

ಮದ್ದೂರು: ಪ್ರತಿಯೊಬ್ಬರ ಜೀವನದಲ್ಲೂ ಗುರುಗಳು ಮಹತ್ತರವಾದ ಪಾತ್ರ ವಹಿಸುತ್ತಾರೆ. ಗುರುಗಳು ಇಲ್ಲದೆ ಯಾವುದೇ ವ್ಯಕ್ತಿ ಪರಿಪೂರ್ಣನಾಗಲು ಸಾಧ್ಯವಿಲ್ಲ ಎಂದು ಅಂತಾರಾಷ್ಟ್ರೀಯ ಅಲಯನ್ಸ್ ಸೌತ್ ಮಲ್ಟಿಪಲ್ ಕೌನ್ಸಿಲ್ ಉಪಾಧ್ಯಕ್ಷ ಕೆ.ಟಿ.ಹನುಮಂತು ತಿಳಿಸಿದರು.
ತಾಲೂಕಿನ ದೇಶಹಳ್ಳಿ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಶುಕ್ರವಾರ ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆಗಳ ಒಕ್ಕೂಟ, ಅಲಯನ್ಸ್ ಕ್ಲಬ್ ಆಫ್ ಮದ್ದೂರು ಕದಂಬ ವಲಯ ವತಿಯಿಂದ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಹಾಗೂ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಗುರುಗಳು ಆಧುನಿಕ ಸಮಾಜದ ಶಿಲ್ಪಿಗಳು. ಉತ್ತಮ ವ್ಯಕ್ತಿಗಳನ್ನು ರೂಪಿಸುವ ಮಹಾನ್ ಶಕ್ತಿ. ಇಂತಹ ಗುರುಪರಂಪರೆ ಹೊಂದಿರುವ ನಾವೇ ಪುಣ್ಯವಂತರು. ಗುರುಗಳನ್ನು ಪ್ರತಿಯೊಬ್ಬರೂ ಗೌರವಿಸುವ ಪ್ರವೃತ್ತಿ ರೂಡಿಸಿಕೊಳ್ಳಬೇಕು ಎಂದರು.
ಅಲಯನ್ಸ್ ಕ್ಲಬ್‌ನ ಜಿಲ್ಲಾ ಪ್ರಾಂತಪಾಲ ಎಚ್.ಮಾದೇಗೌಡ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ಗುಣಾತ್ಮಕ ಶಿಕ್ಷಣ ನೀಡುತ್ತಿದ್ದಾರೆ. ಸರ್ಕಾರ ಎಲ್ಲ ರೀತಿಯ ಸವಲತ್ತುಗಳನ್ನು ನೀಡುತ್ತಿರುವುದರಿಂದ ಪಾಲಕರು ಖಾಸಗಿ ಶಾಲೆಗಳ ವ್ಯಾಮೋಹ ಬಿಟ್ಟು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲಾತಿ ಮಾಡಬೇಕೆಂದು ಮನವಿ ಮಾಡಿದರು.
ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ:
ಕಾರ್ಯಕ್ರಮದಲ್ಲಿ ಟಿ.ದೇವರಾಜು, ತಗಡಯ್ಯ , ಬಿ.ಜೆ.ಪುಟ್ಟಸ್ವಾಮಿ, ಎನ್.ಮಹದೇವ, ವಿ.ಸಿ.ಸುಜಾತಾ, ಆರ್.ರಾಧಾಕೃಷ್ಣ, ಎಸ್.ಎನ್.ಗಿರಿಜಾ, ಎನ್.ಮಣಿಮಾಲಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವಿದ್ಯಾರ್ಥಿಗಳು ಗುರುಗಳ ಮಹತ್ವ ಕುರಿತು ತಮ್ಮ ಅನಿಸಿಕೆಗಳನ್ನು ಹೇಳಿದ್ದು ಗಣ್ಯರ ಹಾಗೂ ಶಿಕ್ಷಕರ ಗಮನ ಸೆಳೆಯಿತು.
ಅಲಯನ್ಸ್ ಕ್ಲಬ್ ಆಫ್ ಮದ್ದೂರು ಕದಂಬ ವಲಯದ ಅಧ್ಯಕ್ಷ ರೇಣುಕಯ್ಯ, ಕೆ.ಎಸ್.ಚಂದ್ರಶೇಖರ್, ವಿ.ಎಸ್.ನಾಗರಾಜು, ಜಿಲ್ಲಾ ಸಂಪುಟ ಕಾರ್ಯದರ್ಶಿ ಆರ್.ಮಹೇಶ್, ಜಿಲ್ಲಾ ಸಂಪುಟ ಖಜಾಂಚಿ ಟಿ.ನಾಗರಾಜು, ವಲಯಾಧ್ಯಕ್ಷ ಎಚ್.ಜೆ.ಸುರೇಶ್, ಎಸ್‌ಡಿಎಂಸಿ ಅಧ್ಯಕ್ಷ ಕಿರಣ್‌ಕುಮಾರ್, ಎಚ್.ಬಿ.ಶಿವಲಿಂಗಪ್ಪ, ಸುರೇಶ್, ಸ್ವಾಮಿ ಸೇರಿದಂತೆ ಇದ್ದರು.