

ತಿ.ನರಸೀಪುರ: ಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯ ಸಭಾಂಗಣದಲ್ಲಿ ಬುಧವಾರ ರೈತರಿಗೆ ತಾಲೂಕು ಮಟ್ಟದ ತಾಂತ್ರಿಕ ಕಾರ್ಯಾಗಾರ ಆಯೋಜಿಸಲಾಗಿತ್ತು.
ಕಾರ್ಯಾಗಾರದಲ್ಲಿ ಸುತ್ತೂರು ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ತಜ್ಞ ಡಾ.ಶ್ಯಾಮರಾಜು ಹಾಗೂ ಕೀಟರೋಗ ತಜ್ಞ ಡಾ.ಪ್ರಸಾದ್ ಮುಂಗಾರು ಆರಂಭದ ಹಿನ್ನೆಲೆ ರೈತರು ಕೈಗೊಳ್ಳಬೇಕಾದ ಬೇಸಾಯ ಕ್ರಮಗಳು ಹಾಗೂ ಆಧುನಿಕ ತಂತ್ರಜ್ಞಾನ, ಸುರಕ್ಷಿತ ಕೀಟನಾಶಕ ಬಳಕೆ, ಸಮತೋಲನ, ರಸಗೊಬ್ಬರ ಬಳಕೆ ಕುರಿತು ವಿವರಿಸಿದರು.
ಸಹಾಯಕ ಕೃಷಿ ನಿರ್ದೇಶಕಿ ಕೆ.ಎಸ್.ಸುಹಾಸಿನಿ ಮಾತನಾಡಿ, ರೈತರಿಗೆ ಆಧುನಿಕ ಕೃಷಿ ತಂತ್ರಜ್ಞಾನಗಳು, ಯಂತ್ರೋಪಕರಣಗಳ ಬಳಕೆ ಮಾಡಿ ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಇಳುವರಿ ಹಾಗೂ ಆದಾಯ ಪಡೆಯಲು ಈ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ತಾಲೂಕು ಕೃಷಿಕ ಸಮಾಜದ ಉಪಾಧ್ಯಕ್ಷ ಆಲಗೂಡು ನಾಗರಾಜು ಅಧ್ಯಕ್ಷತೆ ವಹಿಸಿದ್ದರು. ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಸಿದ್ದೇಶ್, ಮುಖಂಡರಾದ ಕಿರಗಸೂರು ಪ್ರಸಾದ್, ಕುರುಬೂರು ಗೌರಿಶಂಕರ್, ಆಲಗೂಡು ಮಹದೇವ, ಕರೋಹಟ್ಟಿ ಕುಮಾರಸ್ವಾಮಿ, ಕೃಷಿ ಅಧಿಕಾರಿ ಬಿ.ಪಿ.ರಾಘವೇಂದ್ರ, ಕೆ.ಎಲ್.ಕಾವ್ಯಾ, ಎಲ್.ವಿಶಾಲು ರೈತ ಮುಖಂಡರು, ಕೃಷಿ ಸಖಿಯರು ಇತರರು ಇದ್ದರು.