More

    ಕುಡಿವ ನೀರು ಯೋಜನೆ ಕಾಮಗಾರಿ ಅಪೂರ್ಣ, ಚಾಲನೆ ನೀಡಿ ಆರು ವರ್ಷವಾದರೂ ಮುಗಿದಿಲ್ಲ ಕೆಲಸ

    ವಿಜಯವಾಣಿ ವಿಶೇಷ ಮುದಗಲ್
    ನಗರ ನೀರು ಸರಬರಾಜು ಯೋಜನೆಯಡಿ 2014ರಲ್ಲಿ ಕ್ರಿಯಾ ಯೋಜನೆಯಂತೆ ಕೈಗೆತ್ತಿಕೊಂಡಿದ್ದ ನಗರ ಕುಡಿವ ನೀರು ಸರಬರಾಜು ಯೋಜನೆ ಕಾಮಗಾರಿ ಆರು ವರ್ಷವಾದರೂ ಮುಗಿದಿಲ್ಲ. ಕುಡಿವ ನೀರು ಸಿಗದೆ ನಿತ್ಯ ನಾಗರಿಕರ ಗೋಳು ತಪ್ಪುತ್ತಿಲ್ಲ!

    ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿ. (ಕೆಯುಐಡಿ) ಮೂಲಕ ಮುದಗಲ್ ಸೇರಿ ರಾಜ್ಯದ 16 ನಗರಗಳಲ್ಲಿ ನೀರು ಸರಬರಾಜು ಮತ್ತು ಒಳ ಚರಂಡಿ ಒದಗಿಸುವ ಯೋಜನೆ ಜಾರಿಗೆ ತರಲಾಗಿದೆ.

    2014 ರಲ್ಲಿ ಕ್ರಿಯಾ ಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಕೆಯಾಗಿದ್ದರಿಂದ 29.40 ಕೋಟಿ ರೂ.ವೆಚ್ಚದಲ್ಲಿ 24 ಗಂಟೆ ಕುಡಿವ ನೀರು ಸರಬರಾಜು ಯೋಜನೆ ಮಂಜೂರು ಮಾಡಲಾಗಿದೆ. ಈ ಕಾಮಗಾರಿಯನ್ನು ನೀರು ಸರಬರಾಜು, ಒಳಚರಂಡಿ ಹಾಗೂ ಟಾಟಾ ಕನ್ಸಲ್ಟಿಂಗ್ ಇಂಜಿನಿಯರ್ ಕಂಪನಿಗೆ ವಹಿಸಿದ್ದು, ಚಾಲನೆ ನೀಡಿ ಆರು ವರ್ಷವಾದರೂ ಪೂರ್ಣವಾಗಿಲ್ಲ.

    ಪಟ್ಟಣದಲ್ಲಿ 23 ವಾರ್ಡ್, 3,800 ಮನೆಗಳಿವೆ. ಪ್ರಸ್ತುತ ಶಾಶ್ವತ ಕುಡಿವ ನೀರು ಯೋಜನೆಯಲ್ಲಿ ಪ್ರತಿಯೊಬ್ಬರಿಗೆ ದೈನಂದಿನ ಬಳಕೆಗೆ ತಲಾ 70 ಲೀಟರ್ ಆಗಿದೆ. ದಿನಕ್ಕೆ 2.27 ದಶಲಕ್ಷ ಲೀಟರ್ ನೀರು ಸಂಸ್ಕರಣೆ ಮಾಡಿ ಸಂಗ್ರಹಿಸಿ 70 ಸಾವಿರ ಲೀ. ಸರಬರಾಜು ಮಾಡಲಾಗುತ್ತಿದೆ. ಆದರೆ ಈ ನೀರು ಪ್ರತಿ ವಾರ್ಡ್‌ಗೂ ಸರಬರಾಜು ಆಗದಿರುವುದರಿಂದ ತೊಂದರೆಯಾಗಿದೆ.

    ಇದನ್ನೂ ಓದಿ: ಕುಡಿದ ಮತ್ತಿನಲ್ಲಿದ್ದವನಿಗೆ 38ಕ್ಕೂ ಹೆಚ್ಚು ಬಾರಿ ಬೂಟಿನಿಂದ ಹೊಡೆದ ಕಾನ್ಸ್‌ಟೇಬಲ್​​..!

    2008-09ರಲ್ಲಿ ನಿರ್ಮಿಸಿದ ಕೃಷ್ಣಾ ನದಿಯಿಂದ ಪಟ್ಟಣಕ್ಕೆ ಸರಬರಾಜು ಮಾಡುವ ಶಾಶ್ವತ ಕುಡಿವ ನೀರು ಯೋಜನೆ ಜನಸಂಖ್ಯೆಗೆ ತಕ್ಕಷ್ಟು ಸಿಗುತ್ತಿಲ್ಲ. ಸರ್ಕಾರ ನಗರ ನೀರು ಸರಬರಾಜು ಯೋಜನೆ ಮೂಲಕ ನಾಗರಿಕರಿಗೆ ನೀರು ಕಲ್ಪಿಸಲು ಮುಂದಾಗಿತ್ತು. ಆದರೆ ಕಾಮಗಾರಿ ಅಪೂರ್ಣದಿಂದ ಜನತೆ ಸಮಸ್ಯೆ ಎದುರಿಸುವಂತಾಗಿದೆ. ಕಾಮಗಾರಿ ಗುತ್ತಿಗೆ ಪಡೆದ ಆಂಧ್ರ ಮೂಲದವರು ಕೆಲಸ ಅರ್ಧಕ್ಕೆ ಬಿಟ್ಟು ಹೋಗಿದ್ದಾರೆ.

    ನ್ನಾಪುರಹಟ್ಟಿ ಸಮೀಪದ ಜಲ ಶುದ್ಧೀಕರಣ ಘಟಕದ ಪಕ್ಕದಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ನೀರು ಶುದ್ದೀಕರಣ ಘಟಕ ಮತ್ತು ತರಕಾರಿ ಮಾರುಕಟ್ಟೆಯಲ್ಲಿ ಓವರ್‌ಹೆಡ್ ಟ್ಯಾಂಕ್, ಅಬ್ದುಲ್ ರವೂಫ್ ಲೇಹೌಟ್‌ದಲ್ಲಿ ನೀರು ಸಂಗ್ರಹ ಟ್ಯಾಂಕ್ ಕಾಮಗಾರಿ ಅರ್ಧಕ್ಕೆ ಕೈಬಿಡಲಾಗಿದೆ.

    ಕುಡಿವ ನೀರು ಯೋಜನೆ ಕಾಮಗಾರಿ ಅಪೂರ್ಣ, ಚಾಲನೆ ನೀಡಿ ಆರು ವರ್ಷವಾದರೂ ಮುಗಿದಿಲ್ಲ ಕೆಲಸ

    ಯೋಜನೆಯ ಉದ್ದೇಶ

    ಜನರಿಗೆ ನಿರಂತರ ನೀರು ಸರಬರಾಜು ವ್ಯವಸ್ಥೆ ಕಲ್ಪಿಸುವುದು ನಗರ ನೀರು ಸರಬರಾಜು ಯೋಜನೆ ಉದ್ದೇಶವಾಗಿದೆ. 2011ರ ಪ್ರಕಾರ ಪಟ್ಟಣದಲ್ಲಿ 22,731 ಜನಸಂಖ್ಯೆ ಇದೆ. ಆದರೆ ಮುಂದಿನ 30 ವರ್ಷಗಳಲ್ಲಿ ಅಂದರೆ 2046ಕ್ಕೆ 35,883 ಜನಸಂಖ್ಯೆ ಆಗಲಿದೆ. ಪ್ರತಿ ದಿನ ಜನರ ಅವಶ್ಯತೆಗೆ ಅನುಗುಣವಾಗಿ ಕುಡಿವ ನೀರು ಕಲ್ಪಿಸಲು ಈ ಯೋಜನೆ ಅವಶ್ಯಕವಾಗಲಿದೆ.

    ಯೋಜನೆಯಡಿ 10 ಲಕ್ಷ ಲೀ. ಮತ್ತು 2.5 ಲಕ್ಷ ಲೀ ಸಂಗ್ರಹ ಸಾಮರ್ಥ್ಯದ ಒಂದು ನೀರಿನ ಟ್ಯಾಂಕ್ ನಿರ್ಮಿಸಿ ಕೊಳವೆ ಮೂಲಕ ಸರಬರಾಜು ಮಾಡಿ ನೀರಿನ ಸಮಸ್ಯೆಗೆ ಪರಿಹಾರ ಕಲ್ಪಿಸಲು ಕುಡಿವ ನೀರು ಸರಬರಾಜು ಯೋಜನೆ ಅನುಕೂಲವಾಗಬೇಕಾಗಿತ್ತು. ಆದರೆ ಅಧಿಕಾರಿ, ಜನಪ್ರತಿನಿಧಿ ಹಾಗೂ ಗುತ್ತಿಗೆದಾರರ ನಿರ್ಲಕ್ಷದಿಂದ ಸರ್ಕಾರದ ಕೋಟ್ಯಾಂತರ ರೂ.ವ್ಯರ್ಥವಾಗುತ್ತಿದೆ.

    2017-18ರಲ್ಲಿ ಶಾಸಕನಾಗಿದ್ದಾಗ ಪಟ್ಟಣಕ್ಕೆ ಕುಡಿವ ನೀರು ಸರಬರಾಜು ಕಾಮಗಾರಿ ಮಂಜೂರು ಮಾಡಿಸಲಾಗಿತ್ತು. ಆದರೆ ಇದುವರೆಗೂ ಪೂರ್ಣಗೊಳಿಸದಿರುವುದಕ್ಕೆ ಕಾರಣ ಕೇಳಿ ಅಧಿಕಾರಿಗಳು ನೋಟಿಸ್ ಜಾರಿಮಾಡಿದ್ದು, ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಸೂಚಿಸಿದ್ದೇನೆ.
    ಮಾನಪ್ಪ ವಜ್ಜಲ್

    ಶಾಸಕ ಲಿಂಗಸುಗೂರು

    ಪಟ್ಟಣದಲ್ಲಿ ಎಲ್ಲ ವಾರ್ಡ್‌ಗೂ ಇನ್ನೂ ಸರಿಯಾಗಿ ಕುಡಿವ ನೀರು ಸರಬರಾಜು ಆಗುತ್ತಿಲ್ಲ. ನಿರಂತರ ಕುಡಿವ ನೀರು ಸರಬರಾಜು ಯೋಜನೆ ಪೂರ್ಣವಾದರೆ ನಾಗರಿಕರಿಗೆ ಕುಡಿವ ನೀರಿನ ಸಮಸ್ಯೆ ಬಗೆಹರಿಯಲಿದೆ. ಇದಕ್ಕೆ ಅಧಿಕಾರಿಗಳು, ಚುನಾಯಿತ ಸದಸ್ಯರು ಹೆಚ್ಚಿನ ಆಸಕ್ತಿ ವಹಿಸಬೇಕಾಗಿದೆ.
    ಸಂಜೀವ ಹಂಚಿನಾಳ
    ವೆಂಕಟರಾಯನಪೇಟೆ ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts