ಖನಿಜ ಸಂಪತ್ತಿನ ನಷ್ಟ ವಸೂಲಿಗೆ ತಾಂತ್ರಿಕ ಅಡ್ಡಿ: ಅಕ್ರಮ ರಫ್ತು ಅದಿರುನಿಂದ 12 ಸಾವಿರ ಕೋಟಿ ನಷ್ಟ

Mines
Published on

ಹರೀಶ್ ಬೇಲೂರು ಬೆಂಗಳೂರು

ಅಕ್ರಮ ಗಣಿಗಾರಿಕೆಯಿಂದ ಲೂಟಿಯಾದ ಖನಿಜ ಸಂಪತ್ತಿನ ನಷ್ಟ ವಸೂಲಿಗೆ ಹಲವು ತಾಂತ್ರಿಕ ಅಂಶಗಳು ಅಡ್ಡಿಯಾಗಿವೆ.

2006ರಿಂದ 2010ರವರೆಗಿನ ಅವಧಿಯಲ್ಲಿ 2,98,60,647 ಮೆಟ್ರಿಕ್ ಟನ್ ಕಬ್ಬಿಣ ಅದಿರುನ್ನು ಸಮುದ್ರದ ಬಂದರುಗಳ ಮೂಲಕ ವಿದೇಶಗಳಿಗೆ ಸೇರಿ ಬೇರೆ ಸ್ಥಳಗಳಿಗೆ ಅಕ್ರಮವಾಗಿ ರಫ್ತು ಮಾಡಲಾಗಿದೆ. ಬರೀ ರಫ್ತು ಸಾಗಾಣಿಕೆಯಿಂದ ಬರೋಬ್ಬರಿ 12 ಸಾವಿರ ಕೋಟಿ ರೂ.ನಷ್ಟವಾಗಿದೆ ಎಂದು ಲೋಕಾಯುಕ್ತ ವರದಿಯಿಂದ (ಚಾಪ್ಟರ್-1) ತಿಳಿದುಬಂದಿದೆ. ಈ ಮೊತ್ತವನ್ನು ರ್ತುದಾರರು, ಪೂರೈಕೆದಾರರು, ಕಂಪನಿಗಳು, ವ್ಯಾಪಾರಿಗಳು ಹಾಗೂ ಗುತ್ತಿಗೆದಾರರು ಸೇರಿ ಅಧಿಕಾರಿಗಳಿಂದ ವಸೂಲಿ ಮಾಡಬೇಕಿದೆ. ಅಂದಾಜು 50-60 ಕೋಟಿ ರೂ.ಮೊತ್ತ ಮಾತ್ರ ಈವರೆಗೆ ವಸೂಲಿಯಾಗಿದೆ.

50 ಸಾವಿರ ಟನ್‌ಗಿಂತ ಮೇಲ್ಪಟ್ಟ ಅದಿರು ಸಾಗಿಸಿದ್ದ ಕೇಸ್‌ಗಳನ್ನು ಮಾತ್ರ ಕೇಂದ್ರ ತನಿಖಾ ಸಂಸ್ಥೆ (ಸಿಬಿಐ) ಕೈಗೆತ್ತಿಕೊಂಡು ವಿಚಾರಣೆ ನಡೆಸುತ್ತಿದೆ. ಇದರಲ್ಲಿ ಕೆಲ ಕೇಸ್‌ಗಳ ವಿಚಾರಣೆ ಅಂತಿಮ ಹಂತದಲ್ಲಿವೆ. ಇನ್ನೂ ಕೆಲ ಕೇಸ್‌ಗಳು ಹೆಚ್ಚಿನ ತನಿಖೆಗೆ ಒಳಪಟ್ಟಿಲ್ಲ. ಹಲವು ವರ್ಷ ಕಳೆದರೂ ತನಿಖಾ ಕಾರ್ಯ ಸಂಪೂರ್ಣವಾಗಿ ಮುಗಿದಿಲ್ಲ. ಅಲ್ಲದೆ, 50 ಸಾವಿರ ಟನ್‌ಗಿಂತ ಒಳಗಿನ ಅದಿರು ಸಾಗಿಸಿದ್ದ ಕೇಸ್‌ಗಳನ್ನು ವಿಶೇಷ ತನಿಖಾ ತಂಡಕ್ಕೆ(ಐಎಸ್‌ಟಿ) ಒಪ್ಪಿಸಲಾಗಿದೆ. ಆದರೆ, ಈ ಕೇಸ್‌ಗಳ ತನಿಖಾ ಕಾರ್ಯವೂ ಇನ್ನೂ ಮುಗಿದಿಲ್ಲ. ಒಟ್ಟು ಪ್ರಕರಣಗಳ ಪೈಕಿ ಶೇ.2 ಕೇಸ್‌ಗಳಲ್ಲಿ ಮಾತ್ರ ತೀರ್ಪು ಬಂದಿದೆ. ಇನ್ನೂ ಹಲವು ಪ್ರಕರಣಗಳಲ್ಲಿ ತೀರ್ಪು ಬರಬೇಕಿದೆ. ಅಕ್ರಮ ಗಣಿಗಾರಿಕೆಯಲ್ಲಿ ಶಾಮೀಲಾಗಿದ್ದ ಕೆಲ ಅಧಿಕಾರಿಗಳು ಈಗಾಗಲೇ ಮೃತಪಟ್ಟಿದ್ದಾರೆ. ಇದೆಲ್ಲಾ ಕಾರಣಗಳಿಂದ ಖನಿಜ ಸಂಪತ್ತಿನ ನಷ್ಟ ವಸೂಲಾತಿಗೆ ಅಡ್ಡಿಯಾಗುತ್ತಿದೆ ಎನ್ನಲಾಗಿದೆ.

ಹೇಗೆಲ್ಲಾ ಅಕ್ರಮ?

2006ರಿಂದ 2010ರವರೆಗಿನ ಅವಧಿಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಅನುಮತಿ ಪಡೆಯದೆ ಗಣಿ ಗುತ್ತಿಗೆ ಸಂಸ್ಥೆಗಳು, ಅರಣ್ಯ ಪ್ರದೇಶ, ಕಂದಾಯ ಭೂಮಿ ಮತ್ತು ಪಟ್ಟಾ ಜಮೀನಿನಲ್ಲಿ ಅಕ್ರಮವಾಗಿ ಅದಿರು ತೆಗೆದಿವೆ. ವಾರ್ಷಿಕವಾಗಿ ಇಂತಿಷ್ಟೇ ಪ್ರಮಾಣದಲ್ಲಿ ಅದಿರು ತೆಗೆಯಬೇಕೆಂಬ ನಿಯಮವಿದ್ದರೂ ಹೆಚ್ಚಿನ ಪ್ರಮಾಣದಲ್ಲಿ ತೆಗೆದಿವೆ.ರಾಯಲ್ಟಿ ಪಾವತಿಸದೆ ಮತ್ತು ಸಾರಿಗೆ ಪರವಾನಗಿ ಇಲ್ಲದೆ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಅಕ್ರಮವಾಗಿ ಸಾಗಿಸಿವೆ. ಪರವಾನಗಿ ಇಲ್ಲದೆ ಕಬ್ಬಿಣದ ಅದಿರನ್ನು ಬಂದರು, ಉಕ್ಕು ತಯಾರಿಸುವ ಕಂಪನಿಗಳಿಗೆ ಸಾಗಿಸಲಾಗಿದೆ. ಮುಖ್ಯವಾಗಿ ಅರಣ್ಯ ಪ್ರದೇಶಗಳಲ್ಲಿ ಅದಿರು ತೆಗೆಯಲು ಅರಣ್ಯ ಇಲಾಖೆಯಿಂದ ಅನುಮತಿಯನ್ನೇ ಪಡೆದಿಲ್ಲ. ಖನಿಜ ರವಾನೆ ಪರವಾನಗಿ (ಎಂಡಿಪಿ)ಯಿಂದ ಬೃಹತ್ ರವಾನೆ ಪರವಾನಗಿ ಪಡೆದಿಲ್ಲ. ಲಾರಿಗಳಲ್ಲಿ ನಿಗದಿಗಿಂತ ಅಧಿಕ ಅದಿರು ಸಾಗಿಸಲಾಗಿದೆ. ಸರಕುಗಳನ್ನು ರ್ತು ಮಾಡಲು ವಿದೇಶಿ ವ್ಯಾಪಾರದ ಮಹಾನಿರ್ದೇಶಕರೊಂದಿಗೆ ನೊಂದಾಯಿಸಿಕೊಳ್ಳಬೇಕು ಹಾಗೂ ಆಮದು ರ್ತು ಕೋಡ್ ಸಂಖ್ಯೆ ಪಡೆಯಬೇಕಿತ್ತು. ಆದರೆ, ಇದ್ಯಾವುದನ್ನೂ ಪಡೆಯದೆ ತಮಿಳುನಾಡಿನ ಚೆನ್ನೈ, ಎನ್ನೋರ್, ಆಂಧ್ರಪ್ರದೇಶದ ವಿಶಾಖಪಟ್ಟಣಂ, ಕೃಷ್ಣಪಟ್ಟಣಂ, ಕಾಕಿನಾಡ, ಗೋವಾದ ಪಣಜಿ ಹಾಗೂ ಕರ್ನಾಟಕ ನವ ಮಂಗಳೂರು, ಬೆಲೆಕೇರಿ,ಕಾರವಾರ ಬಂದರುಗಳ ಮೂಲಕ ಬೃಹತ್ ಪ್ರಮಾಣದಲ್ಲಿ ಅದಿರು ಸಾಗಿಸಲಾಗಿದೆ.

ತಾರ್ಕಿಕ ಅಂತ್ಯ ಕಾಣಲಿ

ನಷ್ಟ ವಸೂಲಿಗಾಗಿ ರೂಪಿಸಿರುವ ‘ಕಾನೂನು ತಿದ್ದುಪಡಿ’ ವಿಧೇಯಕಕ್ಕೆ ಈಗಾಗಲೇ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ರಾಜ್ಯಪತ್ರವನ್ನು ಹೊರಡಿಸಲಾಗಿದೆ. ಆಸ್ತಿ ಜಫ್ತಿ ನಷ್ಟ ವಸೂಲಿಗೆ ‘ವಸೂಲಿ ಆಯುಕ್ತರ’ನ್ನು ಸರ್ಕಾರ ನೇಮಿಸಿದೆ. ಅಕ್ರಮ ಗಣಿಗಾರಿಕೆಯಿಂದ ಮಾಡಿದ ಆಸ್ತಿಗಳನ್ನು ಮುಟ್ಟುಗೋಲು ಹಾಕುವುದಾಗಿ ಸರ್ಕಾರ ಹೇಳಿದೆ. ಅಕ್ರಮ ಗಣಿಗಾರಿಕೆಯಿಂದ 12 ಸಾವಿರ ಕೋಟಿ ರೂ.ಅಕ್ರಮ ನಡೆದಿದೆ ಎಂದು ಲೋಕಾಯುಕ್ತರು ಅಂದಾಜಿಸಿದ್ದಾರೆ. ಆದರೆ, ಉಪ ಸಮಿತಿಯು ಒಂದು ಲಕ್ಷ ಕೋಟಿ ರೂ.ಅಧಿಕ ನಷ್ಟವಾಗಿದೆ ಎಂದು ಅಂದಾಜಿಸಿದೆ. ಒಟ್ಟಿನಲ್ಲಿ ತಾಂತ್ರಿಕ ಅಂಶವನ್ನು ಬಗೆಹರಿಸಿಕೊಂಡು ಸರ್ಕಾರ, ಅಕ್ರಮ ಗಣಿ ಪ್ರಕರಣಗಳನ್ನು ತಾರ್ತಿಕ ಅಂತ್ಯಕ್ಕೆ ಕೊಂಡೊಯ್ಯಬೇಕು.ಈ ಮೂಲಕ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿರುವವರಿಗೆ ಎಚ್ಚರಿಕೆ ಸಂದೇಶ ರವಾನೆಯಾಗಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net