ಶಿಕ್ಷಕರು ಆಧುನಿಕ ಯುಗದ ಶಿಲ್ಪಿಗಳು

05M.D.R.1
Published on

ಮದ್ದೂರು: ಪಠ್ಯವನ್ನು ಬೋಧಿಸುವುದಲ್ಲದೆ, ವಿದ್ಯಾರ್ಥಿಗಳಲ್ಲಿ ವಿಮರ್ಶಾತ್ಮಕ ಚಿಂತನೆ, ನೈತಿಕ ಮೌಲ್ಯಗಳು ಹಾಗೂ ಸಾಮಾಜಿಕ ಜವಾಬ್ದಾರಿ ಬೆಳೆಸುವ ಮೂಲಕ ಸದೃಢ ಮತ್ತು ಪ್ರಗತಿಪರ ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ನಿರ್ಣಾಯಕ ಎಂದು ಶಾಸಕ ಕೆ.ಎಂ.ಉದಯ್ ಮೆಚ್ಚುಗೆ ವ್ಯಕ್ತಪಡಿಸಿದರು.

ನಗರದ ಶಿವಪುರದ ಶ್ರೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಶಾಲಾ ಶಿಕ್ಷಣ ಇಲಾಖೆ ಮತ್ತು ಕದಲೂರು ಚಾರಿಟಬಲ್ ಟ್ರಸ್ಟ್ ವತಿಯಂದ ಶುಕ್ರವಾರ ಆಯೋಜಿಸಿದ್ದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಶಿಕ್ಷಕರು ಆಧುನಿಕ ಯುಗದ ಶಿಲ್ಪಿಗಳಾಗಿದ್ದು, ಒಬ್ಬ ವ್ಯಕ್ತಿ ಸಮಾಜದಲ್ಲಿ ಉನ್ನತ ಸಾಧನೆ ಮಾಡಲು ಮತ್ತು ಉತ್ತಮ ಪ್ರಜೆಯಾಗಿ ರೂಪುಗೊಳ್ಳಲು ಶಿಕ್ಷಕರ ಪಾತ್ರ ಅಪಾರವಾಗಿದೆ ಎಂದು ಬಣ್ಣಿಸಿದರು.

ವಿದ್ಯೆ, ಬುದ್ಧಿ ಇಲ್ಲದೆ ಯಾರೂ ಕೂಡ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಇವುಗಳನ್ನು ಧಾರೆ ಎರೆಯುವ ಗುರು ವೃಂದಕ್ಕೆ ಪ್ರತಿಯೊಬ್ಬರು ಕೃತಜ್ಞತೆ ಸಲ್ಲಿಸಬೇಕು. ವ್ಯಕ್ತಿಯ ಯಶಸ್ಸು, ಕೀರ್ತಿಯ ಹಿಂದೆ ಗುರುಗಳ ಶ್ರಮವಿರುತ್ತದೆ ಎಂದರು.

ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೆ ಸರ್ಕಾರದಿಂದ ಹೆಚ್ಚಿನ ಪ್ರಮಾಣದಲ್ಲಿ ಸೌಲಭ್ಯಗಳು ಸಿಗಬೇಕು. ಈ ನಿಟ್ಟಿನಲ್ಲಿ ನಾನು ಸರ್ಕಾರದ ಗಮನ ಸೆಳೆಯುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮುಂದಿನ ದಿನಗಳಲ್ಲಿ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಅರ್ಥಪೂರ್ಣವಾಗಿ ಶಿಕ್ಷಕರ ದಿನಾಚರಣೆಯನ್ನು ಹಮ್ಮಿಕೊಂಡು ಶಿಕ್ಷಕರಿಗೆ ಗೌರವ ಸಲ್ಲಿಸಲಾಗುವುದು ಎಂದರು.

ತಾಲೂಕಿನ ಸರ್ಕಾರಿ ಶಾಲೆಗಳಿಗೆ ಕೊಠಡಿಗಳು, ಶೌಚಗೃಹ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಲು ಮೂಲಕ ಸಮಗ್ರ ಅಭಿವೃದ್ಧಿಗೆ ಈಗಾಗಲೇ ಅಗತ್ಯ ಕ್ರಮ ಕೈಗೊಳ್ಳುವ ಜತೆಗೆ ವಿದ್ಯಾರ್ಥಿಗಳಿಗೆ ಶಿಕ್ಷಕರಿಂದ ಗುಣ್ಮಾತಕ ಶಿಕ್ಷಣ ಕೊಡಿಸಲಾಗುತ್ತಿದೆ ಎಂದರು.

ಬಿಇಒ ಎಸ್.ಬಿ.ಧನಂಜಯ ಮಾತನಾಡಿ, ಶಿಕ್ಷಕರ ವೃತ್ತಿ ಅತ್ಯಂತ ಪವಿತ್ರ ವೃತ್ತಿಯಾಗಿದ್ದು, ವಿದ್ಯಾರ್ಥಿಗಳ ಪಾಲಿಗೆ ಆದರ್ಶ ಶಿಕ್ಷಕರಾಗಿ ಬಾಳಿ ಬದುಕನ್ನು ಸಾರ್ಥಕಗೊಳಿಸುವುದು ಶಿಕ್ಷಕರ ಮುಖ್ಯ ಗುರಿಯಾಗಬೇಕು ಎಂದರು.

ಇತಿಹಾಸ ಉಪನ್ಯಾಸಕ ಹಾ.ವಾಸುಬೋರೇಗೌಡ ಪ್ರಧಾನ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ನಿವೃತ್ತಿಗೊಂಡ ಶಿಕ್ಷಕರನ್ನು ಹಾಗೂ ಉಪನ್ಯಾಸಕರನ್ನು ಶಾಸಕ ಕೆ.ಎಂ.ಉದಯ್ ಅಭಿನಂದಿಸಿದರು.

ಬಿಇಒ ಎಸ್.ಬಿ.ಧನಂಜಯ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ರಾಜೇಶ್ವರಿ, ಪ್ರಾಂಶುಪಾಲ ಗೀತಾ, ಶಿಕ್ಷಣ ಇಲಾಖೆಯ ವಿವಿಧ ಸಂಘದ ಪದಾಧಿಕಾರಿಗಳಾದ ರವೀಶ್, ಸತೀಶ್, ಎಸ್.ಟಿ.ರಮೇಶ್, ದೇವರಾಜು, ರವಿಚಂದ್ರ, ಚೌಡೇಶ್, ಎಚ್.ಆರ್.ಅನಂತೇಗೌಡ, ಚಂದ್ರಶೇಖರ್, ಮಂಜುನಾಥ್, ಅಂಕೇಗೌಡ, ಮಹೇಂದ್ರ ಕುಮಾರ್ ಜಯಲಿಂಗು, ಜೋಗಿಗೌಡ, ಸಿದ್ದರಾಜು, ಮಹೇಶ್, ನಾಗೇಂದ್ರಕುಮಾರ್, ಮಹೇಶ್, ಶಿವಣ್ಣ, ನಾಗರಾಜು, ಬೈರೇಗೌಡ, ಡಿ.ಬಿ.ಶಿವಣ್ಣ, ಮೋಹನ್, ಕೃಷ್ಣ, ಮಲ್ಲಿಕಾರ್ಜುನ, ಹೊನ್ನೇಗೌಡ, ಬಿ.ಎಸ್.ಸವಿತಾ ಚಂದ್ರಕಲಾ, ಶಿವಸುಂದರ್, ಮಹದೇವು, ಮಹದೇವ ಪ್ರಸಾದ್, ವಿನಯ್, ಕುಮಾರ್, ಅರುಣ್, ಜಗದೀಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net