

ಬೆಂಗಳೂರು: ಶಿಕ್ಷಕ ವೃತ್ತಿ ಅತ್ಯಂತ ಶ್ರೇಷ್ಠವಾದದ್ದು. ಬದುಕಿನಲ್ಲಿ ನಮಗೆ ಮಾರ್ಗದರ್ಶನ ಮಾಡಿದ ಶಿಕ್ಷಕರ ಸೇವೆ ಸ್ಮರಣೀಯವಾದದ್ದು ಎಂದು ನ್ಯಾಷನಲ್ ಎಜುಕೇಶನ್ ಸೊಸೈಟಿ (ಎನ್ಇಎಸ್) ಅಧ್ಯಕ್ಷ ಡಾ. ಎಚ್. ಎನ್. ಸುಬ್ರಹ್ಮಣ್ಯ ಹೇಳಿದ್ದಾರೆ.
ರಾಷ್ಟ್ರೀಯ ಶಿಕ್ಷಕ ದಿನದ ನಿಮಿತ್ತ ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಶಿಕ್ಷಕರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ. ಒಮ್ಮೆ ಶಿಕ್ಷಕರಾದವರು ಜೀವನ ಪರ್ಯಂತ ಶಿಕ್ಷಕರಾಗಿರುತ್ತಾರೆ. ಸಮಾಜಕ್ಕೆ ಮಾರ್ಗದರ್ಶಕರು ಆಗಿರುತ್ತಾರೆ ಎಂದು ಬಣ್ಣಿಸಿದರು.
ಎನ್ಇಎಸ್ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ವಿ.ವೆಂಕಟಶಿವಾರೆಡ್ಡಿ ಮಾತನಾಡಿ, ಅತ್ಯುತ್ತಮ ಶಿಕ್ಷಕರ ಅನನ್ಯ ಕೊಡುಗೆ ಸ್ಮರಿಸುವುದು ನಮ್ಮ ಜವಾಬ್ದಾರಿಯಾಗಿದೆ. ಶಿಕ್ಷಣ ಗುಣಮಟ್ಟವನ್ನು ಸುಧಾರಿಸುವ ಮಾತ್ರವಲ್ಲದೆ ವಿದ್ಯಾರ್ಥಿಗಳ ಜೀವನವನ್ನು ಶ್ರೀಮಂತಗೊಳಿಸಿದವರನ್ನು ನಾವೆಲ್ಲರೂ ಸಂಸ್ಮರಣೆ ಮಾಡಬೇಕು ಎಂದರು.
ನಿವೃತ್ತ ಬೋಧಕರಾದ ಅನಂತ ರಂಗನ್, ಡಾ. ಶೈರೀನ್ ನೇದುಂಗಡಿ, ಅರುಣಾಚಲಂ, ಡಾ.ಎಚ್. ಜಿ.ಗೋಕುಲ್, ಸೋನಾರ್ ಮಾರುತಿ, ಜಯರಾಮಪ್ಪ, ಡಿ.ವಿ.ನಾಗೇಶ್, ಎಸ್.ಆರ್. ಪಂಕಜಾ, ಎ.ಜಿ.ನಾಗರಾಜಯ್ಯ ಅವರನ್ನು ಸನ್ಮಾನಿಸಲಾಯಿತು.ಎನ್ಇಎಸ್ ಶಿಕ್ಷಣ ಸಂಸ್ಥೆಯ ಖಜಾಂಚಿ ವಿ.ಮಂಜುನಾಥ್ ಸೇರಿ ಮತ್ತಿತರರಿದ್ದರು.