ರಾಜ್ಯದಲ್ಲಿ 2000 ಕೋಟಿ ರೂ. ಹೂಡಿಕೆಗೆ ಮುಂದಾದ ಟಾಟಾ ಟೆಕ್ನಾಲಜೀಸ್; ಸಿಇಎಫ್​ಸಿ ಸ್ಥಾಪನೆಗೆ ಪ್ರಸ್ತಾವನೆ..

CEFC
Published on

ಬೆಂಗಳೂರು: ಪ್ರತಿಷ್ಠಿತ ಟಾಟಾ ಟೆಕ್ನಾಲಜೀಸ್ ಕಂಪನಿಯು 2000 ಕೋಟಿ ರೂಪಾಯಿ ಹೂಡಿಕೆ ಮಾಡಿ ರಾಜ್ಯದಲ್ಲಿ ಮೂರು ಸಾಮಾನ್ಯ ಇಂಜಿನಿಯರಿಂಗ್ ಸೌಲಭ್ಯಗಳ ಕೇಂದ್ರ (ಸಿಇಎಫ್​ಸಿ- ಕಾಮನ್ ಇಂಜಿನಿಯರಿಂಗ್ ಫೆಸಿಲಿಟಿ ಸೆಂಟರ್)ಗಳನ್ನು ಸ್ಥಾಪಿಸಲು ಮುಂದೆ ಬಂದಿದೆ.

ಕಂಪನಿಯ ಉನ್ನತ ಅಧಿಕಾರಿಗಳು ಬುಧವಾರ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರನ್ನು ವಿಧಾನಸೌಧದ ಕಚೇರಿಯಲ್ಲಿ ಭೇಟಿಯಾಗಿ ಈ ಸಂಬಂಧ ಪ್ರಸ್ತಾವನೆ ಸಲ್ಲಿಸಿ ಮಾತುಕತೆ ನಡೆಸಿದರು.

ವಿಶೇಷವಾಗಿ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ದಿಮೆ (ಎಂಎಸ್ಎಂಇ)ಗಳನ್ನು ಗಮನದಲ್ಲಿರಿಸಿಕೊಂಡು ಈ ಘಟಕಗಳ ಕೇಂದ್ರಗಳನ್ನು ಸ್ಥಾಪಿಸುವುದು ಕಂಪನಿಯ ಉದ್ದೇಶವಾಗಿದೆ. ಸರ್ಕಾರ‌ ಖಾಸಗಿ ಸಹಭಾಗಿತ್ವದ ಪಿಪಿಪಿ ಮಾದರಿಯಲ್ಲಿ ಇದನ್ನು ಸ್ಥಾಪಿಸುವ ಯೋಜನೆ ಇದ್ದು, ಟಾಟಾ ಟೆಕ್ನಾಲಜೀಸ್ ಶೇ.70 ಹೂಡಿಕೆ ಮಾಡಿದರೆ ಸರ್ಕಾರದ ಪಾಲು ಶೇ.30 ಇರಲಿದೆ ಎಂದು ಸಚಿವರು ತಿಳಿಸಿದ್ದಾರೆ.

ಎಂಎಸ್ಎಂಇಗಳಿಗಾಗಿ ಸಿಇಎಫ್​ಸಿ ಸ್ಥಾಪನೆ ಸಂಬಂಧ ಪ್ರಸ್ತಾವನೆ ಸಲ್ಲಿಕೆಯಾಗಿರುವುದು ರಾಜ್ಯದಲ್ಲಿ ಇದೇ ಮೊದಲು ಎನ್ನಲಾಗಿದೆ. ಪ್ರತಿ ಕೇಂದ್ರಕ್ಕೆ ಸುಮಾರು 630 ಕೋಟಿ ರೂಪಾಯಿ ವೆಚ್ಚವಾಗಲಿದೆ. ಇವುಗಳಿಂದ ಈಗ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾಪನೆಯಾಗುತ್ತಿರುವ ಅಡ್ವಾನ್ಸ್ ಮ್ಯಾನಫ್ಯಾಕ್ಚರಿಂಗ್ 4.0, ಎಲೆಕ್ಟ್ರಿಕ್ ವೆಹಿಕಲ್ ಟೆಸ್ಟಿಂಗ್ ಮತ್ತು ಬಾಹ್ಯಾಕಾಶ ಹಾಗೂ ರಕ್ಷಣಾ ವಲಯದ ಉದ್ದಿಮೆಗಳಿಗೆ ಹೆಚ್ಚಿನ ಉಪಯೋಗ ಆಗುತ್ತದೆ. ಅದೇ ರೀತಿ ಈ ವಲಯಗಳ ಸ್ಟಾರ್ಟ್ ಅಪ್ ಗಳಿಗೂ ಇದರಿಂದ ಹೆಚ್ಚಿನ ಅನುಕೂಲವಾಗುತ್ತದೆ ಎಂದು ವಿವರಿಸಿದರು.

ಈ ಪ್ರಸ್ತಾವ‌ ಸ್ವಾಗತಾರ್ಹ. ಸರ್ಕಾರವೂ ಎಂಎಸ್​​ಎಂಇಗಳನ್ನು ಬಲಪಡಿಸಲು ಒತ್ತು ಕೊಟ್ಟಿದೆ. ಪ್ರತಿ ಕೇಂದ್ರಕ್ಕೆ ಸುಮಾರು ಐದು ಎಕರೆಯಷ್ಟು ಜಾಗ ಬೇಕಾಗಲಿದ್ದು, ಇದನ್ನು ಎಲ್ಲಿ ಕೊಡಬೇಕೆಂಬ ಬಗ್ಗೆ ಬರುವ ದಿನಗಳಲ್ಲಿ ನಿರ್ಧರಿಸಲಾಗುತ್ತದೆ ಎಂದು ಅವರು ಹೇಳಿದರು.

ಟಾಟಾ ಟೆಕ್ನಾಲಜೀಸ್ ಅಧ್ಯಕ್ಷ ಪವನ್ ಭಗೇರಿಯಾ, ಉಪಾಧ್ಯಕ್ಷ ಪುಷ್ಕರಾಜ್ ಕೌಲಗೂಡ್, ಮುಖ್ಯಸ್ಥ ಪ್ರವೀಣ್ ದಿವೇಕರ್, ಕೈಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತರಾದ ಗುಂಜನ್ ಕೃಷ್ಣ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net