿ.ಸೆ.ಉಷ್ಣಾಂಶ ಕುಸಿದಿದ್ದು, ರಾತ್ರಿ ವೇಳೆ ಅಧಿಕ ಚಳಿ ಕಾಣಿಸಿಕೊಳ್ಳುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net