

ಬೆಂಗಳೂರು: ಪ್ರಿಯಕರ ಮತ್ತೊಬ್ಬಳನ್ನು ವಿವಾಹವಾಗಿದ್ದಕ್ಕೆ ನೊಂದ ಅಂಗನವಾಡಿ ಶಿಕ್ಷಕಿ ಡೆತ್ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ದಾಸರಹಳ್ಳಿ ನಿವಾಸಿ ಪವಿತ್ರಾ (27) ಮೃತೆ. ಈ ಸಂಬಂಧ ಆತ್ಮಹತ್ಯೆಗೆ ಪ್ರಚೋದನೆ ಆರೋಪ ದಡಿ ಪ್ರಕರಣ ದಾಖಲಿಸಿ ಪ್ರಿಯಕರ ನಾಗೇಶ್ (30) ಎಂಬಾತನನ್ನು ಬಂಧಿಸಿ, ವಿಚಾರಣೆ ಗೊಳಪಡಿಸಲಾಗಿದೆ ಎಂದು ಮಾಗಡಿ ರಸ್ತೆ ಠಾಣೆ ಪೊಲೀಸರು ತಿಳಿಸಿದ್ದಾರೆ.
ಮಂಜುನಾಥನಗರದಲ್ಲಿನ ಅಂಗನವಾಡಿ ಶಿಕ್ಷಕಿ ಯಾಗಿದ್ದ ಪವಿತ್ರಾ, ತಾಯಿ ಹಾಗೂ ಸಹೋದರನ ಜತೆ ದಾಸರಹಳ್ಳಿಯಲ್ಲಿ ನೆಲೆಸಿದ್ದರು. ಖಾಸಗಿ ಕಂಪನಿ ಉದ್ಯೋಗಿಯಾಗಿದ್ದ ನಾಗೇಶ್ನನ್ನು 3-4 ವರ್ಷಗಳಿಂದ ಪ್ರೀತಿಸುತ್ತಿದ್ದರು. ಇವರಿಬ್ಬರ ಪ್ರೀತಿಗೆ ನಾಗೇಶ್ ಪಾಲಕರು ವಿರೋಧ ವ್ಯಕ್ತಪಡಿಸಿದ್ದರು. ಹಲವು ಬಾರಿ ಮನವೊಲಿಸಲು ಪ್ರಯತ್ನಿಸಿದರೂ ಮದುವೆಗೆ ಒಪ್ಪಿರಲಿಲ್ಲ ಎನ್ನಲಾಗಿದೆ.
ಜಾಲತಾಣದಲ್ಲಿ ಮದುವೆ ಫೋಟೋ: ತಿಂಗಳ ಹಿಂದೆ ನಾಗೇಶ್, ತನ್ನ ಪಾಲಕರು ತೋರಿಸಿದ್ದ ಯುವತಿಯನ್ನು ಮದುವೆಯಾಗಿದ್ದ. ಬಳಿಕ ಸಾಮಾಜಿಕ ಜಾಲತಾಣದಲ್ಲಿ ತನ್ನ ವಿವಾಹದ ಫೋಟೋ ಹಾಕಿದ್ದ. ಇದನ್ನು ನೋಡಿದ ಬೇಸರಗೊಂಡ ಪವಿತ್ರಾ, ಶನಿವಾರ ಮಧ್ಯಾಹ್ನ 3 ಗಂಟೆಗೆ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಕೊಠಡಿಯಲ್ಲಿ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತನ್ನ ಸಾವಿಗೆ ನಾಗೇಶ್ ಕಾರಣ ಎಂದು ಡೆತ್ನೋಟ್ ಬರೆದಿದ್ದಾರೆ. ತಾಯಿ ಮನೆಗೆ ವಾಪಸ್ ಆದಾಗ ಪ್ರಕರಣ ಬೆಳಕಿಗೆ ಬಂದಿದೆ. ಇದನ್ನು ಆಧರಿಸಿ ನಾಗೇಶ್ನನ್ನು ಪೊಲೀಸರು ಬಂಧಿಸಿದ್ದಾರೆ.