

ಕಾಸರಗೋಡು: ಸರ್ಕಾರಿ ನೌಕರರು ಹಾಗೂ ಶಿಕ್ಷಕರಲ್ಲಿ ಸರ್ಕಾರ ವಂಚನಾ ನೀತಿ ಕೊನೆಗೊಳಿಸುವಂತೆ ಡಿಸಿಸಿ ಪ್ರಧಾನ ಕಾರ್ಯದರ್ಶಿ ಪಿ.ವಿ.ಸುರೇಶ್ ಆಗ್ರಹಿಸಿದರು.
ಸರ್ಕಾರದ ನೀತಿ ವಿರುದ್ಧ ಜ.22ರಂದು ‘ಸೆಟೊ ಕಾಸರಗೋಡು ತಾಲೂಕು ಸಮಿತಿ ವತಿಯಿಂದ ನಡೆಯಲಿರುವ ಮುಷ್ಕರದ ಪೂರ್ವಭಾವಿಯಾಗಿ ಧರಣಿ ಉದ್ಘಾಟಿಸಿ ಮಾತನಾಡಿದರು.
ತೀವ್ರ ಹಣದುಬ್ಬರದ ನಡುವೆಯೂ ಉದ್ಯೋಗಿಗಳಿಗೆ ಸಕಾಲಕ್ಕೆ ತುಟ್ಟಿಭತ್ಯೆ ಸಹಿತ ಸವಲತ್ತು ನೀಡಲು ಮುಂದಾಗದ ಎಡರಂಗ ಸರ್ಕಾರ, ಶಿಕ್ಷಕರು ಸಹಿತ ಸರ್ಕಾರಿ ಸಿಬ್ಬಂದಿಗೆ ನಿರಂತರ ಕಿರುಕುಳ ನೀಡುತ್ತಿರುವುದು ಖಂಡನೀಯ. ನೌಕರರಲ್ಲಿ ತೋರುವ ಇಂತಹ ಋಣಾತ್ಮಕ ಧೋರಣೆ ಸರಿಪಡಿಸಲು ಸರ್ಕಾರ ಸಿದ್ಧವಾಗಬೇಕು ಎಂದು ತಿಳಿಸಿದರು.
ಸೆಟೊ ಸಂಘಟನೆ ಮುಖಂಡರಾದ ಜಿ.ಕೆ.ಗಿರೀಶ್, ಕೆ.ಎಂ.ಜಯಪ್ರಕಾಶ್, ಪಿ.ಟಿ.ಬೆನ್ನಿ, ಕೊಳತ್ತೂರ್ ನಾರಾಯಣನ್, ಡಾ.ಕೆ.ವಿ.ಪ್ರಮೋದ್, ಎಂ.ಶ್ರೀನಿವಾಸನ್, ಪಿ.ಟಿ.ಜಯಪ್ರಕಾಶ್ ಮತ್ತು ವಿ.ಎಂ.ರಾಜೇಶ್ ಮೊದಲಾದವರು ಉಪಸ್ಥಿತರಿದ್ದರು.