ಶಿಕ್ಷಕ ವೃತ್ತಿ ಜಗತ್ತಿನ ಶ್ರೇಷ್ಠ ಕಾಯಕ; ಶಾಸಕ ನೇಮಿರಾಜ ನಾಯ್ಕ ಅಭಿಮತ

HB HALLI Mla
ಹಬೊಹಳ್ಳಿಯ ಪಂಚಮಸಾಲಿ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನಿವೃತ್ತ ಬಿಇಒ ಎಂ.ಸಿ.ಆನಂದ ದಂಪತಿಯನ್ನು ಸನ್ಮಾನಿಸಲಾಯಿತು. ಶಾಸಕ ನೇಮಿರಾಜ ನಾಯ್ಕ, ಪ್ರಮುಖರಾದ ಬಾವಿ ಬೆಟ್ಟಪ್ಪ, ನಂದಿಹಳ್ಳಿ ಹಾಲಪ್ಪ, ಅಕ್ಕಿ ಶಿವಕುಮಾರ ಇತರರಿದ್ದರು.
Published on

ಹಗರಿಬೊಮ್ಮನಹಳ್ಳಿ: ವಿಶ್ವದ ಅಗ್ರಗಣ್ಯ ಕಾಯಕ ಎಂಬ ಹೆಗ್ಗಳಿಕೆ ಶಿಕ್ಷಕ ವೃತ್ತಿಗೆ ಸಲ್ಲುತ್ತದೆ. ಗುರುವಿನ ಸ್ಥಾನವನ್ನು ಯಾರೂ ತುಂಬಲು ಸಾಧ್ಯವಿಲ್ಲ ಎಂದು ಶಾಸಕ ಕೆ.ನೇಮಿರಾಜ ನಾಯ್ಕ ಹೇಳಿದರು.

ಪಟ್ಟಣದ ಪಂಚಮಸಾಲಿ ಹರ ಕಲ್ಯಾಣಮಂಟಪದಲ್ಲಿ ಭಾನುವಾರ ರಾಜ್ಯ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘ ಏರ್ಪಡಿಸಿದ್ದ ಸಮುದಾಯದ ನಿವೃತ್ತ ನೌಕರರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಜಗತ್ತಿನ ಶ್ರೇಷ್ಠ ಕಾಯಕ ಶಿಕ್ಷಕ ವೃತ್ತಿಯಾಗಿದೆ. ದೇಶದಲ್ಲಿ ಎಂತಹ ಉನ್ನತ ಸ್ಥಾನದಲ್ಲಿದ್ದರೂ ವಿದ್ಯೆ ಕಲಿಸಿದ ಗುರುಗಳು ಕಣ್ಣೆದುರಿಗೆ ಬಂದರೆ ಪ್ರತಿಯೊಬ್ಬರೂ ಗೌರವಿಸುತ್ತಾರೆ. ಎಂ.ಸಿ.ಆನಂದ ಅವರು ತಾಲೂಕಿನ ಬಿಇಒ ಆಗಿ ಉತ್ತಮ ಕಾರ್ಯನಿರ್ವಹಿಸಿದ್ದಾರೆ. ತಾಲೂಕಿನಲ್ಲಿ ಉತ್ತಮ ಶಿಕ್ಷಕರ ಪಡೆ ಇದೆ. ಶಿಕ್ಷಣ ಇಲಾಖೆ ಹಾಗೂ ಶಿಕ್ಷಕರು ಸಮತೋಲನದಿಂದ ಕೆಲಸ ಮಾಡಲಿದ್ದಾರೆ ಎಂದರು.

ನಿವೃತ್ತ ಬಿಇಒ ಎಂ.ಸಿ.ಆನಂದ ಮಾತನಾಡಿ, ಒಂದೂವರೆ ವರ್ಷ ತಾಲೂಕಿನಲ್ಲಿ ಬಿಇಒ ಆಗಿ ಕಾರ್ಯನಿರ್ವಹಿಸಿರುವೆ. ಆಡಳಿತಾತ್ಮಕವಾಗಿ ಯಾವುದೇ ಕೊರತೆಯಾಗದಂತೆ ಎಲ್ಲರೂ ಸಹಕರಿಸಿದ್ದಾರೆ. ಶಾಸಕ ನೇಮಿರಾಜನಾಯ್ಕ ಅವರು ಶಿಕ್ಷಣ ಇಲಾಖೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದ್ದರು. ಶೈಕ್ಷಣಿಕ ಪ್ರಗತಿಗೆ ಬೆಂಬಲ ನೀಡಿದ್ದರಿಂದ ಉತ್ತಮವಾಗಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಗಿದೆ ಎಂದರು.

ಪಂಚಮಸಾಲಿ ಸಮಾಜದ ರಾಜ್ಯ ಗೌರವಾಧ್ಯಕ್ಷ ಬಾವಿ ಬೆಟ್ಟಪ್ಪ, ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಪಂಚಮಸಾಲಿ ಸಮಾಜದ ತಾಲೂಕು ಅಧ್ಯಕ್ಷ ಅಕ್ಕಿ ಶಿವಕುಮಾರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹ್ಯಾಟಿ ಲೋಕಪ್ಪ, ಜೆಡಿಎಸ್ ಪಕ್ಷದ ಕ್ಷೇತ್ರಾಧ್ಯಕ್ಷ ವೈ.ಮಲ್ಲಿಕಾರ್ಜುನ. ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಪ್ರ.ಕಾರ್ಯದರ್ಶಿ ರವಿ ಉತ್ತಂಗಿ ಮಾತನಾಡಿದರು. ಸೇವೆಯಿಂದ ನಿವೃತ್ತರಾದ ಬಿಇಒ ಜತೆಗೆ ವಿವಿಧ ಇಲಾಖೆಗಳ ಒಂಬತ್ತು ಜನರನ್ನು ಸನ್ಮಾನಿಸಲಾಯಿತು.

ಪುರಸಭೆ ಮಾಜಿ ಸದಸ್ಯ ಬಾದಾಮಿ ಮೃತ್ಯುಂಜಯ, ಮುಖಂಡರಾದ ಸೊನ್ನದ ಗುರುಬಸವರಾಜ, ಆನಂದ ದೇವನಹಳ್ಳಿ ಮಂಜುನಾಥ ಗೌಡ, ಶಂಭುಲಿಂಗಪ್ಪ ಇದ್ದರು. ಪ್ರಭಾಕರ ಗೌಡ, ಇಟಿಗಿ ಮಂಜುನಾಥ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net