

ಬೆಳ್ತಂಗಡಿ : ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಆತ್ಮಾವಲೋಕನ ಮಾಡಿಕೊಂಡು ವ್ಯಕ್ತಿತ್ವ ವಿಕಸನದ ಜತೆ ಸಕಾರಾತ್ಮಕ, ರಚನಾತ್ಮಕ, ಸೃಜನಾತ್ಮಕವಾಗಿ ಬೆಳವಣಿಗೆ ಹೊಂದಬೇಕು. ಭಾರತೀಯ ಸಂಸ್ಕೃತಿಯಲ್ಲಿ ತುಂಬಾ ಮೌಲ್ಯಗಳಿವೆ. ಅವುಗಳಲ್ಲಿ ಉಪಕಾರ ಸ್ಮರಣೆಯೂ ಒಂದಾಗಿದೆ. ಈ ದಿನ ಶಿಕ್ಷಕರನ್ನು ಗೇಲಿ, ಅಪಹಾಸ್ಯ ಮಾಡುವ ದಿನವಲ್ಲ. ಬದಲಿಗೆ ಶಿಕ್ಷಕರಿಗೆ ಗೌರವ ಹಾಗೂ ಕೃತಜ್ಞತೆ ನೀಡುವ ದಿನ ಎಂದು ಪ್ರಾಂಶುಪಾಲ ಡಾ.ಬಿ.ಎ.ಕುಮಾರ ಹೆಗ್ಡೆ ಹೇಳಿದರು.
ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ ಗುರುವಾರ ಶಿಕ್ಷಕರ ದಿನಾಚರಣೆ ‘ಸಮರ್ಪಣ-2024’ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅತ್ಯುತ್ತಮ ಆಡಳಿತ ನಿರ್ವಹಣೆಗಾಗಿ ಕರ್ನಾಟಕ ಮಹಾವಿದ್ಯಾಲಯ ಶಿಕ್ಷಕರ ಸಂಘ 2024ನೇ ಸಾಲಿನ ‘ಅಧ್ಯಾಪಕ ಭೂಷಣ’ ಪ್ರಶಸ್ತಿಗೆ ಆಯ್ಕೆಯಾದ ಡಾ.ಬಿ.ಎ.ಕುಮಾರ ಹೆಗ್ಡೆ ಅವರನ್ನು ಸನ್ಮಾನಿಸಲಾಯಿತು.
ಉಪ ಪ್ರಾಂಶುಪಾಲ ಎಸ್.ಎನ್.ಕಾಕತ್ಕರ್, ಕಾಲೇಜಿನ ಆಡಳಿತ ಕುಲಸಚಿವೆ ಡಾ.ಶಲೀಪ್ ಎ.ಪಿ., ಪರೀಕ್ಷಾಂಗ ಕುಲಸಚಿವೆ ನಂದಾ ಕುಮಾರಿ, ಕಲಾ ನಿಕಾಯದ ಡೀನ್ ಡಾ.ಶ್ರೀಧರ್ ಭಟ್, ವಿಜ್ಞಾನ ನಿಕಾಯದ ಡೀನ್ ಸವಿತಾ ಕುಮಾರಿ, ಅಧ್ಯಾಪಕರು, ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳ ಮನೋರಂಜನೆ ಕಾರ್ಯಕ್ರಮ ನಡೆಯಿತು. ಕಲಾ ಸಂಘದ ಅಧ್ಯಕ್ಷ ಆಮೀರ್ ಸ್ವಾಗತಿಸಿದರು. ಸೀಮಾ ಜಹಾಂಗೀರ್ ವಂದಿಸಿದರು. ವೈದೇಹಿ ಹಾಗೂ ವೀಕ್ಷಾ ಎಸ್. ವಿ., ಸೃಜನ್, ಸುಜಿತ್ ಹಾಗೂ ಮಾನಸ ಅಗ್ನಿಹೋತ್ರಿ ನಿರೂಪಿಸಿದರು.