ರೈತರಿಗಾಗಿ ತಾಂತ್ರಿಕ ಆಂದೋಲನ

Published on

 ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ.ಲತಾ ಆರ್. ಕುಲಕರ್ಣಿ ಹೇಳಿಕೆ

ವಿಜಯವಾಣಿ ಸುದ್ದಿಜಾಲ ಮಾಗಡಿ

ರೈತರಿಗೆ ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ಉತ್ತಮವಾದ ಬೀಜ ಮತ್ತು ನವೀನ ತಂತ್ರಜ್ಞಾನಗಳ ಪರಿಚಯ ಮಾಡಿಕೊಡಲು ಕೃಷಿ ವಿಜ್ಞಾನ ಕೇಂದ್ರದಲ್ಲಿ ಮುಂಗಾರು ಹಂಗಾಮಿನ ತಾಂತ್ರಿಕ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ.ಲತಾ ಆರ್. ಕುಲಕರ್ಣಿ ಹೇಳಿದರು.

ತಾಲೂಕಿನ ಚಂದೂರಾಯನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಸಮಾರೋಪ ಮತ್ತು ಮುಂಗಾರು ಹಂಗಾಮಿನ ತಾಂತ್ರಿಕ ಆಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿವಿಧ ಇಲಾಖೆಗಳ ಯೋಜನೆಗಳನ್ನು ಪರಿಚಯ ಮಾಡಿಸಲು ರೈತರಿಗೆ ಒಂದೇ ಸೂರಿನಡಿ ಅನುವು ಮಾಡಿಕೊಡುವ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ರೈತರು ಇದರ ಪ್ರಯೋಜನ ಪಡೆಯಬೇಕು ಎಂದರು.

ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಸಹ ವಿಸ್ತರಣಾ ನಿರ್ದೇಶಕ ಡಾ.ಕೆ.ಪಿ. ರಘುಪ್ರಸಾದ್ ಮಾತನಾಡಿ, ಹೊಸ ತಂತ್ರಜ್ಞಾನ ಹಾಗೂ ವಿವಿಧ ಬಿತ್ತನೆ ಬೀಜಗಳು ರೈತರು ಇರುವಲ್ಲಿಯೇ ಒದಗಿಸಬೇಕೆಂಬುದು ಕಾರ್ಯಕ್ರಮದ ಉದ್ದೇಶವಾಗಿದೆ. ಕಾರ್ಯಕ್ರಮದಲ್ಲಿ ದೊರೆತ ಮಾಹಿತಿ ಮತ್ತು ತಂತ್ರಜ್ಞಾನಗಳನ್ನು ರೈತರು ಅಳವಡಿಸಿಕೊಂಡಾಗ ಮಾತ್ರ ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯ ಎಂದರು.

ತಾಲೂಕು ಸಹಾಯಕ ಕೃಷಿ ನಿರ್ದೇಶಕಿ ವಿಜಯ ಸವನೂರು ಮಾತನಾಡಿ, ಕೃಷಿ ಇಲಾಖೆಯಿಂದ ಪ್ರಸ್ತುತ ವರ್ಷ ದೊರೆಯುವ ಸೌಲಭ್ಯಗಳಾದ ಬಿತ್ತನೆ ಬೀಜ, ಮಣ್ಣು ಪರೀಕ್ಷೆ, ಬೆಳೆ ಸಮೀಕ್ಷೆ, ಕೃಷಿ ಭಾಗ್ಯ ಯೋಜನೆ, ಬರ ನಿರ್ವಹಣೆ, ಕೃಷಿ ಯಂತ್ರೋಪಕರಣ ಯೋಜನೆ, ಕೃಷಿ ಸಂಸ್ಕರಣೆ, ನರೇಗಾ ಮತ್ತು ಆರ್.ಕೆ.ವಿ.ವೈ.ರಫತಾರ್ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ್ ಮಾತನಾಡಿ, ಪಿ.ಎಂ.ಕೆ.ಎಸ್.ವೈ. ರಾಷ್ಟ್ರೀಯ ತೋಟಗಾರಿಕಾ ಮಿಷನ್, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ, ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ, ಪುನಃಶ್ಚೇತನ ಯೋಜನೆ, ತೋಟಗಾರಿಕಾ ಬೆಳೆಗಳ ಸಹಾಯಧನ ಯೋಜನೆಗಳ ಬಗ್ಗೆ ತಿಳಿಸಿದರು.

ಕೃಷಿ ಇಲಾಖೆ ಜಿಲ್ಲಾ ಜಂಟಿ ನಿರ್ದೇಶಕಿ ಅಂಬಿಕಾ, ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀನಿವಾಸ್, ಪಶು ವೈದ್ಯಾಧಿಕಾರಿ ಜಯಶ್ರೀ, ಅರಣ್ಯಾಧಿಕಾರಿ ಕೆ.ಟಿ.ಮಂಜುನಾಥ್, ಬೀಜ ತಂತ್ರಜ್ಞಾನ ಮತ್ತು ಸಂಶೋಧನಾ ಕೇಂದ್ರದ ಹಿರಿಯ ವಿಜ್ಞಾನಿ ಡಾ. ಶಾಂತರಾಜು, ಬೇಸಾಯಶಾಸ ವಿಜ್ಞಾನಿ ಡಾ. ದೀನೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net