

ಬೆಳಗಾವಿ: ಶಿಕ್ಷಣ ಶಾಸ್ತ್ರದಲ್ಲಿ ವಿದ್ಯಾರ್ಥಿಗಳಿಗೆ ವಿಷಯ ಮನದಟ್ಟು ಮಾಡುವಲ್ಲಿ ಬೋಧನೆ ಮತ್ತು ಕಲಿಕಾ ವಿಧಾನಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಯುಎಸ್‌ಎಂ-ಕೆಎಲ್‌ಇ ಅಂತರಾಷ್ಟ್ರೀಯ ವೈದ್ಯಕೀಯ ಕಾಲೇಜಿನ ಫಾರ್ಮಕಾಲಜಿ ವಿಭಾಗದ ಮುಖ್ಯಸ್ಥ ಡಾ.ಪಿ. ಎ. ಪಾಟೀಲ ಹೇಳಿದರು.
ನಗರದ ಕೆ.ಎಲ್.ಇ. ಫಾರ್ಮಸಿ ಕಾಲೇಜಿನಲ್ಲಿ ಫಾರ್ಮಕಾಲಜಿ ವಿಭಾಗದ ವತಿಯಿಂದ ಬುಧವಾರ ಆಯೋಜಿಸಿದ್ದ ‘ನವೀನ ಶಿಕ್ಷಣ ಶಾಸ್ತ್ರ ಉನ್ನತ ಶಿಕ್ಷಣದ ಭವಿಷ್ಯ’ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಕಲಿಕೆ ಮತ್ತು ಪ್ರಾಧ್ಯಾಪಕರು ಭೋದನೆ ಹಾಗೂ ಮೌಲ್ಯಮಾಪನದಲ್ಲಿ ಅನುಸರಿಸುವ ವಿವಿಧ ಶಿಕ್ಷಣ ವಿಧಾನಗಳ ಸಂಯೋಜನೆಯೂ ಕಲಿಕಾ ಫಲದ ಮೇಲೆ ಪರಿಣಾಮ ಬೀರುತ್ತದೆ ಎಂದರು.
ಕೆ.ಎಲ್.ಇ. ಫಾರ್ಮಸಿ ಕಾಲೇಜಿನ ಪ್ರಾಚಾರ್ಯ ಡಾ.ಸುನೀಲ ಜಲಾಲಪುರೆ ಮಾತನಾಡಿ, ಆಧುನಿಕ ಶಿಕ್ಷಣದೊಂದಿಗೆ ಹೊಸ ಬೋಧನಾ ವಿಧಾನಗಳನ್ನು ಅಳವಡಿಸಿಕೊಳ್ಳುವ ಅಗತ್ಯತೆ ಇದೆ ಎಂದರು.
ಆಧುನಿಕ ಶಿಕ್ಷಣಶಾಸ್ತ್ರದೊಂದಿಗೆ ನವೀನ ಬೋಧನಾ ಕಲಿಕಾತಂತ್ರಗಳನ್ನು ಅಳವಡಿಸಿಕೊಳ್ಳುವುದು ಮತ್ತು ಕೃತಕ ಬುದ್ಧಿಮತ್ತೆ ಬಳಸಿಕೊಂಡು ಕಲಿಕೆಯ ನವೀನ ಶಿಕ್ಷಣ ವಿಧಾನಗಳನ್ನು ಅಭಿವೃದ್ಧಿಪಡಿಸುವ ಬಗ್ಗೆ ಕೆ.ಎಲ್.ಇ. ಡಾ.ಎಂ.ಎಸ್.ಶೇಷಗಿರಿ ಕಾಲೇಜ್ ಆಫ್ ಇಂಜಿನಿಯರಿಂಗ್‌ನ ಡಾ.ರಾಜಶ್ರೀ ಖಾನಾಯಿ, ಡಾ.ಶ್ರೀಧರ ಅಯ್ಯರ್, ಡಾ.ರಾಖಿ ಕಳ್ಳಿಮನಿ ವಿಶೇಷ ಉಪನ್ಯಾಸ ನೀಡಿದರು.
ಸುಮಾರು 30 ಅಧ್ಯಾಪಕರುಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಡಾ.ಎನ್.ಎ. ಖತೀಬ್, ಡಾ.ಪಿ ಎಂ.ದಂಡಗಿ, ಪಿ.ಆರ್.ಬಿರಾದಾರ ಹಾಗೂ ಅಭಿನಂದ ಮುನೊಳ್ಳಿ ಇತರರು ಇದ್ದರು.