

ಬೆಂಗಳೂರು: ಸಮಾಜದಲ್ಲಿ ಹೇಗೆ ಬಾಳಬೇಕು, ಸಾಮಾಜಿಕ ಜವಾಬ್ದಾರಿ ಏನು? ಎಂಬುದನ್ನು ಹಲವು ವ್ಯಕ್ತಿತ್ವವುಳ್ಳ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರು ಅಚ್ಚುಕಟ್ಟಾಗಿ ತಿಳಿಸಿಕೊಟ್ಟಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್ ತಿಳಿಸಿದ್ದಾರೆ.
ಮೆ.ಮೂನಿಸ್ವಾಮಿ ಆ್ಯಂಡ್ ಸನ್ಸ್, ಎಂ.ಚಂದ್ರಶೇಖರ್ ಪ್ರತಿಷ್ಠಾನ, ಪೂರ್ಣಚಂದ್ರ ಸಾಂಸತಿಕ ಅಧ್ಯಯನ ಕೇಂದ್ರ ಬನ್ನೇರುಟ್ಟ ರವಿಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ಆಯೋಜಿಸಿದ್ದ 'ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಸಮಗ್ರ ಕೃತಿ ಜಗತ್ತು' 14 ಸಂಪುಟಗಳ ಬಿಡುಗಡೆ, 'ತೇಜಸ್ವಿ ಎಂಬ ವಿಸ್ಮಯ' ಸಾಕ್ಷ್ಯಚಿತ್ರ ಸರಣಿ ಲೋಕಾರ್ಪಣೆ, 'ಪೂರ್ಣಚಂದ್ರ' ಚಿತ್ರ ಸಂಪುಟ ಬಿಡುಗಡೆ ಹಾಗೂ 'ತೇಜಸ್ವಿ ಸಾಹಿತ್ಯ: ಸಾಂಸತಿ ಹಬ್ಬ' ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆತ್ಮತೃಪ್ತಿಯಿರುವ ಕೆಲಸ ಮಾಡಬೇಕು. ಆದರೆ ಸಮಾಜದಲ್ಲಿ ಆಸೆ, ಸ್ವಾರ್ಥಕ್ಕೆ ಕೊನೆಯಿಲ್ಲದಂತಾಗಿದೆ. ಏನು ಕೊಟ್ಟರೂ ಸಾಲುವುದಿಲ್ಲ ಎನ್ನುವ ಮಂದಿ ವರ್ತಮಾನದಲ್ಲಿ ಹೆಚ್ಚಿದ್ದಾರೆ. ಇಂತಹ ಕಾಲಟ್ಟದಲ್ಲಿ ತೇಜಸ್ವಿ ಅವರ ವ್ಯಕ್ತಿತ್ವ ಆಶ್ಚರ್ಯ ಹುಟ್ಟಿಸುತ್ತದೆ. ಸಮಾಜದಲ್ಲಿ ಹೇಗೆ ಬದುಕಬೇಕು ಎಂಬುದನ್ನು ತೋರಿಸಿಕೊಟ್ಟರು. ಅವರ ಬರವಣಿಗೆ ಹಾಗೂ ಬದುಕು ಸ್ಫೂರ್ತಿದಾಯಕ ಎಂದರು.
ನಿರ್ದಿಷ್ಟ ಕ್ಷೇತ್ರದಲ್ಲಿ ಸಾಧನೆ ಮಾಡುವುದು ಜೀವನದ ಬಹುದೊಡ್ಡ ಸಾಧನೆಯಾಗಿರುತ್ತದೆ. ಆದರೆ ತೇಜಸ್ವಿ ಅವರು ಕೃಷಿ, ಸಾಹಿತ್ಯ, ಪರಿಸರ, ಛಾಯಾಗ್ರಹಣ, ಶಿಕ್ಷಣ ಇತ್ಯಾದಿ ವಿಷಯಗಳ ಬಗ್ಗೆ ಜ್ಞಾನ ಹೊಂದಿದ್ದರು. ಹೀಗಾಗಿ ಅವರ ಸಂದೇಶ, ವಿಚಾರಗಳನ್ನು ಆಗಾಗ್ಗೆ ಸಮಾಜದಲ್ಲಿ ತಿಳಿಸಿಕೊಡುವುದು ಮುಖ್ಯವಾಗಿರುತ್ತದೆ. ಕಾಲಕಾಲಕ್ಕೆ ಅವರ ವಿಚಾರಗಳ ಅವಲೋಕನ ಆಗಬೇಕಿದೆ.
ತೇಜಸ್ವಿ ಅಂದು ಹೇಳಿದ್ದ ಪ್ರಾಕೃತಿಕ ಸಮಸ್ಯೆಗಳು ಇಂದು ನಮ್ಮ ಕಣ್ಣ ಮುಂದಿವೆ. ಭೂಮಂಡಲವನ್ನು ಹೇಗೆ ಕಾಪಾಡಬೇಕು, ಈ ನಿಟ್ಟಿನಲ್ಲಿ ಜನರು ಕರ್ತವ್ಯಗಳೇನು ಎಂಬ ಬಗ್ಗೆ ಸ್ಪಷ್ಟ ಸಂದೇಶ ನೀಡಿದ್ದಾರೆ. ಈ ಸೂಕ್ಷ್ಮತೆಗಳನ್ನು ಅರಿತುಕೊಂಡು ಬದುಕುವುದು ಮುಖ್ಯವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಹಿರಿಯ ಸಾಹಿತಿ ಪ್ರೊ. ಬಿ.ಎನ್. ಶ್ರೀರಾಮ್ ಮಾತನಾಡಿ, ತೇಜಸ್ವಿ ಅವರ ಸಾಹಿತ್ಯ ಪ್ರಸಿದ್ಧವಾಗಲು, ಅವರು ಓದುಗರೊಂದಿಗೆ ನಡೆಸುತ್ತಿದ್ದ ಸಂವಹನ ಕಾರಣ. ಬರೆದುದನ್ನು ಓದುಗರು ಅರ್ಥೈಸಿಕೊಳ್ಳುತ್ತಾರೋ, ಇಲ್ಲವೋ ಎಂಬುದನ್ನು ಚೆನ್ನಾಗಿ ಅರಿತುಕೊಂಡಿದ್ದರು. ಕರ್ವಾಲೋ ಮತ್ತು ಮಿಸ್ಸಿಂಗ್ ಲಿಂಗ್ ಕೃತಿಯ ಓದು, ತೇಜಸ್ವಿ ಅವರ ಸಂವಹನ ಗುಣಗಳನ್ನು ತಿಳಿಸುತ್ತದೆ. ತೇಜಸ್ವಿ ಅವರ ಕಥೆಗಳಲ್ಲಿ ಬರುವ ತಿಳಿಹಾಸ್ಯ, ತುಂಟಾಟ, ಸಾಹಿತ್ಯ, ರಾಜಕೀಯ ಎಲ್ಲವೂ ಕುವೆಂಪು ಅವರಿಂದ ಬಳುವಳಿಯಾಗಿ ಬಂದಿದ್ದವು. ಕಠಿಣವಾದ ವಿಷಯವನ್ನು ಸರಳ ಪದಗಳಲ್ಲಿ ಬರೆಯುವ ಕೌಶಲ್ಯ ಹೊಂದಿದ್ದರು ಎಂದರು.
ಅನುಭವಿಸಿ ಬರೆಯುತ್ತಿದ್ದರಿಂದ ತೇಜಸ್ವಿ ಅವರ ಕೃತಿಗಳು ಓದುಗರ ಹೃದಯಕ್ಕೆ ನೇರವಾಗಿ ಮುಟ್ಟುತ್ತಿತ್ತು ಹಾಗೂ ಯುವಜನತೆಗೆ ಹತ್ತಿರವಾಗುತ್ತಿತ್ತು. ಇಂದಿನ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಜಗತ್ತಿನಲ್ಲಿ ನ್ಯಾಚುರಲ್ ಇಂಟಲಿಜೆನ್ಸ್ ಬಗ್ಗೆ ಬರೆಯುತ್ತಿದ್ದರು.
- ಡಾ.ಕೆ. ಚಿದಾನಂದಗೌಡ, ವಿಶ್ರಾಂತ ಕುಲಪತಿ, ಕುವೆಂಪು ವಿ.ವಿ.
ಹಂಪಿ ಕನ್ನಡ ವಿ.ವಿ. ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಕೆ.ಸಿ ಶಿವಾರೆಡ್ಡಿ, ಎಂ. ಚಂದ್ರಶೇಖರ್ ಪ್ರತಿಷ್ಠಾನದ ಸದಸ್ಯೆ ಸರೋಜ ಎಂ. ಚಂದ್ರಶೇಖರ್, ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ನಾಡೋಜ ಡಾ. ವೂಡೇ ಪಿ. ಕೃಷ್ಣ, ಕನ್ನಡ ವಿ.ವಿ. ಕುಲಪತಿ ಡಾ.ಡಿ.ವಿ. ಪರಮಶಿವಮೂರ್ತಿ, ಗಾಂಧಿ ಭವನದ ಕಾರ್ಯಧ್ಯ ಎನ್.ಆರ್.ವಿಶುಕುಮಾರ್, ಎಂ.ಚಂದ್ರಶೇಖರ್ ಪ್ರತಿಷ್ಠಾನದ ಸದಸ್ಯ ಕಾರ್ಯದರ್ಶಿ ಎಂ.ಸಿ.ನರೇಂದ್ರ, ಇತರರಿದ್ದರು.