

ಹುಸೇನಿ ನಾಯಕ ಸಿರಗುಪ್ಪ
ತಾಲೂಕಿನ ತೆಕ್ಕಲಕೋಟೆ ಕೆರೆ ನೀರು ತಳ ತಲುಪಿದೆ. ಹೂಳು ತುಂಬಿದ ನೀರಷ್ಟೇ ಉಳಿದಿದ್ದು, ಇದನ್ನು ಕುಡಿಯಲು ಬಳಸದಿರಿ ಎಂದು ಪಟ್ಟಣ ಪಂಚಾಯಿತಿ ಅಧಿಕಾರಿಗಳು ನಿತ್ಯ ಪ್ರಚಾರ ಮಾಡುತ್ತಿದ್ದು, ಜೀವಜಲಕ್ಕಾಗಿ ಜನ ಪರದಾಡುತ್ತಿದ್ದಾರೆ. ಮಾರ್ಚ್, ಏಪ್ರಿಲ್‌ನಲ್ಲಿ ತುಂಗಭದ್ರಾ ಅಣೆಕಟ್ಟೆಯಿಂದ ಕಾಲುವೆಗೆ ಬರುತ್ತಿದ್ದ ನೀರನ್ನು ಕೆರೆಗೆ ಹರಿಸದಿರುವುದೇ ಸಮಸ್ಯೆಗೆ ಕಾರಣವಾಗಿದೆ.
ಬಳಕೆಗೆ ಬೋರ್‌ವೆಲ್‌ಗಳ ವ್ಯವಸ್ಥೆಯಿದ್ದರೂ ಕುಡಿವ ನೀರಿಗೆ ತೀವ್ರ ತೊಂದರೆಯಾಗಿದೆ. ಗ್ರಾಮಸ್ಥರು ಖಾಸಗಿ ಶುದ್ಧ ಕುಡಿವ ನೀರಿನ ಘಟಕಗಳನ್ನೇ ನೆಚ್ಚಿಕೊಂಡಿದ್ದಾರೆ. ಆದರೆ, ಆಗಾಗ ಕೈಕೊಡುವ ವಿದ್ಯುತ್‌ನಿಂದಾಗಿ ಹಗಲು-ರಾತ್ರಿ ಎನ್ನದೆ ಸರದಿಯಲ್ಲಿ ನಿಂತು ಕೊಂಡುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮದಲ್ಲಿ 86 ಬೋರ್‌ವೆಲ್‌ಗಳಿದ್ದು, ಅದರಲ್ಲಿ 80 ಕಾರ್ಯನಿರ್ವಹಿಸುತ್ತಿವೆ. 56 ಬೋರ್‌ವೆಲ್ ನೀರು ಕುಡಿಯಲು ಯೋಗ್ಯವಾಗಿವೆ. ಉಳಿದ 24ರಲ್ಲಿ ಯೊಗ್ಯವಿಲ್ಲ. ಇದು ಬಳಕೆಗೆ ಮಾತ್ರ ಉಪಯೋಗಿಸಬಹುದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ ಎನ್ನುತ್ತಾರೆ ಮುಖ್ಯಾಧಿಕಾರಿ.
ಸರ್ಕಾರದಿಂದ ಗ್ರಾಮದಲ್ಲಿ ಲಕ್ಷಾಂತರ ರೂ.ವೆಚ್ಚಮಾಡಿ ಒಂಬತ್ತು ಕಡೆ ನಿರ್ಮಿಸಿದ ಶುದ್ಧ್ದ ಕುಡಿವ ನೀರಿನ ಘಟಕಗಳಲ್ಲಿ ಆರು ಮಾತ್ರ ಸರಿಯಾಗಿವೆ. ಉಳಿದವು ರಿಪೇರಿಗೆ ಬಂದಿವೆ. ಖಾಸಗಿಯಾಗಿ ನಾಲ್ಕು ಕಡೆ ಇದ್ದರೂ ಗ್ರಾಮದ ಜನಸಂಖ್ಯೆಗೆ ಸಾಲದಾಗಿವೆ. ದುರಸ್ತಿಯಲ್ಲಿರುವ ಘಟಕಗಳನ್ನು ಸರಿಪಡಿಸುವಂತೆ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳಿಗೆ ಪಪಂಯಿಂದ ಪತ್ರ ಬರೆದರೂ ಪ್ರಯೋಜನವಾಗಿಲ್ಲ.
ಗ್ರಾಮದಲ್ಲಿ ಕೆರೆ ನಿರ್ಮಾಣ ಕಾರ್ಯಕ್ಕೆ 1984ರಲ್ಲಿ ಅಂದಿನ ಮುಖ್ಯಮಂತ್ರಿ ಆರ್.ಗುಂಡೂರಾವ್ ಭೂಮಿ ಪೂಜೆ ನೆರವೇರಿಸಿದ್ದರು. ಅಂದಿನ ಜನಸಂಖ್ಯೆಗೆ ಅನುಗುಣವಾಗಿ ಇದು ಸರಿಯಾಗಿತ್ತು. ಈಗ ಜನಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೆ ಹೋಗಿದ್ದು, ಸದ್ಯ 40 ಸಾವಿರ ಜನಸಂಖ್ಯೆ ಇದೆ.
ಈಗ ಹಳೆಯ ಕೆರೆಯಿಂದ ನೀರು ಪೂರೈಕೆ ಸಾಧ್ಯವಿಲ್ಲ ಎಂಬ ಕಾರಣದಿಂದ ಎರಡನೇ ಹಂತದ ಕುಡಿವ ನೀರಿನ ಯೋಜನೆಯನ್ನು ಹಿಂದಿನ ಶಾಸಕರಾಗಿದ್ದ ಎಂ.ಎಸ್.ಸೋಮಲಿಂಗಪ್ಪ ಅನುಷ್ಠಾನಕ್ಕೆ ತಂದಿದ್ದರೂ ಇರುವ ಕೆರೆಯಲ್ಲೇ ಸ್ವಲ್ಪ ಹೆಚ್ಚಿನ ಮಟ್ಟದಲ್ಲಿ ನೀರು ಸಂಗ್ರಹವಾದರೂ ಸಾಲದಾಗಿದೆ. ಕೆರೆಯ ವಿಸ್ತೀರ್ಣ ಹೆಚ್ಚಿಸಿದರೆ ಮಾತ್ರ ಪರಿಹಾರ ಸಾಧ್ಯ ಎಂಬುದು ಗ್ರಾಮಸ್ಥರಾದ ಎಚ್.ರಾಮನಾಥ, ಕೆ.ಮಾರೆಪ್ಪ, ಈರಣ್ಣ, ಕೆ.ರಮೇಶ ಅಭಿಪ್ರಾಯ.
ಬೇಸಿಗೆಯಲ್ಲಿ ಗ್ರಾಮಕ್ಕೆ ಸಾಕಾಗುವಷ್ಟು ನೀರನ್ನು ಕೆರೆಯಲ್ಲಿ ಸಂಗ್ರಹಿಸಲಾಗಿತ್ತು. ಆದರೆ, ವಿಧಾನಸಭೆ ಚುನಾವಣೆ ವರ್ಷವಾದ್ದರಿಂದಾಗಿ ವಾರ್ಡ್‌ಗಳಲ್ಲಿ ಎರಡು ಮೂರು ದಿನಗಳಿಗೆ ಒಮ್ಮೆ ನೀರು ಬಿಡುವಂತೆ ಎಲ್ಲ ಪಕ್ಷದ ಮುಖಂಡರು ಒತ್ತಡ ಹಾಕಿದ್ದರಿಂದಾಗಿ ಈಗ ಖಾಲಿಯಾಗಿದೆ. ವ್ಯವಸ್ಥಿತ ನೀರು ಸರಬರಾಜು ಮಾಡಿದ್ದರೆ ಈ ತೊಂದರೆ ಇರುತ್ತಿರಲಿಲ್ಲ ಎಂದು ಜನಪ್ರತಿನಿಧಿಗಳ ವಿರುದ್ಧ ಹೆಸರು ಹೇಳಲು ಇಚ್ಛಿಸದ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸುತ್ತಾರೆ.
ಜನಸಂಖ್ಯೆಗೆ ಅನುಗುಣವಾಗಿ ಕೆರೆ ಅಭಿವೃದ್ಧಿಪಡಿಸಬೇಕು. ಬೇಸಿಗೆಯಲ್ಲಿ ಸಮಸ್ಯೆ ಉಂಟಾಗುತ್ತದೆ ಎಂದು ಅರಿವಿದ್ದರೂ ಅಧಿಕಾರಿಗಳ ತಾತ್ಸಾರದಿಂದ ಬೋರ್‌ವೆಲ್ ಅಥವಾ ನೀರಿನ ಘಟಕಗಳನ್ನು ಅವಲಂಬಿಸಬೇಕಾಗಿದೆ. ಎಸ್.ಸಿದ್ದೇಶ್ವರಪಪಂ ಸದಸ್ಯ, ತೆಕ್ಕಲಕೋಟೆ ಸಾರ್ವಜನಿಕರಿಗೆ ನೀರಿನ ತೊಂದರೆಯಾಗದಂತೆ ಬೋರ್‌ವೆಲ್‌ಗಳ ದುರಸ್ತಿ, ಶುದ್ಧ ಕುಡಿವ ನೀರಿನ ಘಟಕಗಳ ಮೇಲ್ವಿಚಾರಣೆಯಂಥ ಎಲ್ಲ ವ್ಯವಸ್ಥೆ ಮಾಡುತ್ತಿದ್ದೇವೆ. ತುಂಗಭದ್ರಾ ಅಣೆಕಟ್ಟೆಗೆ ಒಳಹರಿವು ಬರುತ್ತಿದ್ದು, ಶೀಘ್ರದಲ್ಲೇ ಕಾಲುವೆಗೆ ನೀರು ಬರಬಹುದು. ನಾಲೆಗೆ ನೀರು ಬಂದರೆ ಸಮಸ್ಯೆ ಬಗೆಹರಿಯಲಿದೆ. ಪರಶುರಾಮ ನಾಯಕಪಪಂ ಮುಖ್ಯಾಧಿಕಾರಿ, ತೆಕ್ಕಲಕೋಟೆ