

* ಮೊಟ್ಟೆ, ತರಕಾರಿ ದರ ಗಗನಕ್ಕೆ
* ಮೇಸ್ಟ್ರ ಜೇಬಿಗೆ ಖರೀದಿ ಭಾರ
ಗಂಗಾಧರ್ ಬೈರಾಪಟ್ಟಣ ರಾಮನಗರ
ಶಾಲೆಯಲ್ಲಿ ಕಲಿಕೆ ಗುಣಮಟ್ಟದ ಜತೆಗೆ ಮಕ್ಕಳ ಆರೋಗ್ಯ ವೃದ್ಧಿಗೂ ಸರ್ಕಾರ ಕೈಗೊಂಡಿರುವ ಕ್ರಮ ಶಿಕ್ಷಕರ ಪಾಲಿಗೆ ತಡೆಯಲಾಗದ ಭಾರವನ್ನು ಹೊರಿಸಿದೆ.
ಬಿಸಿಯೂಟ, ಕ್ಷೀರ ‘ಭಾಗ್ಯದ ಜತೆಗೆ ವಾರ ಪೂರ್ತಿ ಮೊಟ್ಟೆ ಹಾಗೂ ಮೊಟ್ಟೆ ತಿನ್ನದವರಿಗೆ ಶೇಂಗಾ ಚಿಕ್ಕಿ, ಬಾಳೆಹಣ್ಣು ವಿತರಣೆ ಮಾಡುವ ಜವಾಬ್ದಾರಿ ಕರ್ತವ್ಯದ ಹೊರೆ ಹೆಚ್ಚಳದ ಜತೆಗೆ ಜೇಬಿಗೂ ಭಾರವಾಗಿದೆ.
ಬಿಸಿಯೂಟಕ್ಕೆ ಬಳಸುವ ತರಕಾರಿ, ಮೊಟ್ಟೆ ಬೆಲೆ ಮಾರುಕಟ್ಟೆಯಲ್ಲಿ ದಿನೇದಿನೆ ಹೆಚ್ಚುತ್ತಿದ್ದು, ಇದನ್ನು ಪೂರೈಸಬೇಕಾದ ಜವಾಬ್ದಾರಿ ಪಡೆದುಕೊಂಡ ಶಿಕ್ಷಕರ ಜೇಬು ಖಾಲಿಯಾಗುವಂತಾಗಿದೆ. ಆದರೆ, ನಿಯಮ ರೂಪಿಸಿರುವ ಶಾಲಾ ಶಿಕ್ಷಣ ಇಲಾಖೆ ಮತ್ತು ಸರ್ಕಾರ ಇದರ ಬಗ್ಗೆ ತಲೆ ಕೆಡಿಸಿಕೊಳ್ಳದೆ ಇರುವುದು ಮಹತ್ವಾಕಾಂಕ್ಷೆ ಯೋಜನೆಯೊಂದು ಹಳ್ಳ ಹಿಡಿಯುವಂತಾಗಿದೆ.
ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲೆಯ 1-10ನೇ ತರಗತಿ ವಿದ್ಯಾರ್ಥಿಗಳಿಗೆ ಈ ಮೊದಲು ವಾರದ ಎರಡು ದಿನ ಮೊಟ್ಟೆ ವಿತರಣೆ ಮಾಡಲಾಗುತ್ತಿತ್ತು. ಅಜೀಂ ಪ್ರೇಂಜಿ ಫೌಂಡೇಷನ್ ವತಿಯಿಂದ ಉಳಿದ 4 ದಿನಗಳಿಗೂ ಇದು ವಿಸ್ತರಣೆ ಆಯಿತು. ಸರ್ಕಾರ ಪ್ರತಿ ಮೊಟ್ಟೆಗೆ ಖರೀದಿಗೆ 5 ರೂ. ಹಾಗೂ ಸಾಗಣೆ, ಬೇಯಿಸುವುದು ಮತ್ತು ಸಿಪ್ಪೆ ಬಿಡಿಸಿಕೊಡಲು ಕ್ರಮವಾಗಿ 20 ಪೈಸೆ, 50 ಪೈಸೆ ಮತ್ತು 30 ಪೈಸೆ ನಿಗದಿಪಡಿಸಿದೆ. ಆದರೆ, ಪ್ರಸ್ತುತ ಮಾರುಕಟ್ಟೆಯಲ್ಲಿ 6.70 ರಿಂದ - 7 ರೂ. ವರೆಗೆ ಮೊಟ್ಟೆ ‘ಾರಣೆ ಏರಿಕೆ ಆಗಿದ್ದು, ಪ್ರತಿ ದಿನ ಶಿಕ್ಷಕರು ಜೇಬಿಂದಲೇ ಹಣ ಕೊಡಬೇಕಿದೆ.
ಮೊಟ್ಟೆ ಸೇವನೆ ನಿರಾಕರಿಸಿದ ಮಕ್ಕಳಿಗೆ ಬಾಳೇ ಹಣ್ಣು ಅಥವಾ ಶೇಂಗಾ ಚಿಕ್ಕಿ ಕೊಡಬೇಕು ಎನ್ನುವ ಬದಲಿ ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ ಪ್ರತಿ ಚಿಕ್ಕಿಗೆ 5 ರೂ. ನಿಗದಿ ಮಾಡಿ, 35-40 ತೂಕದ, 102 ಕ್ಯಾಲರಿ ಇರುವ, ಉತ್ಪಾದನೆ, ಬಳಕೆ ಅವಧಿ ಸೇರಿ ಇತರೆ ಮಾನದಂಡ ಇರುವ ಚಿಕ್ಕಿಯನ್ನೇ ನೀಡಬೇಕು ಎನ್ನುವ ನಿಯಮ ರೂಪಿಸಲಾಗಿದೆ. ಆದರೆ, ಪ್ರಸ್ತುತ ಮಾರುಕಟ್ಟೆಯಲ್ಲಿ ಸರ್ಕಾರ ನಿಗದಿ ಮಾಡಿರುವ ಚಿಕ್ಕಿ 5 ರೂ.ಗೆ ಸಿಗುವುದು ಕಷ್ಟವಾಗಿದೆ. ಸದ್ಯಕ್ಕೆ ಸ್ಥಳೀಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಚಿಕ್ಕಿಯನ್ನೇ ವಿದ್ಯಾರ್ಥಿಗಳಿಗೆ ಆತಂಕದಲ್ಲಿಯೇ ನೀಡಲಾಗುತ್ತಿದೆ.
ಸರ್ಕಾರಿ 1-5ನೇ ತರಗತಿ ಮಗುವಿಗೆ 1.49 ರೂ. ಮತ್ತು 6-10ನೇ ತರಗತಿ ಪ್ರತಿ ವಿದ್ಯಾರ್ಥಿಗೆ 2.24 ರೂ. ಗಳನ್ನು ನಿಗದಿ ಮಾಡಿದೆ. ಆದರೆ, ಪ್ರೌಢಶಾಲೆಗಳ ವಿದ್ಯಾರ್ಥಿಗಳ ಸಂಖ್ಯೆಗೆ ಹೋಲಿಕೆ ಮಾಡಿದರೆ ಪ್ರಾಥಮಿಕ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಆಗಿದೆ. ಇಲ್ಲಿ ಕಡಿಮೆ ಮಕ್ಕಳು ಇರುವ ಶಾಲೆಗಳಲ್ಲಿ ನಿಗದಿತ ಪ್ರಮಾಣದಲ್ಲಿ ತರಕಾರಿ ನೀಡಲು ಸಾಧ್ಯವಾಗುತ್ತಿಲ್ಲ. ಅಲ್ಲದೆ, ಈಗ ತರಕಾರಿ ಬೆಲೆ ಗಗನ ಮುಖಿಯಾಗಿದ್ದು, ಕೊಡುವ ದುಡ್ಡು ತರಕಾರಿಗೆ ಅರೆ ಕಾಸಿನ ಮಜ್ಜಿಗೆ ಎನ್ನುವಂತೆ ಆಗಿದೆ.
ಶಿಕ್ಷಕರಿಗೆ ಸರ್ಕಾರ ಪ್ರತಿ ದಿನ ಒಂದಿಲ್ಲೊಂದು ವಿಶೇಷ ಕಾರ್ಯಕ್ರಮ ನಿಯೋಜನೆ ಮಾಡಿದೆ. ಇದರ ಹೊರತಾಗಿಯೂ ಬಿಸಿಯೂಟ, ಕ್ಷೀರ ‘ಭಾಗ್ಯ, ಮೊಟ್ಟೆ ವಿತರಣೆ ಕಾರ್ಯಗಳು ಶಿಕ್ಷಕರನ್ನು ಹೈರಾಣಾಗಿಸಿದೆ. ಮಕ್ಕಳ ಕಲಿಕಾ ಗುಣಮಟ್ಟ ಕಾಯ್ದುಕೊಳ್ಳುವುದಕ್ಕಿಂತ ಬಿಸಿಯೂಟದ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕಾದ ಅನಿವಾರ್ಯತೆ ಶಿಕ್ಷಕ ಸಮುದಾಯವನ್ನು ಕಾಡುತ್ತಿದೆ. ಶಾಲೆಗೆ ಬರುವ ಮೇಲಿನ ಅಧಿಕಾರಿಗಳು ಪಾಠಕ್ಕಿಂತ, ಊಟದ ಗುಣಮಟ್ಟದ ಬಗ್ಗೆಯೇ ಪ್ರಶ್ನೆ ಮಾಡುವ ಕಾರಣ ಒಲ್ಲದ ಮನಸ್ಸಿನಿಂದಲೇ ಎಲ್ಲವನ್ನು ಮಾಡುತ್ತಿದ್ದಾರೆ.
ಸರ್ಕಾರದ ಯೋಜನೆಗಳು ಮಕ್ಕಳಿಗೆ ಪ್ರಯೋಜನಕಾರಿಯಾಗಿವೆ. ಆದರೆ, ಇದರ ಅನುಷ್ಠಾನ ಶಿಕ್ಷಕರ ಕರ್ತವ್ಯದ ಹೊರೆ ಹೆಚ್ಚಿಸಿದೆ. ಪಾಠಕ್ಕೆ ಬದಲು ಊಟದ ಮೆನುವನ್ನು ನೋಡುಕೊಳ್ಳುವಂತೆ ಆಗಿದೆ. ಇದರ ಜತೆಗೆ ಪ್ರತಿ ದಿನ ಮಕ್ಕಳ ಹಾಜರಾತಿಯನ್ನು ಆನ್‌ಲೈನ್ ಮೂಲಕವೇ ಅಪ್‌ಲೋಡ್ ಮಾಡಬೇಕಾಗಿದೆ. ಮಾರುಕಟ್ಟೆಯಲ್ಲಿ ಪ್ರತಿ ವಸ್ತುವಿನ ಬೆಲೆ ಹೆಚ್ಚಳವಾಗಿರುವುದು ನಮ್ಮ ಜೇಬನ್ನು ಖಾಲಿ ಮಾಡುತ್ತಿದೆ. ಈ ಯೋಜನೆಗಳನ್ನು ಎಲ್ಲವನ್ನೂ ಸರ್ಕಾರ ಖಾಸಗಿ ಸಂಸ್ಥೆಗಳಿಗೆ ಇಲ್ಲವೇ ಎಸ್‌ಡಿಎಂಸಿಗೆ ವಹಿಸಿಕೊಟ್ಟರೆ ಶಿಕ್ಷಕರು ಕಲಿಕೆ ಮೇಲೆ ಹೆಚ್ಚು ಗಮನ ಹರಿಸಲು ಸಾಧ್ಯವಾಗುತ್ತದೆ ಎನ್ನುವುದು ಶಿಕ್ಷಕರ ವಾದ.
ಬಿಸಿಯೂಟ ತಯಾರಕರಿಗೂ ಮೊಟ್ಟೆ ವಿತರಣೆ ಹೊರೆಯಾಗಿದೆ. ಬೇಯಿಸಿ ಸಿಪ್ಪೆ ಸುಲಿದು ನೀಡಲು ಪ್ರತಿ ಮೊಟ್ಟೆಗೆ 30 ಪೈಸೆಯನ್ನು ಬಿಸಿಯೂಟ ತಯಾರಕರಿಗೆ ನೀಡಬೇಕು ಎನ್ನುವ ನಿಯಮ ರೂಪಿಸಲಾಗಿದೆ. ಆದರೆ, ಬೆಳಗ್ಗೆ ಬಂದು ಮಧ್ಯಾಹ್ನ ಬಿಸಿಯೂಟ ವಿತರಣೆಗೂ ಕೆಲಸ ಮಾಡುವ ಇವರಿಗೆ ನೀಡುತ್ತಿರುವ ಸಂಬಳ ಸಾಲದು ಎನ್ನುವ ಕೂಗಿದೆ. ಕೆಲವು ಕಡೆಗಳಲ್ಲಿ ಹಣ ನೀಡುತ್ತಿಲ್ಲ ಎನ್ನುವ ಕಾರಣ ನೀಡಿ, ಮೊಟ್ಟೆ ಬೇಯಿಸಲು ಬಿಸಿಯೂಟ ತಯಾರಕರು ಹಿಂದೇಟು ಹಾಕುತ್ತಿದ್ದಾರೆ.
ಯೋಜನೆ ಒಳ್ಳೆಯದು. ಆದರೆ, ಅನುಷ್ಠಾನ ಶಿಕ್ಷಕರಿಗೆ ನೀಡಿರುವುದು ಯೋಜನೆ ಹಳ್ಳ ಹಿಡಿಯುವ ಸಾಧ್ಯತೆ ಇದೆ. ಸರ್ಕಾರ ಕೂಡಲೇ ಯೋಜನೆ ಅನುಷ್ಠಾನವನ್ನು ಎಸ್‌ಡಿಎಂಸಿಗೆ ನೀಡಲಿ. ಬೆಲೆ ಏರಿಳಿತಕ್ಕೆ ತಕ್ಕಂತೆ ಅನುಧಾನ ನೀಡಲಿ. ಉಮೇಶ್ ಗಂಗವಾಡಿ, ಅಧ್ಯಕ್ಷ, ಎಸ್‌ಡಿಎಂಸಿ ಸಮನ್ವಯ ಸಮಿತಿ ರಾಜ್ಯ ಘಟಕ
==
ವಿದ್ಯಾರ್ಥಿಗಳ ಮಕ್ಕಳ ಆರೋಗ್ಯ ವಿಚಾರದಲ್ಲಿ ಉತ್ತಮವಾದ ಯೋಜನೆ ಆಗಿದೆ. ಆದರೆ, ಇದು ಶಿಕ್ಷಕರ ಕರ್ತವ್ಯವನ್ನು ಹೆಚ್ಚಳ ಮಾಡಿರುವ ಕಾರಣ ಶಿಕ್ಷಣದ ಗುಣಮಟ್ಟ ಕುಸಿತವಾಗುವಂತೆ ಮಾಡುತ್ತಿದೆ. ಬೆಲೆ ಏರಿಳತಕ್ಕೆ ತಕ್ಕಂತೆ ಅನುಧಾನ ನೀಡಬೇಕು. ಯೋಜನೆ ಜಾರಿಯನ್ನು ಬೇರೆ ಯಾವುದಾದರೂ ಸಂಸ್ಥೆಗೆ ನೀಡಿದರೆ ಒಳಿತು. ವೈ.ಬಿ ಪ್ರಸನ್ನ, ಜಿಲ್ಲಾಧ್ಯಕ್ಷ, ಮುಖ್ಯ ಶಿಕ್ಷಕರ ಸಂಘ, ರಾಮನಗರ ಜಿಲ್ಲೆ