

ಹಾವೇರಿ: ಮಹಾಶಿವರಾತ್ರಿ ಅಂಗವಾಗಿ ಗುರುವಾರ ಜಿಲ್ಲಾದ್ಯಂತ ಶಿವನಾಮ ಸ್ಮರಣೆ ನಡೆಯಿತು. ಓಂ ನಮಃ ಶಿವಾಯ ಎಂಬ ಪಂಚಾಕ್ಷರಿ ಮಂತ್ರ ಜಪಿಸುತ್ತ ಜನರು ಶಿವನ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.
ನಗರದ ಪುರಸಿದ್ಧೇಶ್ವರ ದೇವಸ್ಥಾನ, ಈಶ್ವರ ದೇವಸ್ಥಾನ, ಹುಕ್ಕೇರಿಮಠ, ಈಶ್ವರಿ ವಿಶ್ವವಿದ್ಯಾಲಯ, ವೀರಭದ್ರೇಶ್ವರ ದೇವಸ್ಥಾನ, ಬಸವೇಶ್ವರ ನಗರದ ಸಿ ಬ್ಲಾಕ್ನಲ್ಲಿರುವ ಗಜಾನನ ಹಾಗೂ ಆಂಜನೇಯ ದೇವಸ್ಥಾನಗಳಲ್ಲಿ ಶಿವ ಮೂರ್ತಿ ಹಾಗೂ ದ್ವಾದಶ ಜ್ಯೋತಿರ್ಲಿಂಗಗಳಿಗೆ ಅಭಿಷೇಕ ಮಾಡಿ ವಿಶೇಷ ಪೂಜೆ ಸಲ್ಲಿಸಿದರು. ಬನ್ನಿಗಿಡ, ಪತ್ರಿಗಿಡಗಳಿಗೆ ಮಹಿಳೆಯರು ಪೂಜೆ ಸಲ್ಲಿಸಿದರು. ದೇವಸ್ಥಾನಗಳಲ್ಲಿ ಬಿಲ್ವಾರ್ಚನೆ, ಎಲೆಪೂಜೆ, ಕಂಕಣಪೂಜೆ, ಅಭಿಷೇಕ, ಕ್ಷೀರಾಭಿಷೇಕವನ್ನು ಭಕ್ತರು ನೆರವೇರಿಸಿದರು. ರಾತ್ರಿ ಜಾಗರಣೆ ಹಾಗೂ ಸಂಜೆಯ ವಿಶೇಷ ಪೂಜೆಯನ್ನು ಸಲ್ಲಿಸಿದ ಭಕ್ತರು ಶಿವನಿಗೆ ಪಂಚಾಮೃತ, ಹಾಲು, ತುಪ್ಪ, ಹಣ್ಣುಗಳು, ವಿವಿಧ ಖಾದ್ಯಗಳ ನೈವೇದ್ಯ ಸಲ್ಲಿಸಿದರು.
ದ್ವಾದಶ ಜ್ಯೋತಿರ್ಲಿಂಗ ದರ್ಶನ: ಹಾವೇರಿ ಬಸವೇಶ್ವರ ನಗರದ ಸಿ ಬ್ಲಾಕ್ನಲ್ಲಿರುವ ಗಜಾನನ ಹಾಗೂ ಆಂಜನೇಯ ದೇವಸ್ಥಾನದಲ್ಲಿ ದ್ವಾದಶ ಜ್ಯೋತಿರ್ಲಿಂಗಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ವಿವಿಧ ಹೂವು, ಬಿಲ್ವಪತ್ರಿಯಿಂದ ಜ್ಯೋತಿರ್ಲಿಂಗಗಳನ್ನು ಅಲಂಕರಿಸಲಾಗಿತ್ತು. ಬೆಳಗ್ಗೆಯಿಂದಲೇ ಭಕ್ತಾದಿಗಳು ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದರು.
ಶಿವಲಿಂಗ ಮೆರವಣಿಗೆ: ರಾಣೆಬೆನ್ನೂರ ನಗರ ಸೇರಿದಂತೆ ತಾಲೂಕಿನಾದ್ಯಂತ ಶ್ರದ್ಧೆ, ಭಕ್ತಿಯಿಂದ ಆಚರಿಸಲಾಯಿತು. ಸಿದ್ಧೇಶ್ವರನಗರದ ಸಿದ್ಧೇಶ್ವರ ಸ್ವಾಮಿ ದೇವಸ್ಥಾನ, ಮೇಡ್ಲೇರಿ ರಸ್ತೆ, ಈಶ್ವರ ನಗರ, ಗೌರಿಶಂಕರ ನಗರ, ಕೆಇಬಿ ವಿನಾಯಕ ದೇವಸ್ಥಾನ ಹಾಗೂ ಕೋಟೆ ಪ್ರದೇಶ, ದೊಡ್ಡಪೇಟೆ ಸೇರಿ ಪ್ರಮುಖ ದೇವಸ್ಥಾನಗಳಲ್ಲಿ ಶಿವನ ಮೂರ್ತಿಗೆ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು. ಗೌರಿಶಂಕರ ನಗರದ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ವತಿಯಿಂದ ಶಿವಲಿಂಗುಗಳನ್ನು ವಾಹನ ಮೇಲೆ ಪ್ರತಿಷ್ಠಾಪಿಸಿ, ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ನೂರಾರು ಭಕ್ತರು ಪಾಲ್ಗೊಂಡಿದ್ದರು.
ಗಂಗಾಧರನಿಗೆ ಅಭಿಷೇಕ: ಅಕ್ಕಿಆಲೂರ ಹೊರವಲಯದಲ್ಲಿರುವ ಕೆರೆ ಕಲ್ಮೇಶ್ವರ ದೇವಸ್ಥಾನಕ್ಕೆ ಬೆಳಗ್ಗೆಯಿಂದಲೇ ಭಕ್ತರು ಆಗಮಿಸಿ ದರ್ಶನ ಪಡೆದರು. ಕೆರೆಯಲ್ಲಿ ಗಂಗಾಮಾತೆಗೆ ಪೂಜೆ ಸಲ್ಲಿಸಿ, ಶಿವನಿಗೆ ಅಭಿಷೇಕ ಮಾಡಿದರು. ಖರ್ಜೂರ, ಕಬ್ಬು, ಕಲ್ಲಂಗಡಿ, ದ್ರಾಕ್ಷಿ, ಕಡ್ಲೆಕಾಳು ನೈವೇದ್ಯ ಹಿಡಿದು, ಪರಸ್ಪರ ಹಂಚಿದರು. ಪಟ್ಟಣದ ಮಧ್ಯೆ ಭಾಗದಲ್ಲಿರುವ ಗಂಗಾಧರ ದೇವಸ್ಥಾನದಲ್ಲಿ ನಾರಾಯಣ ವೈದ್ಯ ಶಾಸ್ತ್ರಿಗಳು ಗಂಗಾಧರೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದರು.
ಬನ್ನಿ, ಬಿಲ್ವಪತ್ರೆ ಗಿಡಗಳಿಗೆ ಪೂಜೆ: ಬಂಕಾಪುರ ಪಟ್ಟಣದ ಐತಿಹಾಸಿಕ ಸಿದ್ಧರಾಮೇಶ್ವರ, ನೀಲಕಂಠೇಶ್ವರ, ವೀರಭದ್ರೇಶ್ವರ, ಚಾಮುಂಡೇಶ್ವರಿ, ಕೋಟೆ ಯಲ್ಲಮ್ಮ, ಕೊಟ್ಟಿಗೇರಿಯ ಮೈಲಾರಲಿಂಗೇಶ್ವರ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನೆರವೇರಿದವು. ಪ್ರಾತಃಕಾಲ ಸಿದ್ಧರಾಮೇಶ್ವರ, ನೀಲಕಂಠೇಶ್ವರ ದೇವರಿಗೆ ಮಹಾರುದ್ರಾಭಿಷೇಕ, ರುದ್ರಪಠಣ, ಬಿಲ್ವಾರ್ಚನೆ, ಪೂಜೆ ಸಲ್ಲಿಸಲಾಯಿತು. ಬೆಳಗ್ಗೆಯಿಂದಲೇ ಮಹಿಳೆಯರು ದೇವಸ್ಥಾನಗಳ ಮುಂದೆ ರಂಗೋಲಿ ಹಾಕಿ, ಬನ್ನಿಗಿಡ, ಬಿಲ್ವಪತ್ರೆ ಗಿಡಗಳಿಗೆ ಪೂಜೆ ಸಲ್ಲಿಸಿ, ಹೂವು-ಹಣ್ಣು ಸಮರ್ಪಿಸಿ ನಮನ ಸಲ್ಲಿಸಿದರು. ನಂತರ ಮಹಾಪ್ರಸಾದ ಜರುಗಿತು. ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಶಿವಾಲಯಗಳಲ್ಲಿ ಗುರುವಾರ ವಿಶೇಷ ಪೂಜೆ ಸಲ್ಲಿಸಲಾಯಿತು.
ದೇವಸ್ಥಾನಗಳಿಗೆ ಗಂಗಾಜಲ ವಿತರಣೆ: ಸವಣೂರ ಪಟ್ಟಣದ ಗೌಡ್ರ ಓಣಿ ಈಶ್ವರ ದೇವಸ್ಥಾನ, ಶಿಂಪಿಗಲ್ಲಿ ಹರಿಮಂದಿರ, ದಂಡಿನಪೇಟೆ ಈಶ್ವರ ದೇವಸ್ಥಾನ, ಗೌಡ್ರ ಓಣಿ ಗೌಡ್ರ ಗುರುಸ್ವಾಮಿ ಮಠ, ಶುಕ್ರವಾರಪೇಟೆ ಚಿದಂಬರಂ ದೇವಸ್ಥಾನದಲ್ಲಿ ಭಕ್ತರು ವಿವಿಧ ಪೂಜೆ ಸಲ್ಲಿಸಿದರು. ತಾಲೂಕಾಡಳಿತದಿಂದ ಆರ್ಐ ರವಿ ಮಾಚಕನೂರ ನೇತೃತ್ವದಲ್ಲಿ ಪಟ್ಟಣದ ದೇವಸ್ಥಾನಗಳಿಗೆ ಗಂಗಾಜಲ ವಿತರಿಸಲಾಯಿತು. ಬುಧವಾರಪೇಟೆ ಈಶ್ವರ ದೇವಸ್ಥಾನದಲ್ಲಿ ವೇ.ಮೂ. ಮುರಯ್ಯ ಸಾಲಿಮಠ ನೇತೃತ್ವದಲ್ಲಿ ಈಶ್ವರ ಮೂರ್ತಿಗೆ ನಿರಂತರ ಜಲಾಭಿಷೇಕ, ರುದ್ರಾಭಿಷೇಕ, ಪಂಚಾಭಿಷೇಕ, ಸಹಸ್ರ ನಾಮಾವಳಿ ಮತ್ತಿತರ ಧಾರ್ವಿುಕ ಕಾರ್ಯಗಳು ಜರುಗಿದವು. ದೇವಸ್ಥಾನದ ಈಶ್ವರ ಮೂರ್ತಿಗೆ ಕವಚ ದಾನ ನೀಡಿದ ರಮೇಶ ಹಣಗಿ ಅವರಿಗೆ ಗುರು ಕಾರುಣ್ಯ ನೀಡಿ ಗೌರವಿಸಲಾಯಿತು.
ಹಾನಗಲ್ಲದಲ್ಲಿ ತ್ರಿಕಾಲ ಪೂಜೆ: ಹಾನಗಲ್ಲ ಪಟ್ಟಣದ ಆರಾಧ್ಯದೈವ ತಾರಕೇಶ್ವರ ದೇವಸ್ಥಾನದಲ್ಲಿ ತ್ರಿಕಾಲ ಪೂಜೆ ನೆರವೇರಿದವು. ಶಂಕರಮಠದಲ್ಲಿ ವಿದ್ಯಾಶಂಕರನಿಗೆ, ದತ್ತ ದೇವಸ್ಥಾನದಲ್ಲಿ ದತ್ತಾತ್ರೇಯರಿಗೆ ಮತ್ತು ತಾರಕೇಶ್ವರನಿಗೆ ಯಾಮಪೂಜೆಗಳು ನಡೆದವು. ಪಟ್ಟಣದ ಹೊರಭಾಗದಲ್ಲಿರುವ ಬಿಲ್ಲೇಶ್ವರ, ಸುರಳೇಶ್ವರ ರಸ್ತೆಯ ರಾಮಲಿಂಗೇಶ್ವರ, ಮಲ್ಲಿಗ್ಗಾರದ ಸಿದ್ಧರಾಮೇಶ್ವರ ದೇವರಿಗೆ ಋತ್ವಿಜರಿಂದ ರುದ್ರಾಭಿಷೇಕ ಜರುಗಿದವು. ಕಲ್ಲಹಕ್ಕಲ ಬಡಾವಣೆಯ ಚಂಡಿಕೇಶ್ವರ, ಅಕ್ಕಮಹಾದೇವಿ ದೇವಸ್ಥಾನದಲ್ಲಿರುವ ನೀಲಕಂಠೇಶ್ವರ ದೇವಸ್ಥಾನಗಳಲ್ಲಿ ಭಕ್ತರು ಶಿವಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ಆನಂದೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಹಬ್ಬದ ಅಂಗವಾಗಿ ಸವಾಲ್-ಜವಾಬ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ರುದ್ರಾಭಿಷೇಕ, ಪ್ರಸಾದ ವಿತರಣೆ: ರಟ್ಟಿಹಳ್ಳಿ ಪಟ್ಟಣದ ಐತಿಹಾಸಿಕ ಕದಂಬೇಶ್ವರ ಸ್ವಾಮಿ, ಈಶ್ವರ, ಭಂಟೇಶ್ವರ, ಕನ್ನಿಕಾಪರಮೇಶ್ವರ ದೇವಸ್ಥಾನಗಳಲ್ಲಿ ರುದ್ರಾಭಿಷೇಕ, ಪ್ರಸಾದ ವಿತರಣೆ ಕಾರ್ಯಗಳು ಜರುಗಿದವು. ಕದಂಬೇಶ್ವರ ಸ್ವಾಮಿಗೆ ಭಕ್ತರು ದೇಣಿಗೆ ರೂಪದಲ್ಲಿ ನೀಡಿದ ಮುಖ, ನಾಗಾಭರಣ ಹಾಕಿ ವಿಶೇಷ ಅಲಂಕಾರ ಮಾಡಲಾಯಿತು. ಪ್ರಧಾನ ಅರ್ಚಕ ಗಿರೀಶ ಭಟ್ಟ, ದತ್ತಾತ್ರೇಯ ಜೋಷಿ, ಪ್ರಭಾವತಿ ಕುಲ್ಕರ್ಣಿ, ವೆಂಕಟೇಶ ಕಟ್ಟಿ, ಉಮೇಶ ಭೀಮಪ್ಪನವರ, ರಾಜು ವೆರ್ಣಿಕರ ನೇತೃತ್ವದಲ್ಲಿ ಧಾರ್ವಿುಕ ಕಾರ್ಯಕ್ರಮಗಳು ನಡೆದವು. ಈಶ್ವರ ದೇವಸ್ಥಾನದಲ್ಲಿ ಕಬ್ಬಿಣಕಂತಿಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಮಾರ್ಗದರ್ಶನದಲ್ಲಿ ಪೂಜೆ, ಮಹಾಮಂಗಳಾರತಿ ನೆರವೇರಿದವು.
ಆರಾಧನೆಯಿಂದ ಮನಸಿಗೆ ಶಾಂತಿ: ಹಿರೇಕೆರೂರ ಪಟ್ಟಣದ ವಿಠ್ಠಲ ರುಖುಮಾಯಿ ದೇವಸ್ಥಾನದಲ್ಲಿ ಯಲ್ಲಟ್ಟಿಯ ಆಧ್ಯಾತ್ಮಿಕ ಆಶ್ರಮದ ಪೀಠಾಧಿಪತಿ ಲಿಂಗರಾಜ ಮಹಾರಾಜರು, ಸುರೇಶ ಮಹಾರಾಜರ ಸಾನ್ನಿಧ್ಯದಲ್ಲಿ ಮಹಾಜಪಯಜ್ಞ, ಜಾಗರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದೇವಸ್ಥಾನ ಸಂಸ್ಥಾಪಕ ಯಲ್ಲಪ್ಪ ಮಧೂರಕರ ಮಾತನಾಡಿ, ನಿತ್ಯ ದೇವರ ಧ್ಯಾನ, ಜಪ, ಆರಾಧನೆಯಿಂದ ಮನಸಿಗೆ ಶಾಂತಿ, ಸಂಸಾರದ ಅಭಿವೃದ್ಧಿಗೆ ಪೂರಕವಾಗಲಿದೆ. ದೇಶ ಕರೊನಾ ಮಹಾಮಾರಿಯಿಂದ ಸಂಪೂರ್ಣ ಮುಕ್ತವಾಗಬೇಕು. ಮಳೆ, ಬೆಳೆ ಚೆನ್ನಾಗಿ ಆಗಿ ಜನತೆ ನೆಮ್ಮದಿ ಜೀವನ ನಡೆಸಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ದೇವಸ್ಥಾನ ಅರ್ಚಕ ರಘುನಾಥ ನಾಡಗೇರ ವೈದಿಕತ್ವದಲ್ಲಿ ವಿಠ್ಠಲ ರುಖುಮಾಯಿ ಮತ್ತಿತರ ದೇವರಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ವಿಠ್ಠಲ ರುಖುಮಾಯಿ ದೇವರ ಮೂರ್ತಿಗಳನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು.
ಸೋಮಲಿಂಗೇಶ್ವರನಿಗೆ ವಿವಿಧ ಪೂಜೆ: ಶಿಗ್ಗಾಂವಿ ಪಟ್ಟಣದ ಹೊರವಲಯದಲ್ಲಿರುವ ಪುರಾತನ ಸೋಮಲಿಂಗೇಶ್ವರ ದೇವಸ್ಥಾನದಲ್ಲಿ ವಿವಿಧ ಪೂಜಾ ಕಾರ್ಯಕ್ರಮ ಗುರುವಾರ ಬೆಳಗ್ಗೆ ನೆರವೇರಿತು. ಶಿವಾನಂದ ಹೊಸಮನಿ, ಸಿದ್ದರಾಮಗೌಡ ಮೆಳ್ಳಾಗಟ್ಟಿ, ನಾಗರಾಜ ಹೊಸಮನಿ, ಉಮೇಶ ಹಿರೂಲಾಲ, ಪರುಶುರಾಮ ಕುದರಿ, ಮಂಜುನಾಥ ಗೌಳಿ, ಸುರೇಶ ತಳವಾರ, ಮಲ್ಲಪ್ಪ ಹೂಗಾರ, ಬಸವರಾಜ ರಾಗಿ ಇತರರಿದ್ದರು.