

ಹರೀಶ್ ಬೇಲೂರು ಬೆಂಗಳೂರು
ರಾಜ್ಯದ ಬಹುತೇಕ ಸರ್ಕಾರಿ,ಖಾಸಗಿ ಆಸ್ಪತ್ರೆಗಳು ಅಗ್ನಿ ಸುರಕ್ಷತಾ ಮಾನದಂಡವನ್ನೇ ಪಾಲಿಸುತ್ತಿಲ್ಲ. ಆರೋಗ್ಯ ಇಲಾಖೆಯ ಅಧೀನದಲ್ಲಿ 2,161 ಗ್ರಾಮೀಣ ಪ್ರಾಥಮಿಕ ಆರೋಗ್ಯ ಕೇಂದ್ರಗಳು, 365 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು, 205 ಸಮುದಾಯ ಆರೋಗ್ಯ ಕೇಂದ್ರ, 147 ತಾಲೂಕು ಆಸ್ಪತ್ರೆ, 12 ಜಿಲ್ಲಾಸ್ಪತ್ರೆಗಳು ಮತ್ತು ಬೆಂಗಳೂರು ನಗರದಲ್ಲಿ 3 ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿವೆ. ಕರ್ನಾಟಕ ಖಾಸಗಿ ವೈದ್ಯಕೀಯ ಸ್ಥಾಪನೆ ( ಕೆಪಿಎಂಇ) ಕಾಯ್ದೆ ಅಡಿ 5,850 ಖಾಸಗಿ ಆಸ್ಪತ್ರೆಗಳು ನೋಂದಾಯಿಸಿಕೊಂಡು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದೇವೆ.
ನ್ಯಾಷನಲ್ ಬಿಲ್ಡಿಂಗ್ ಕೋಡ್ (ಎನ್ಬಿಸಿ) ಪ್ರಕಾರ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗಳಿಗೆ ಒಂದೇ ರೀತಿಯಲ್ಲಿ ಫೈರ್ ಸೇಪ್ಟಿ ಕ್ರಮ ಅಳವಡಿಸಿಕೊಳ್ಳಬೇಕೆಂಬ ನಿಯಮವಿದೆ. ಆದರೆ, ರಾಜ್ಯದಲ್ಲಿರುವ ಒಟ್ಟು 2,878 ಸರ್ಕಾರಿ ಆಸ್ಪತ್ರೆಗಳ ಪೈಕಿ 14 ಸರ್ಕಾರಿ ಆಸ್ಪತ್ರೆಗಳು,5,850 ಖಾಸಗಿ ಆಸ್ಪತ್ರೆಗಳ ಪೈಕಿ 315 ಖಾಸಗಿ ಆಸ್ಪತ್ರೆಗಳು ಮಾತ್ರ ಫೈರ್ ಸೇಪ್ಟಿ ಮಾನದಂಡ ಅನುಸರಿಸುತ್ತಿವೆ. ಆದರೆ, 2,864 ಸರ್ಕಾರಿ, 5,535 ಖಾಸಗಿ ಆಸ್ಪತ್ರೆಗಳಲ್ಲಿ ಫೈರ್ಸೇಪ್ಟಿಗಳಿಲ್ಲ. ಕಳೆದ 20 ವರ್ಷದಲ್ಲಿ 3 ಖಾಸಗಿ ಹಾಗೂ 5 ಸರ್ಕಾರಿ ಆಸ್ಪತ್ರೆಗಳಲ್ಲಿ ಅಗ್ನಿ ದುರಂತ ಸಂಭವಿಸಿದೆ. 2010ರಿಂದ 2024ರವೆರೆಗೆ ದೇಶಾದ್ಯಂತ 50ಕ್ಕೂ ಅಧಿಕ ಆಸ್ಪತ್ರೆಗಳಲ್ಲಿ ಅಗ್ನಿ ಅನಾಹುತ ಸಂಭವಿಸಿದ್ದು, ನೂರಾರು ರೋಗಿಗಳು ಮೃತಪಟ್ಟಿದ್ದಾರೆ. ಇದರಲ್ಲಿ ನವಜಾತ ಶಿಶು ಹಚ್ಚು ಅಸುನೀಗಿರುವುದು ಕಳವಳ ತಂದೊಡ್ಡಿದೆ.
550 ಕೋಟಿ ರೂ. ಬೇಕು
ಸರ್ಕಾರಿ ಆಸ್ಪತ್ರೆಗಳಲ್ಲಿ ಫೈರ್ ಸೇಫ್ಟಿ ಅಳವಡಿಸಲು 550 ಕೋಟಿ ರೂ.ಬೇಕು. ಹಂತ ಹಂತವಾಗಿ ಅಗ್ನಿ ಸುರಕ್ಷತಾ ಮಾನದಂಡ ಪಾಲನೆಗೆ ಅನುಮತಿ ನೀಡಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಈ ಬಗ್ಗೆ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೇನೆ. ಹಿಂದೆ ಅಗ್ನಿ ಅವಘಡದ ಬಗ್ಗೆ ಆಸ್ಪತ್ರೆಗಳು ಮತ್ತು ಆಡಳಿತ ಮಂಡಳಿಗಳು ಹೆಚ್ಚಿನ ಗಮನ ಹರಿಸುತ್ತಿರಲಿಲ್ಲ ಎನ್ನುತ್ತಾರೆ ಸಚಿವ ದಿನೇಶ್ ಗುಂಡೂರಾವ್. ಭವಿಷ್ಯದಲ್ಲಿ ಸಂಭವಿಸುವ ಅನಾಹುತ ತಪ್ಪಿಸಲು ಅಗ್ನಿ ಸುರಕ್ಷತೆ ಅಳವಡಿಸಿದ್ದ ಬಗ್ಗೆ ಮಾಹಿತಿ ಕಲೆ ಹಾಕಿದಾಗ ಬರೀ 14 ಸರ್ಕಾರಿ ಆಸ್ಪತ್ರೆಗಳು ಈ ಅಗ್ನಿ ಸುರಕ್ಷತಾ ಕ್ರಮ ಅನುಸರಿಸುತ್ತಿವೆ. ಉಳಿದ ಆಸ್ಪತ್ರೆಗಳಲ್ಲಿ ಅಗ್ನಿ ಸುರಕ್ಷತಾ ಕ್ರಮ ಪಾಲಿಸಿಲ್ಲ. ಅಗ್ನಿಶಾಮಕ ಇಲಾಖೆಯಿಂದ ನಿರಾಕ್ಷೇಪಣಾ ಪ್ರಮಾಣಪತ್ರ (ಎನ್ಓಸಿ) ಪಡೆಯಲು ಇರುವ ಷರತ್ತು ಸಡಿಲೀಕರಣಕ್ಕೆ ಮುಂದಾಗಿದ್ದೇವೆ. ಷರತ್ತಿನಲ್ಲಿ ವಿನಾಯಿತಿ ನೀಡುವಂತೆ ಗೃಹ ಇಲಾಖೆ ಜೊತೆ ಚರ್ಚಿಸಲು ತೀರ್ಮಾನಿಸಲಾಗಿದೆ ಎಂದು ಸಚಿವರು ಹೇಳುತ್ತಾರೆ.
ಸಂಭಾವ್ಯ ಅನಾಹುತ ತಪ್ಪಿಸಿ
ಆಸ್ಪತ್ರೆಗಳಲ್ಲಿ ಅಗ್ನಿ ಸುರಕ್ಷತಾ ನಿಯಮ ಪಾಲಿಸದಿದ್ದರೆ ಸಣ್ಣ ಬೆಂಕಿ ಘಟನೆ ಮಾರಕ ಘಟನೆಯಾಗಿ ಪರಿಣಮಿಸಲಿದೆ. ದೇಶದ ಕೆಲ ಆಸ್ಪತ್ರೆಗಳಲ್ಲಿ ಸಂಭವಿಸಿದ್ದ ಅಗ್ನಿ ದುರಂತವೂ ನಮಗೆ ಹಲವು ಪಾಠ ಕಲಿಸಿದೆ. ಹಾಗಾಗಿ, ಪ್ರತಿ ಆಸ್ಪತ್ರೆಗಳು ಮತ್ತು ಖಾಸಗಿ ನರ್ಸಿಂಗ್ ಹೋಂಗಳು ಫೈರ್ ಸೆಪ್ಟಿ ನಿಯಮ ಅಳವಡಿಸಿಕೊಳ್ಳಬೇಕು. ಆಸ್ಪತ್ರೆಗಳ ಕಟ್ಟಡಗಳ ವಿನ್ಯಾಸ ವಿಭಿನ್ನವಾಗಿದೆ. ಸಾಕಷ್ಟು ಬಹು ಮಹಡಿ ಆಸ್ಪತ್ರೆಗಳದೊಳಗೆ ಕಿರಿದಾದ ಜಾಗ ಇರುತ್ತದೆ. ಆಸ್ಪತ್ರೆಗಳಲ್ಲಿ ವಿದ್ಯುತ್ ಯಂತ್ರ, ಆಮ್ಲಜನಕ ಸಿಲಿಂಡರ್ ಮತ್ತು ಸುಡುವ ರಾಸಾಯನಿಕಗಳನ್ನು ಹೆಚ್ಚಾಗಿ ಬಳಸಲಾಗುತ್ತಿದೆ. ಇವುಗಳನ್ನು ಸೂಕ್ತವಾಗಿ ನಿರ್ವಹಿಸದಿದ್ದರೆ ಸಂಭಾವ್ಯ ಬೆಂಕಿ ಅನಾಹುತಕ್ಕೆ ಕಾರಣವಾಗಲಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು ನಡೆದಾಡಲು ಅಥವಾ ಓಡಾಡಲು ಆಗುವುದಿಲ್ಲ. ಕೆಲವರು ತೀವ್ರ ನಿಗಾ ಘಟಕದಲ್ಲಿ(ಐಸಿಯು) ಚಿಕಿತ್ಸೆ ಪಡೆಯುತ್ತಿರುತ್ತಾರೆ. ತುರ್ತು ಕೊಠಡಿ, ಕಾಯುವ ಪ್ರದೇಶ ಮತ್ತು ವಾರ್ಡ್ಗಳು ಅಧಿಕ ರೋಗಿಗಳಿಂದ ತುಂಬಿರಲಿದೆ. ಈ ಸಂದರ್ಭದಲ್ಲಿ ಅಗ್ನಿ ಅನಾಹುತ ಸಂಭವಿಸಿದರೆ ರೋಗಿಗಳು, ಸಿಬ್ಬಂದಿ ಸ್ಥಳಾಂತರಕ್ಕೆ ಕಷ್ಟವಾಗಲಿದೆ. ಇದರಿಂದ ಹೆಚ್ಚಿನ ಪ್ರಾಣ ಹಾನಿಯೂ ಉಂಟಾಗುತ್ತದೆ. ಆದ್ದರಿಂದ, ರಾಷ್ಟ್ರೀಯ ಬಹುಮಹಡಿ ಕಟ್ಟಡ ಕಾಯ್ದೆ, ರಾಷ್ಟ್ರೀಯ ಮಾನ್ಯತೆ ಪಡೆದ ಆಸ್ಪತ್ರೆಗಳು ಮಂಡಳಿ (ಎನ್ಎಬಿಎಚ್) ಅನ್ವಯ ಅಗ್ನಿಶಾಮಕ ಇಲಾಖೆಯಿಂದ ಕಡ್ಡಾಯವಾಗಿ ಎನ್ಓಸಿ ಪಡೆಯಬೇಕು. ಆದರೆ, ಬಹುತೇಕ ಖಾಸಗಿ ಆಸ್ಪತ್ರೆಗಳು ಎನ್ಓಸಿ ಪಡೆದಿಲ್ಲ.
ಅಗ್ನಿ ಸುರಕ್ಷತಾ ಅಂಶವೇನು?
* ಐಸಿಯು, ವಾರ್ಡ್, ಜನರೇಟರ್ ಕೊಠಡಿ, ಶೇಖರಣಾ ಪ್ರದೇಶಗಳಲ್ಲಿ ಹೊಗೆ ಪತ್ತೆಕಾರಕ, ಶಾಖ ಸಂವೇದಕ, ಬೆಂಕಿ ಪತ್ತೆ ,ಅಗ್ನಿಶಾಮಕ ಎಚ್ಚರಿಕೆ ಅಲಾರಂ ಇರಬೇಕು
* ಬೆಂಕಿ ಹರಡುವ ಮುನ್ನ ಅವುಗಳ ನಿಯಂತ್ರಣಕ್ಕೆ ಸ್ಪ್ರಿಂಕ್ಲರ್, ಸ್ವಯಂಚಾಲಿತ ಅಗ್ನಿ ನಿಗ್ರಹ ವ್ಯವಸ್ಥೆ ಇರಲಿ
* ಆಸ್ಪತ್ರೆಯ ಕಾರಿಡಾರ್, ಮೆಟ್ಟಿಲುನಲ್ಲಿ ಸುಲಭವಾಗಿ ಸಿಗುವಂತೆ ಅಗ್ನಿಶಾಮಕ ಪರಿಕರ ಇಡಬೇಕು. ಇವುಗಳ ಬಳಸುವ ಬಗ್ಗೆ ಸಿಬ್ಬಂದಿಗೆ ತರಬೇತಿ ನೀಡಬೇಕು
* ತುರ್ತು ನಿರ್ಗಮನ ದ್ವಾರ, ತುರ್ತು ದೀಪ, ನಿರ್ಗಮನ ಚಿಹ್ನೆ ಇರಲಿ
* ಹೆಚ್ಚಿನ ಹೊರೆ ಇರುವ ಪ್ರದೇಶಗಳಲ್ಲಿ ಮಲ್ಟಿ-ಪ್ಲಗ್ ಪಾಯಿಂಟ್ ಬಳಸಬಾರದು
* ಆಮ್ಲಜನಕ, ರಾಸಾಯನಿಕಗಳನ್ನು ಶಾಖ, ವಿದ್ಯುತ್ನಿಂದ ದೂರವಿರಲಿ
* ಬಳಕೆ ಇಲ್ಲದಿದ್ದ ವೇಳೆ ಯಂತ್ರಗಳನ್ನು ಆಫ್ ಆಗಿರಲಿ
* ಲಿಫ್ಟ್, ಜನರೇಟರ್ಗಳನ್ನು ನಿಯಮಿತವಾಗಿ ಪರೀಕ್ಷಿಸಿ
* ಯಾವುದೇ ಕಾರಣಕ್ಕೂ ಯಂತ್ರಗಳ ಬಳಿ ರಟ್ಟಿನ ಪೆಟ್ಟಿಗೆ, ಕಾಗದ ಫೈಲ್ ಇಡಬೇಡಿ
*ಅಗ್ನಿ ನಂದಕದಂತಹ ಸಾಧನ ಸಲಕರಣೆ ಇರಲಿ