ಪರೀಕ್ಷಾ ಒತ್ತಡ ತಗ್ಗಿಸುವ ಟೆಲಿಮನಸ್: - ಸಹಾಯವಾಣಿ ಮೊರೆ ಹೋಗುತ್ತಿರುವ ವಿದ್ಯಾರ್ಥಿಗಳು

Telemanas - 1
Published on

ಪಂಕಜ ಕೆ.ಎಂ. ಬೆಂಗಳೂರು

ಪರೀಕ್ಷೆ ಸಮಯದಲ್ಲಿ ಮಕ್ಕಳಲ್ಲಿ ಒತ್ತಡ ಹೆಚ್ಚಾಗಿ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವುದು ಸಹಜ. ಅದರಲ್ಲೂ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗಂತೂ ಇದು ಅಗ್ನಿ ಪರೀಕ್ಷೆಯೇ ಸರಿ. ಹಾಗಾಗಿ ಒತ್ತಡಕ್ಕೆ ಪರಿಹಾರ ಕಂಡುಕೊಳ್ಳಲು ಬಹುತೇಕ ಮಕ್ಕಳು ‘ಟೆಲಿ ಮನಸ್’ ಸಹಾಯವಾಣಿಯ ಮೊರೆ ಹೋಗುತ್ತಿದ್ದಾರೆ. ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆಯ (ನಿಮ್ಹಾನ್ಸ್) ಟೆಲಿ ಮನಸ್ ಸಹಾಯವಾಣಿಗೆ ನಿತ್ಯ ಸರಾಸರಿ 400-500 ಕರೆಗಳು ಬರುತ್ತವೆ. ಕಳೆದ ಒಂದು ತಿಂಗಳಿಂದ ಇವುಗಳಲ್ಲಿ 60-80 ಕರೆಗಳು ಪರೀಕ್ಷೆ ಕುರಿತದ್ದೇ ಆಗಿರುತ್ತವೆ ಎನ್ನುತ್ತಾರೆ ನಿಮ್ಹಾನ್ಸ್‌ನ ಮನೋವೈದ್ಯಶಾಸ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಪ್ರವೀಣ್ ರಾಜ್.

ಆತಂಕವೇ ಅಧಿಕ

ಸಹಾಯವಾಣಿಗೆ ಕರೆ ಮಾಡುವ ಬಹುತೇಕರು ಪರೀಕ್ಷೆ ಕುರಿತ ಆತಂಕ ಹೊಂದಿರುತ್ತಾರೆ. ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ ವಿದ್ಯಾರ್ಥಿಗಳು ಮಾತ್ರವಲ್ಲದೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುತ್ತಿರುವವರೂ ಆತಂಕದಿಂದಲೇ ಕರೆ ಮಾಡಿ ಸಲಹೆ ಪಡೆಯುತ್ತಾರೆ. ಇವರಲ್ಲಿ ಕೇವಲ ಓದಲು ಆಸಕ್ತಿ ಹೊಂದುವ ಬಗೆಗೆ ಮಾತ್ರವಲ್ಲದೆ, ಪರೀಕ್ಷೆ ಎಂದ ಕೂಡಲೇ ಎದೆ ಬಡಿತ ಜೋರಾಗಿದೆ, ಕೈಕಾಲುಗಳಲ್ಲಿ ನಡುಕ, ನಿದ್ರೆ ಬರದಿರುವುದು, ಹೊಟ್ಟೆ ಹಸಿವಾಗದಿರುವುದು ಹೀಗೆ ಬೇರೆ ಬೇರೆ ಆರೋಗ್ಯ ಸಮಸ್ಯೆಗಳ ಬಗ್ಗೆಯೂ ಹೇಳಿಕೊಳ್ಳುತ್ತಾರೆ.

ಶಿಕ್ಷಕರು ಹಾಗೂ ಪೋಷಕರಲ್ಲೀ ಭೀತಿ

ಪರೀಕ್ಷೆ ಎಂದರೆ ಶಿಕ್ಷಕರು ಹಾಗೂ ಪೋಷಕರಲ್ಲೂ ಭೀತಿ ಇದೆ. ಈ ಪರೀಕ್ಷೆ ಚೆನ್ನಾಗಿ ಮಾಡದಿದ್ದರೆ ಮಕ್ಕಳ ಭವಿಷ್ಯ ಏನೋ ಎಂಬ ಕಾರಣಕ್ಕೆ ಪೋಷಕರು, ಶಾಲೆಯಲ್ಲಿ ಮಕ್ಕಳಿಗೆ ಓದಿನ ಬಗ್ಗೆ ಆಸಕ್ತಿ ಮೂಡಿಸುವುದು ಹೇಗೆ? ಏಕಾಗ್ರತೆ ಹೊಂದುವುದು ಹೇಗೆ? ಪರೀಕ್ಷೆಯನ್ನು ಧೈರ್ಯವಾಗಿ ಬರೆಯುವಂತೆ ಮಾಡುವುದು ಹೇಗೆ? ಮಕ್ಕಳನ್ನು ನಿಯಂತ್ರಿಸುವುದು ಹೇಗೆ? ಇತ್ಯಾದಿ ಪ್ರಶ್ನೆಗಳೊಂದಿಗೆ ಪೋಷಕರು ಹಾಗೂ ಶಿಕ್ಷಕರೂ ಸಹ ಸಹಾಯವಾಣಿಗೆ ಕರೆ ಮಾಡಿ ಸಲಹೆ ಪಡೆಯುತ್ತಿದ್ದಾರೆ.

ಓದಿನಲ್ಲಿ ನಿರಾಸಕ್ತಿಗೆ ಕಾರಣಗಳು ಹಲವು

ಮಕ್ಕಳು ಓದಿನಲ್ಲಿ ನಿರಾಸಕ್ತಿ ಹೊಂದಲೂ ಕೇವಲ ಏಕಾಗ್ರತೆ ಕೊರತೆ, ನಿರುತ್ಸಾಹ ಮಾತ್ರವೇ ಕಾರಣ ಆಗಿರುವುದಿಲ್ಲ. ಕೆಲವೊಮ್ಮೆ ತಾವಿರುವ ಪರಿಸರವೂ ಪರಿಣಾಮ ಬೀರಲಿದೆ. ಅಂದರೆ ಕೌಟುಂಬಿಕ ಕಲಹ, ಪ್ರತಿ ವಿಚಾರದಲ್ಲೂ ಮಕ್ಕಳಿಗೆ ಪ್ರೋತ್ಸಾಹ ನೀಡುವ ಬದಲು ನಿಂದಿಸುವುದು, ಇತರೆ ಮಕ್ಕಳೊಂದಿಗೆ ಹೋಲಿಕೆ ಮಾಡಿ ಮಾತನಾಡುವುದು, ಪ್ರತಿ ವಿಚಾರಕ್ಕೂ ಬಯ್ಯುವುದು, ಕೆಲವೊಮ್ಮೆ ಆರೋಗ್ಯ ಸಮಸ್ಯೆಯೂ ಕಾರಣವಾಗಿರುತ್ತದೆ. ಅದನ್ನು ಅರಿತು ಮಕ್ಕಳಿಗೆ ಸೂಕ್ತ ಸಲಹೆ ನೀಡುವ ಕಾರ್ಯ ಟೆಲಿ ಮನಸ್ ಮಾಡುತ್ತಿದೆ.

ಸಹಾಯವಾಣಿ ನೆರವು

ಪರೀಕ್ಷೆ ಭಯದಿಂದ ಕರೆ ಮಾಡುವ ವಿದ್ಯಾರ್ಥಿಗಳಿಗೆ ಯಾವ ರೀತಿ ಓದಬೇಕು? ನಡುವೆ ವಿಶ್ರಾಂತಿ ಪಡೆಯುವುದು ಹೇಗೆ? ಪರೀಕ್ಷೆ ಬಗೆಗೆ ಗಾಬರಿ, ಭಯ ಕಡಿಮೆ ಮಾಡಿಕೊಳ್ಳುವುದು ಹೇಗೆ? ಓದಿದ್ದನ್ನು ನೆನಪಿನಲ್ಲಿ ಇಟ್ಟುಕೊಳ್ಳಲು ಏನು ಮಾಡಬೇಕು? ಎಂಬ ಸಲಹೆಗಳನ್ನು ಸಹಾಯವಾಣಿ ಮೂಲಕ ತಜ್ಞರು ನೀಡಲಿದ್ದಾರೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಲ್ಲಿ ಇತರೆ ಮಾನಸಿಕ ಸಮಸ್ಯೆ ಇದ್ದರೆ ಅದಕ್ಕೂ ಮನೋವೈದ್ಯರು ಪರಿಹಾರ ಒದಗಿಸುತ್ತಾರೆ. ಹಾಗಾಗಿ ಕಳೆದ ಒಂದು ವರ್ಷದಿಂದ ಸಹಾಯವಾಣಿಯಲ್ಲಿ ವಿಡಿಯೋ ಕಾಲ್ ಕನ್ಸಲ್‌ಟೇಷನ್ ಸೌಲಭ್ಯವನ್ನೂ ಕಲ್ಪಿಸಲಾಗಿದೆ. ಇದಕ್ಕಾಗಿಯೇ ಸಹಾಯವಾಣಿಯಲ್ಲಿ ಕಾರ್ಯನಿರ್ವಹಿಸುವ ಆಪ್ತಸಮಾಲೋಚಕರಿಗೆ ಅಗತ್ಯ ತರಬೇತಿ ನೀಡಲಾಗಿದೆ.

ಟೆಲಿ ಮನಸ್ 24/7

ಮಾನಸಿಕ ಅನಾರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಆಡಿಯೋ ಮತ್ತು ವಿಡಿಯೋ ಕರೆಗಳ ಮೂಲಕ ಆಪ್ತ ಸಮಾಲೋಚಕರನ್ನು ಸಂಪರ್ಕಿಸಿ, ಪರಿಹಾರೋಪಾಯ ಕಂಡುಕೊಳ್ಳಲು ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆಯ (ನಿಮ್ಹಾನ್ಸ್) 2022ರಲ್ಲಿ ಟೆಲಿ ಮನಸ್ ಸಹಾಯವಾಣಿಯಡಿ ಒದಗಿಸಲಾಗಿದೆ. ಇದರ ಮೂಲಕ ಈವರೆಗೂ ರಾಜ್ಯಾದ್ಯಂತ ಒಂದು ಲಕ್ಷಕ್ಕೂ ಅಧಿಕ ಮಂದಿ ಇದರ ಸೌಲಭ್ಯ ಪಡೆದುಕೊಂಡಿದ್ದಾರೆ. ಟೆಲಿ ಮನಸ್‌ನಲ್ಲಿ ವಾರದ ಎಲ್ಲ ದಿನಗಳು 24 ಗಂಟೆಗಳೂ ದೂರವಾಣಿ ಕರೆಗಳನ್ನು ಸ್ವೀಕರಿಸಲಾಗುವುದು.

‘‘ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ‘ಟೆಲಿ ಮನಸ್’ ಸಹಾಯವಾಣಿ ಹಾಗೂ ಸೇವೆ ಕುರಿತು ಪೋಸ್ಟರ್‌ಗಳನ್ನು ಹಾಕುವಂತೆ ಯುಜಿಸಿ ಸೂಚನೆ ನೀಡಿದೆ. ಇದರಿಂದ ಮಕ್ಕಳು ಪರೀಕ್ಷೆ ಮುನ್ನ ಹಾಗೂ ನಂತರ ಭಯದಿಂದಾಗಿ ದುಡಿಕಿನ ನಿರ್ಧಾರಗಳನ್ನು ಕೈಗೊಳ್ಳುವ ಬದಲು ಸಹಾಯವಾಣಿಗೆ ಕರೆ ಮಾಡಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಇಲ್ಲಿ ಕರೆ ಮಾಡುವವರ ಮಾಹಿತಿಯನ್ನು ಗೌಪ್ಯವಾಡಲಾಗುವುದು.’

- ಡಾ. ಪ್ರವೀಣ್ ರಾಜ್, ಸಹಾಯಕ ಪ್ರಾಧ್ಯಾಪಕ, ಮನೋವೈದ್ಯಶಾಸ ವಿಭಾಗ, ನಿಮ್ಹಾನ್ಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net