

ಕೆ.ಆರ್.ನಗರ: ಶವಸಂಸ್ಕಾರಕ್ಕೆ ಸೂಕ್ತ ಸ್ಮಶಾನವಿಲ್ಲದೆ ತಾಲೂಕಿನ ಹೊಸಹಳ್ಳಿ ಗ್ರಾಮದ ಪರಿಶಿಷ್ಟ ಸಮುದಾಯದವರು ಅ.6ರಂದು ಮೃತದೇಹವನ್ನು ದೋಣಿಯ ಮೂಲಕ ಕಾವೇರಿ ನದಿಯ ಹಿನ್ನೀರ ಪ್ರದೇಶಕ್ಕೆ ತೆಗೆದುಕೊಂಡು ಹೋಗಿ ಶವ ಸಂಸ್ಕಾರ ಮಾಡಿದ್ದರು.
ಈ ಬಗ್ಗೆ ಅ.7ರಂದು ವಿಜಯವಾಣಿ ಪತ್ರಿಕೆಯಲ್ಲಿ ‘ಅಂತ್ಯಕ್ರಿಯೆಗೆ ಪರಿಶಿಷ್ಟರ ಪರದಾಟ’ ಎಂಬ ತಲೆ ಬರಹದಡಿಯಲ್ಲಿ ವಿಸ್ತೃತ ವರದಿ ಪ್ರಕಟವಾದ ಹಿನ್ನೆಲೆಯಲ್ಲಿ ಸೋಮವಾರ ಕಂದಾಯ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎಸ್.ಸುಮಿತ್ ಮತ್ತು ಕಂದಾಯ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ತೆರಳಿದ ತಹಸೀಲ್ದಾರ್ ಜಿ.ಸುರೇಂದ್ರಮೂರ್ತಿ ಪರಿಶೀಲನೆ ನಡೆಸಿದರು.
ಅಲ್ಲದೆ ಮಂಗಳವಾರ ಶಾಸಕ ಡಿ.ರವಿಶಂಕರ್ ಅವರಿಗೆ ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಬಿ.ಮಂಜುನಾಥ್ ಮತ್ತು ಎಚ್.ಎಸ್.ಮಹದೇವ್ ಅವರ ನೇತೃತ್ವದಲ್ಲಿ ಸ್ಮಶಾನಕ್ಕೆಂದು ಮಂಜೂರಾಗಿರುವ ಜಾಗವನ್ನು ಗುರುತಿಸಿ ಒತ್ತುವರಿ ತೆರವು ಮಾಡಿಸಿಕೊಡಬೇಕೆಂದು ಮನವಿ ಸಲ್ಲಿಸಿದರು.
ಇದಕ್ಕೆ ಸ್ಪಂದಿಸಿದ ಶಾಸಕ ಡಿ.ರವಿಶಂಕರ್ ಕೂಡ ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ಮತ್ತು ಕಂದಾಯ ಅಧಿಕಾರಿಗಳೊಂದಿಗೆ ಚರ್ಚಿಸಿದರಲ್ಲದೆ ಆದಷ್ಟೂ ಬೇಗ ಸ್ಮಶಾನಕ್ಕೆ ಸರ್ಕಾರಿ ಜಾಗವನ್ನು ಗುರುತಿಸಿ ಅದನ್ನು ಮಂಜೂರು ಮಾಡಿಕೊಡಿಸುವುದಾಗಿ ತಿಳಿಸಿದರು. ಅಲ್ಲಿಯವರೆಗೆ ತಾತ್ಕಾಲಿಕವಾಗಿ ಬೇರೆ ಜಾಗದಲ್ಲಿ ಶವ ಸಂಸ್ಕಾರ ಮಾಡಲು ವ್ಯವಸ್ಥೆ ಮಾಡಲು ತಹಸೀಲ್ದಾರರಿಗೆ ಸೂಚಿಸಿದರು.