

ಅರಸೀಕೆರೆ: ಬಾಲ್ಯದಿಂದಲೇ ಮಕ್ಕಳಿಗೆ ಒಳ್ಳೆಯ ಸಂಸ್ಕಾರದ ಜತೆಗೆ ನೈತಿಕ ಶಿಕ್ಷಣ ನೀಡಬೇಕು ಎಂದು ಆರ್ಷ ವಿದ್ಯಾ ಕೇಂದ್ರ ಸಂಸ್ಥಾಪಕರಾದ ಶ್ರೀ ಚಿದ್ರೂಪಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ನಗರದ ಹಾರನಹಳ್ಳಿ ರಾಮಸ್ವಾಮಿ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಆರ್ಷ ವಿದ್ಯಾ ಕೇಂದ್ರದ 31ನೇ ವಾರ್ಷಿಕ ಸಮಾರಂಭ ಹಾಗೂ ಶ್ರೀಗಳ 78ನೇ ವಧರ್ಂತಿ ಅಂಗವಾಗಿ ಶ್ರೀ ಸರ್ವೇಶ್ವರ ಸ್ವಾಮಿಗೆ ಸಹಸ್ರ ಶಂಖಾಭಿಷೇಕ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ನಾನೊಬ್ಬ ಹಿಂದೂ ಎಂದು ಎದೆಯುಬ್ಬಿಸಿ ಹೇಳುವ ದಿಟ್ಟತನ ಪ್ರದರ್ಶಿಸಬೇಕು ಎಂದು ಹೇಳಿದರು.
ಜಾತಿ ಜಾತಿಗಳ ನಡುವೆ ಭಿನ್ನತೆಗಳು. ತಲೆ ಎತ್ತುತ್ತಿರುವುದು ಅತ್ಯಂತ ಅಪಾಯಕಾರಿ. ಇಂತಹ ಪ್ರವೃತ್ತಿ ದೂರಮಾಡಿ ಸಹೋದರತ್ವ ಮುಖ್ಯ ಎನ್ನುವ ಸಂದೇಶ ರವಾನಿಸಬೇಕು. ನಮ್ಮ ಗುರುಕುಲದಲ್ಲಿ ತಾರತಮ್ಯವಿಲ್ಲದೇ ಸಾವಿರಾರು ಮಕ್ಕಳಿಗೆ ವಿದ್ಯಾದಾನವನ್ನು ಮಾಡಲಾಗುತ್ತಿದೆ. ಗುಣಮಟ್ಟದ ಶಿಕ್ಷಣ, ಕರಾಟೆ, ಕ್ರೀಡೆ ಮೊದಲಾದ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ವಾತಾವರಣವನ್ನು ಸೃಷ್ಟಿಸಿ ಕೊಟ್ಟಿದ್ದೇವೆ ಎಂದರು.
ಕೋಳಗುಂದ ಕೇದಿಗೆ ಮಠದ ಶ್ರೀ ಜಯ ಚಂದ್ರಶೇಖರ ಸ್ವಾಮೀಜಿ ಮಾತನಾಡಿ, ಪ್ರತಿ ಕ್ಷೇತ್ರದಲ್ಲಿಯೂ ನೈತಿಕತೆ ಮರೆಯಾಗುತ್ತಿದೆ, ಚುನಾಯಿತ ಜನಪ್ರತಿನಿಧಿಗಳು ಸದನದಲ್ಲಿ ಹೇಗೆ ನಡೆದುಕೊಳ್ಳುತ್ತಿದ್ದಾರೆ ಎಂಬುದನ್ನು ನೋಡುತ್ತಿದ್ದೇವೆ. ನೈತಿಕ ಶಿಕ್ಷಣದ ಕೊರತೆ ಎಲ್ಲಡೆ ಕಾಣುತ್ತಿದ್ದೇವೆ, ಪಾಲಕರು ಬಾಲ್ಯದಿಂದ ಮಕ್ಕಳನ್ನು ಸರಿಯಾಗಿ ಗಮನ ಕೊಟ್ಟು ಬೆಳೆಸದೇ ಇದ್ದಲ್ಲಿ ಜೀವನದ ತಿರುವಿನ ಘಟ್ಟದಲ್ಲಿ ನಿರ್ಣಯ ತೆಗೆದುಕೊಳ್ಳುವಾಗ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಈ ಬಗ್ಗೆ ಪಾಲಕರು ಎಚ್ಚರ ವಹಿಸಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಆರ್ಷ ವಿದ್ಯಾ ಕೇಂದ್ರದ ಮುಖ್ಯಸ್ಥೆ ಸುನಿತಾ ಅಶೋಕ್ ಇದ್ದರು.