

ನರೇಗಲ್ಲ: ಚಿಕ್ಕಂದಿನಲ್ಲಿಯೇ ಮಕ್ಕಳಿಗೆ ಸಂಸ್ಕಾರ ಕಲಿಸಿ. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ? ಎಂಬ ನುಡಿಯನ್ನು ನೀವೆಲ್ಲರೂ ಕೇಳಿದ್ದೀರಿ. ಆದ್ದರಿಂದ ನಿಮ್ಮ ಮಕ್ಕಳು ಉತ್ತಮ ನಾಗರಿಕರಾಗಬೇಕಾದರೆ ಅವರಿಗೆ ಈಗಿನಿಂದಲೇ ಸಂಸ್ಕಾರ ಕಲಿಸಿ ಎಂದು ಪ್ರಾಧ್ಯಾಪಕ ಡಾ. ಕಲ್ಲಯ್ಯ ಹಿರೇಮಠ ಹೇಳಿದರು.
ಪಟ್ಟಣದ ಶ್ರೀ ರೇಣುಕಾಚಾರ್ಯ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಬಿಇಒ ರುದ್ರಪ್ಪ ಹುರಳಿ ಮಾತನಾಡಿ, ಪಾಲಕರು ಮಕ್ಕಳ ಅಂಕಗಳಿಗಷ್ಟೇ ಗಮನ ಕೊಡುತ್ತಿದ್ದೀರಿ. ಇದರ ಬದಲಾಗಿ ಅವರ ಸರ್ವಾಂಗೀಣ ಅಭಿವೃದ್ಧಿಯ ಕಡೆಗೆ ಗಮನ ನೀಡಿದಾಗ ಮಕ್ಕಳ ಸರ್ವತೋಮುಖ ಬೆಳವಣಿಗೆ ಸಾಧ್ಯವಾಗುತ್ತದೆ ಎಂದರು.
ದಿವ್ಯ ಸಾನ್ನಿಧ್ಯ ವಹಿಸಿದ್ದ ಮಲ್ಲಿಕಾರ್ಜುನ ಶಿವಾಚಾರ್ಯರು ಆಶೀರ್ವಚನ ನೀಡಿ, ನಿಮ್ಮ ಮಕ್ಕಳು ಗುಣಮಟ್ಟದ ಶಿಕ್ಷಣ ಕಲಿಯಲೆಂದು ಇಲ್ಲಿ ಶಾಲೆಯನ್ನು ಪ್ರಾರಂಭಿಸಲಾಗಿದೆ. ಇಂದಿನ ಅತಿಥಿಗಳು ಹೇಳಿದ ಮಾತುಗಳು ತುಂಭಾ ಮನನೀಯವಾಗಿದ್ದು, ಮೊದಲು ಅವುಗಳನ್ನು ಪಾಲಕರು ತಿಳಿದುಕೊಂಡು ನಂತರ ಮಕ್ಕಳಿಗೆ ಅರ್ಥ ಮಾಡಿಸಲು ಪ್ರಯತ್ನಿಸಬೇಕು ಎಂದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ಫಕೀರಪ್ಪ ಮಳ್ಳಿ, ಸಂಸ್ಥೆಯ ಉಪಾಧ್ಯಕ್ಷ ಎಸ್.ಕೆ. ಪಾಟೀಲ, ಕಾರ್ಯದರ್ಶಿ ಈಶ್ವರ ಬೆಟಗೇರಿ, ಸದಸ್ಯರಾದ ಡಾ. ಆರ್.ಕೆ. ಗಚ್ಚಿನಮಠ, ನಿವೃತ್ತ ಶಿಕ್ಷಕ ಎಂ.ಎ. ಹಿರೇವಡೆಯರ, ಶಿಕ್ಷಕ ಎಂ.ಕೆ. ಬೇವಿನಕಟ್ಟಿ, ಮುಖ್ಯ ಶಿಕ್ಷಕಿ ನಿರ್ಮಲಾ ಹಿರೇಮಠ ಇದ್ದರು.