ಮಕ್ಕಳಿಗೆ ಆಚಾರ, ವಿಚಾರ ಕಲಿಸಿ

FotoJet (2)
Published on

ನಿವೃತ್ತ ನ್ಯಾಯಾಧೀಶ ಎನ್. ಕುಮಾರ್ ಸಲಹೆ | ಬೈಪಾಸ್ ಗಣೇಶೋತ್ಸವದಲ್ಲಿ ಭಾಗಿ

ಗೌರಿಬಿದನೂರು : ಕೇವಲ ಹಬ್ಬ ಹರಿದಿನಗಳನ್ನು ಆಚರಿಸಿದರೆ ಸಾಲದು. ನಮ್ಮ ಧರ್ಮದ ಆಚಾರ ವಿಚಾರ, ನಡೆ ನುಡಿ, ಸಂಸ್ಕಾರ ಸಂಸ್ಕೃತಿಯನ್ನು ಮಕ್ಕಳಿಗೆ ಕಲಿಸಬೇಕು ಎಂದು ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಎನ್.ಕುಮಾರ್ ಸಲಹೆ ನೀಡಿದರು.
ನಗರದ ಹೊರವಲಯದ ಬೈಪಾಸ್ ಗಣೇಶೋತ್ಸವ ಆಚರಣಾ ಸಮಿತಿ ಆಯೋಜಿಸಿರುವ ಗಣಪತಿ ಉತ್ಸವದಲ್ಲಿ ಭಾನುವಾರ ರಾತ್ರಿ ಮಾತನಾಡಿದರು.
ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ದೇಶದ ಜನರನ್ನು ಜಾತಿಗಳ ಹೆಸರಿನಲ್ಲಿ ಒಡೆಯುವ ಮೂಲಕ ಸ್ವಾತಂತ್ರ್ಯ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನಿಸಿದರು. ಆಗ ಲೋಕಮಾನ್ಯ ಬಾಲಗಂಗಾಧರ ತಿಲಕರು ದೇಶದ ಜನರಿಗೆ ಸಾರ್ವಜನಿಕವಾಗಿ ಗಣೇಶೋತ್ಸವ ಆಚರಿಸುವಂತೆ ಕರೆ ನೀಡಿದ ಪರಿಣಾಮವಾಗಿ ದೇಶದ ಜನರು ಜಾತಿ ಭೇದವನ್ನು ಮರೆತು ಸಾರ್ವಜನಿಕವಾಗಿ ಗಣೇಶೋತ್ಸವವನ್ನು ಆಚರಿಸುವ ಮೂಲಕ ಬ್ರಿಟಿಷರಿಗೆ ಸೆಡ್ಡು ಹೊಡೆದರು ಎಂದು ತಿಳಿಸಿದರು.
ಅಯೋಧ್ಯಾ ರಾಮಮಂದಿರ ನಿರ್ಮಾಣ ಉಸ್ತುವಾರಿ ಕಾರ್ಯದರ್ಶಿ ಗೋಪಾಲ್ಜೀ ಮಾತನಾಡಿ, ಸ್ವಾತಂತ್ರ್ಯ ಹೋರಾಟದ ಸಂಧರ್ಭದಲ್ಲಿ ಗಣೇಶೋತ್ಸವ ಹೇಗೆ ಹಿಂದುಗಳನ್ನು ಒಗ್ಗೂಡಿಸಲು ಸಾಧ್ಯವಾಯಿತೋ, ಅದೇ ರೀತಿ ಅಯೋಧ್ಯೆಯ ರಾಮಮಂದಿರ ನಿರ್ಮಾಣ ಕಾರ್ಯದಲ್ಲಿ ಸಮಸ್ತ ಹಿಂದುಗಳು ಜಾತಿ ಮತ ಭೇದಗಳನ್ನು ಬದಿಗೊತ್ತಿ ನಾವೆಲ್ಲ ಹಿಂದೂ, ನಾವೆಲ್ಲ ಒಂದು ಎಂಬ ಸಂದೇಶವನ್ನು ಸಾರಿದರು. ಒಟ್ಟಾಗಿ ರಾಮನ ಕಾರ್ಯವನ್ನು ಸುಸೂತ್ರವಾಗಿ ನೆರವೇರಿಸಿದರು. ಎಲ್ಲರೂ ರಾಮನ ಬದುಕನ್ನು ಅನುಸರಿಸಿದರೆ ರಾಮರಾಜ್ಯ ಸ್ಥಾಪನೆ ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಮಲ್ಲ ಕಂಬ ಪ್ರದರ್ಶನ ಏರ್ಪಡಿಸಲಾಗಿತ್ತು. ಕೆಎಎಸ್ ಅಧಿಕಾರಿ ವರಪ್ರಸಾದ್ ರೆಡ್ಡಿ, ವಿಶ್ವ ಹಿಂದು ಪರಿಷತ್ ಜಿಲ್ಲಾಧ್ಯಕ್ಷ ಬಿ.ಕೆ.ಮಂಜುನಾಥ್, ಗೌರಿಶಂಕರ್, ವೇಣುಜೀ, ಮಂಜುನಾಥ್, ದಯಾನಂದ್, ರಾಮಮೋಹನ್, ಉಪೇಂದ್ರ, ಬೈಪಾಸ್ ಗಣೇಶೋತ್ಸವ ಬಳಗದ ರವಿಕುಮಾರ್, ಸ್ವಾಗತ್, ರಾಜಶೇಖರ್, ಶಿವಾರೆಡ್ಡಿ, ಗಣೇಶ್, ಹರೀಶ್, ನವೀನ್, ನಿಖಿಲ್ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net