

ಬೆಂಗಳೂರು:ರಾಜ್ಯದಲ್ಲಿ ದಿಢೀರ್ ರಾಜಸ್ಥಾನ ಮಾದರಿ ಉರಿ ಬಿಸಿಲು ಕಾಣಿಸಿಕೊಂಡಿದೆ. ಸೋಮವಾರ 23 ಜಿಲ್ಲೆಗಳಲ್ಲಿ ಉಷ್ಣಾಂಶ 40ರ ಗಡಿ ದಾಟಿದೆ.ಆ ಭಾಗದ ಜನರಿಗೆ ಶಾಖಾಘಾತ ಎಚ್ಚರಿಕೆ ಕೊಡಲಾಗಿದೆ.
ರಾಯಚೂರಿನಲ್ಲಿ 46.1 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಈ ಮೂಲಕ ಪ್ರಸಕ್ತ ವರ್ಷದಲ್ಲಿ ಮೊದಲ ಬಾರಿಗೆ ಅತಿ ಹೆಚ್ಚು ತಾಪಮಾನ ಇದಾಗಿದೆ.ಯಾದಗಿರಿ 45.1, ಕಲಬುರಗಿ 45.1, ಬಳ್ಳಾರಿ 44.8, ವಿಜಯಪುರ 44.6, ಬಾಗಲಕೋಟೆ 44.6, ಗದಗ 43.6, ಬೆಳಗಾವಿ 44.4, ಕೊಪ್ಪಳ 44.1, ಬೀದರ್ 44.4, ಚಿತ್ರದುರ್ಗ 43.2, ಚಿಕ್ಕಮಗಳೂರು 42.9, ಹಾವೇರಿ 42.5, ಮಂಡ್ಯ 42.5, ತುಮಕೂರು 42.3, ದಾವಣಗೆರೆ 42.4, ರಾಮನಗರ 42.4, ಚಾಮರಾಜನಗರ 42, ಧಾರವಾಡ 42, ಶಿವಮೊಗ್ಗ 41.6, ಮೈಸೂರು 40.9, ಹಾಸನ 40.5, ಕೋಲಾರ 40.3 ಡಿ.ಸೆ. ಉಷ್ಣಾಂಶ ದಾಖಲಾಗಿದೆ. ಈ ಮೇಲಿನ ಎಲ್ಲ ಜಿಲ್ಲೆಗಳಲ್ಲಿ ಮುಂದಿನ ಐದು ದಿನ ಬಿಸಿ ಗಾಳಿ ಬೀಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಆರೆಂಜ್ ಅರ್ಲಟ್ ಘೋಷಿಸಿದೆ. ಮುಂದಿನ ಐದುವರೆಗೆ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬಾಗಲಕೋಟೆ, ಕಲಬುರಗಿ, ರಾಯಚೂರಿನಲ್ಲಿ ಬಿಸಿ ವಾತಾವರಣ ಇರಲಿದೆ.
2-3 ದಿನಗಳಿಂದ ಹಿಂದೆ ಉತ್ತರ ಕರ್ನಾಟಕ ಭಾಗದ ಬಹುತೇಕ ಜಿಲ್ಲೆಗಲ್ಲಿ 40-41ರ ಅಸುಪಾಸಿನಲ್ಲಿ ಉಷ್ಣಾಂಶ ದಾಖಲಾಗುತ್ತಿತ್ತು. ಆದರೆ, ಸೋಮವಾರ ವಾಡಿಕೆಗಿಂತ 4-6 ಡಿ.ಸೆ.ಹೆಚ್ಚು ಉಷ್ಣಾಂಶ ಕಂಡುಬಂದಿದೆ. ದಕ್ಷಿಣ ಕರ್ನಾಟಕ ಭಾಗದ ಚಾಮರಾಜನಗರ, ಮೈಸೂರು, ಹಾಸನ, ಮಂಡ್ಯ, ರಾಮನಗರ ಕೋಲಾರ, ತುಮಕೂರು, ಚಿಕ್ಕಮಗಳೂರಿನಲ್ಲಿ ವಾಡಿಕೆಗಿಂತ 7-8 ಡಿ.ಸೆ. ಹೆಚ್ಚು ಉಷ್ಣಾಂಶ ವರದಿಯಾಗಿದೆ. ಇಡೀ ಕರುನಾಡು ಕಾದ ಕೆಂಡವಾಗಿದ್ದು, ಜನರು, ಜಾನುವಾರು, ಕೃಷಿ, ಪ್ರಾಣಿ ಸಂಕುಲ ಮೇಲೆ ಗಂಭೀರ ಪರಿಣಾಮ ಬೀರಿದೆ.
ಜನರೇ ಎಚ್ಚರಿಕೆವಹಿಸಿ
ದೀರ್ಘಾವಧಿವರೆಗೆ ಬಿಸಿಲಿನಲ್ಲಿ ಕೆಲಸ ಮಾಡುವವರಿಗೆ ಶಾಖ ಅಲೆ ಕಾಯಿಲೆಗಳಿಗೆ ತುತ್ತಾಗಲಿದ್ದಾರೆ. ಬಿಸಿಲಿನ ಪ್ರಖರತೆ ಇರುವಾಗ ರೈತರು,ಕೃಷಿ ಕಾರ್ಮಿಕರು, ಕ್ರೀಡಾಪಟುಗಳು ಶ್ರಮದಾಯಕ ಚಟುವಟಿಕೆ ತಪ್ಪಿಸಬೇಕು. ಚಿಕ್ಕ ಮಕ್ಕಳು, ವೃದ್ಧರು, ಗಂಭೀರ ಕಾಯಿಲೆಗಳಿಂದ ಒಳಲುತ್ತಿರುವ ರೋಗಿಗಳು ತಮ್ಮ ಆರೋಗ್ಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಪ್ರಯಾಣದ ಜತೆಗೆ ಕುಡಿಯವ ನೀರನ್ನು ಒಯ್ಯಬೇಕು.