

ಬೆಂಗಳೂರು: ಶಿಕ್ಷಕರು ಮತ್ತು ಉಪನ್ಯಾಸಕರ ವರ್ಗಾವಣೆ ವಿಳಂಬವಾಗಿದ್ದು, ಆ ಪ್ರಕ್ರಿಯೆಯನ್ನು ತಡಮಾಡದೇ ಶುರುಮಾಡಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನಕಾರ್ಯದರ್ಶಿಗೆ ಆದೇಶಿಸಿದ್ದರು. ಇದರ ಬೆನ್ನಿಗೇ, ಶಿಕ್ಷಣ ಸಚಿವ ಸುರೇಶ್ ಕುಮಾರ್ ಫೇಸ್ಬುಕ್/ ಟ್ವಿಟರ್ ಖಾತೆಯಲ್ಲಿ ಈ ಸಂಬಂಧ ಅಪ್ಡೇಟ್ ನೀಡಿದ್ದಾರೆ.
ಇದರಂತೆ, ನವೆಂಬರ್ ಐದರಿಂದ ಶಿಕ್ಷಕರ ವರ್ಗಾವಣಾ ಪ್ರಕ್ತಿಯೆ ಪ್ರಾರಂಭವಾಗಲಿದೆ. ಈಗಾಗಲೇ ಭರವಸೆ ನೀಡಿರುವಂತೆ ಕಳೆದ ಸಾಲಿನಲ್ಲಿ ಕಡ್ಡಾಯ ಹಾಗೂ ಹೆಚ್ಚುವರಿ ವರ್ಗಾವಣಾ ಶಿಕ್ಷೆಗೆ ಒಳಗಾದ ಶಿಕ್ಷಕರಿಗೆ ಮೊದಲು ಆದ್ಯತೆ ಸಿಗಲಿದ್ದು, ಈ ನಿಟ್ಟಿನಲ್ಲಿ ಕೂಡಲೇ ಅಧಿಸೂಚನೆ ಹಾಗೂ ವೇಳಾಪಟ್ಟಿಯನ್ನು ಹೊರಡಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಸೂಚಿಸಿದ್ದೇನೆ ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿದ ವೇಳಾಪಟ್ಟಿಯನ್ನು ಇಲಾಖೆ ನಾಳೆ ಪ್ರಕಟಿಸಲಿದೆ ಎಂದು ಸಚಿವರು ತಿಳಿಸಿದ್ದಾರೆ. ಇದರೊಂದಿಗೆ ಬಹುಕಾಲ ವಿಳಂಬವಾಗಿದ್ದ ವರ್ಗಾವಣೆ ಪ್ರಕ್ರಿಯೆಗೆ ಚಾಲನೆ ಸಿಕ್ಕಂತಾಗಿದೆ.