ಅಂಗನವಾಡಿ ಶಿಕ್ಷಕಿ ನೇಮಕ ವಿಚಾರಕ್ಕೆ‌ ಗ್ರಾಮಸ್ಥರ ಕಿರಿಕ್: 2 ತಿಂಗಳಾದರೂ ಕೆಲಸ ಮಾಡಲು ಬಿಡುತ್ತಿಲ್ಲ ಎಂದ ಮಹಿಳೆ

melekote
Published on

ಮೆಳೆಕೋಟೆ: ಅಂಗನವಾಡಿ ಶಿಕ್ಷಕಿ ನೇಮಕ ವಿಚಾರಕ್ಕೆ‌ ಗ್ರಾಮಸ್ಥರು ಕಿರಿಕ್ ಮಾಡಿದ್ದು, ತಮ್ಮ ಗ್ರಾಮಕ್ಕೆ ಪಕ್ಕದ ಗ್ರಾಮದ ಮಹಿಳೆಯನ್ನ ಅಂಗನವಾಡಿ ಶಿಕ್ಷಕಿಯನ್ನಾಗಿ ನೇಮಕ ಮಾಡಿದ್ದಾರೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಮೆಳೆಕೋಟೆ ಗ್ರಾಮದಲ್ಲಿ ನಡೆದಿದೆ.

ಆನಂದಮ್ಮ ಮೆಳೆಕೋಟೆ ಅಂಗನವಾಡಿಗೆ ಶಿಕ್ಷಕಿಯಾಗಿ ನೇಮಕವಾಗಿದ್ದು, ಮೊದಲು ರಾಜಘಟ್ಟದಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದರು. ಬಳಿಕ ಸಹಾಯಕಿಯನ್ನು ಅಂಗನವಾಡಿ ಶಿಕ್ಷಕಿಯಾಗಿ ಮೇಲ್ದರ್ಜೆಗೆ ಏರಿಸಿದ್ದ ಸರ್ಕಾರ, ಗ್ರಾಮದಿಂದ ಮೂರು ಕಿಮೀ ವ್ಯಾಪ್ತಿಯಲ್ಲಿ ಕೆಲಸಕ್ಕೆ ನೇಮಕ ಮಾಡಿತ್ತು. ಆಗ ಮೆಳೆಕೋಟೆ ಪಕ್ಕದ ದೊಡ್ಡರಾಯಪ್ಪನಹಳ್ಳಿ ಯಲ್ಲಿ ವಾಸವಿರುವ ಆನಂದಮ್ಮ, ಅಲ್ಲಿಂದ ಮೆಳೆಕೋಟೆಗೆ ಶಿಕ್ಷಕಿಯಾಗಿ ನೇಮಕವಾಗಿದ್ದರು. ಈ ವೇಳೆ ಶಿಕ್ಷಕಿಗೆ ಕೆಲಸ‌ ಮಾಡಲು ಗ್ರಾಮಸ್ಥರು ಅಡ್ಡಿಪಡಿಸಿದ್ದು, ನಮ್ಮ ಊರಿನವರೇ ಶಿಕ್ಷಕಿ ಆಗಬೇಕು ಎಂದು ಕೆಲಸ ಮಾಡಲು ಬಿಡದೆ ಕಿರಿಕ್ ಮಾಡುತ್ತಿದ್ದಾರೆ ಆರೋಪಿಸಲಾಗಿದೆ.

ತಾನು ನೇಮಕ‌ವಾಗಿ ಎರಡು ತಿಂಗಳು ಆಗಿದೆ. ತಾನು ದಲಿತ ಮಹಿಳೆ ಎಂದು ಕೆಲಸ ಮಾಡಲು ಬಿಡುತ್ತಿಲ್ಲ. ಅಲ್ಲದೇ, ಅಂಗನವಾಡಿ ಒಳಕ್ಕೆ ಬಿಡದೆ, ಬಾಗಿಲಿನಲ್ಲಿಯೇ ನಿಲ್ಲಿಸಿ ಕಿರುಕುಳ ನೀಡುತ್ತಿದ್ದಾರೆ ಎಂದು ಶಿಕ್ಷಕಿ ಆನಂದಮ್ಮ ಆರೋಪ ಮಾಡಿದ್ದಾರೆ. ಶಿಕ್ಷಕಿಗೆ ಗ್ರಾಮಸ್ಥರ ವಿರೋಧ ಹಿನ್ನೆಲೆ ಅಧಿಕಾರಿಗಳಿಂದ‌ ಮನವೊಲಿಸುವ ಕಾರ್ಯ ನಡೆದಿದ್ದು, ಈ ಸಂಬಂಧ ಮಹಿಳಾ ಮತ್ತು ಮಕ್ಕಳ‌ ಕಲ್ಯಾಣ ಇಲಾಖೆ ಅಧಿಕಾರಿಗಳು ಸೋಮವಾರ ಗ್ರಾಮಸ್ಥರ ಜೊತೆ ಸಭೆ ನಡೆಸಲಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net