ಟಿಸಿ ಸ್ಪೋಟ ಮೂವರ ಸಾವು 5 ಮಂದಿಗೆ ಗಾಯ

Published on
 ಬಿಡದಿ:  ಟ್ರಾನ್ಸ್ ಫಾರ್ಮರ್ ಸ್ಫೋಟಗೊಂಡ ಪರಿಣಾಮ  ಪಕ್ಕದಲ್ಲೇ ಇದ್ದ ಸುಗಂಧ ದ್ರವ್ಯ ಗೋಡೌನ್ ಗೂ ಬೆಂಕಿ ತಗುಲಿ ಮೂರು ಮಂದಿ ಸಾವನ್ನಪ್ಪಿ 5 ಮಂದಿ  ಗಂಭೀರವಾಗಿ ಗಾಯಗೊಂಡಿರುವ ಘಟನೆ  ಕುಂಬಳಗೂಡು ಬಳಿಯ ರಾಮಸಂದ್ರದ ಗ್ರಾಮದಲ್ಲಿ ಭಾನುವಾರ ನಡೆದಿದೆ.
ರಾಮಸಂದ್ರದ ಗ್ರಾಮದಲ್ಲಿ ಸುಗಂಧ ದ್ರವ್ಯಗಳ ಖಾಲಿ ಬಾಟಲ್ ಗಳ ಶೇಖರಣೆಯ ಗೋಡನ್ ಇತ್ತು. ಇದರ ಪಕ್ಕದಲ್ಲಿ ಬೆಸ್ಕಾಂ ಇಲಾಖೆ ವತಿಯಿಂದ ವಿದ್ಯುತ್ ಟ್ರಾನ್ಸ್ ಫಾರ್ಮರ್ ಅಳವಡಿಸಲಾಗಿತ್ತು. ಭಾನುವಾರ ಸಂಜೆ ಈ ಟ್ರಾನ್ಸ್ ಫಾರ್ಮರ್  ಇದ್ದಕ್ಕಿದ್ದಂತೆ ಸ್ಪೋಟಗೊಂಡಿದೆ. ಸ್ಪೋಟದ ಹಿನ್ನೆಲೆಯಲ್ಲಿ ಬೆಂಕಿಯ ಕಿಡಿ ಸುಗಂಧ ದ್ರವ್ಯದ ಗೋಡೌನ್ ಗೆ ತಾಕಿದೆ. ಬಾಟಲ್ ಗಳಲ್ಲಿ ಅಲ್ಪ ಪ್ರಮಾಣದಲ್ಲಿ   ಗ್ಯಾಸ್ ಇದ್ದ ಕಾರಣ ಒಮ್ಮೆಲೆ ಬಾಟಲ್ ಗಳು ಸಹ ಹೊತ್ತಿಕೊಂಡಿವೆ.
ಗೋಡೌನ್ ನಲ್ಲಿ ಕೆಲಸ ಮಾಡುತ್ತಿದ್ದ ಮೂರು ಮಂದಿ ಕಾರ್ಮಿಕರು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸುಟ್ಟು ಹೋಗಿದ್ದಾರೆ. ಇತರೆ 5 ಮಂದಿ ತೀವ್ರವಾಗಿ ಗಾಯಗೊಂಡಿದ್ದು, ಇವರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ. ಮೃತರು ಮತ್ತು ಗಾಯಾಗಳುಗಳ ಗುರುತು ಇನ್ನೂ ಪತ್ತೆಯಾಗಿಲ್ಲ. ಒಂದೇ  ಸಮನೆ ಗೋಡೌನ್ ನಿಂದ ಬಾಟಲ್ ಗಳ ಸಿಡಿತದ ಸದ್ದು ಅಕ್ಕಪಕ್ಕದ ನಿವಾಸಿಗಳನ್ನು ಆತಂಕ್ಕೆ ದೂಡಿತ್ತು. ಸ್ಥಳೀಯರ ಮಾಹಿತಿ ಪ್ರಕಾರ ಕೇವಲ 5 ರಿಂದ 10 ನಿಮಿಷಗಳಲ್ಲಿ ಗೋಡೌನ್ ನಲ್ಲಿದ್ದ ಸಾವಿರಾರು ಬಾಟಲ್ ಗಳು ಸಿಡಿದು ಬೆಂಕಿಗೆ ಆಹುತಿಯಾಗಿವೆ ಎನ್ನಲಾಗಿದೆ.
ಬೆಂಕಿ‌ ಹೊತ್ತಿಕೊಂಡ ವಿಷಯ ತಿಳಿದ  ಅಗ್ನಿಶಾಮಕ ದಳ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ.
ಜನ ವಸತಿ ಪ್ರದೇಶದ ಮದ್ಯ ಭಾಗದಲ್ಲೆ ಈ‌ ಗೋಡೌನ್ ಇದ್ದ ಕಾರಣ ಅಕ್ಕಪಕ್ಕದ ಮನೆಯವರಲ್ಲಿ ಆತಂಕದ ಮನೆ ಮಾಡಿತ್ತು. ದಟ್ಟ ಹೊಗೆ ಕೂಡ ಇಡಿ ಪ್ರದೇಶವನ್ನ ಆವರಿಸಿತ್ತು.  ಸುಗಂಧ ದ್ರವ್ಯ ಗೋಡೌನ್ ನಲ್ಲಿ ಇದ್ದ ಸಾವಿರಾರು ಖಾಲಿ ಬಾಟಲ್ ಗಳು ಸೇರಿದಂತೆ ಇತರೆ ವಸ್ತುಗಳು ಬೆಂಕಿಗೆ ಆಹುತಿ ಯಾಗಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net