

ವಿಜಯವಾಣಿ ಸುದ್ದಿಜಾಲ ಚಿಕ್ಕಬಳ್ಳಾಪುರ
ಜಿಲ್ಲೆಯಲ್ಲಿ ಕಲ್ಲು ಗಣಿಗಾರಿಕೆ ಗುತ್ತಿಗೆಯಿಂದ ಸಂಗ್ರಹಿಸಲು ನಿಗದಿಪಡಿಸಿರುವ ವಾರ್ಷಿಕ ಗುರಿ 63 ಕೋಟಿ ರೂ. ರಾಜಧನದ ಪೈಕಿ ಇದುವರೆಗೂ 23.70 ಕೋಟಿ ರೂ. (ಜೂನ್ ಅಂತ್ಯಕ್ಕೆ) ವಸೂಲಿಯಾಗಿದ್ದು, ಶೇ.37.62 ಗುರಿ ಸಾಧನೆಯಾಗಿದೆ.
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಮೀಪದಲ್ಲಿರುವ ಜಿಲ್ಲೆಯಲ್ಲಿ ಅಲಂಕಾರಿಕ ಶಿಲೆ/ಗ್ರಾೃನೈಟ್‌ನ 69, ಕಟ್ಟಡ ಕಲ್ಲು 136, ಇತರ ಉಪ ಖನಿಜ 3 ಸೇರಿ ಒಟ್ಟು 208 ಕಲ್ಲು ಗಣಿ ಗುತ್ತಿಗೆ ಸಂಸ್ಥೆಗಳಿವೆ. ಕಲ್ಲು ಪುಡಿಯ 79 ಕ್ರಷರ್ ಘಟಕಗಳಿದ್ದು, ದೊಡ್ಡ ಪ್ರಮಾಣದಲ್ಲಿ ಕಲ್ಲು ಗಣಿಗಾರಿಕೆ ವ್ಯವಹಾರ ನಡೆಯುತ್ತಿದೆ. ಪ್ರತಿನಿತ್ಯ ಈ ಗಣಿಗಳಿಂದ ನೂರಾರು ಟಿಪ್ಪರ್ ಲಾರಿಗಳಲ್ಲಿ ಕಲ್ಲು ಸಾಗಿಸಲಾಗುತ್ತದೆ. ಆದಾಯ ಬರುತ್ತಿರುವ ನಡುವೆ ಪರಿಸರ ಮಾಲಿನ್ಯ, ಸುತ್ತಲಿನ ಬಹುತೇಕ ಜನರಲ್ಲಿ ಅನಾರೋಗ್ಯ, ಸಂಚಾರ ಕಿರಿಕಿರಿ ಮತ್ತು ಅಪಘಾತಗಳ ಸಂಖ್ಯೆ ಹೆಚ್ಚಳ ಸೇರಿ ವಿವಿಧ ಸಮಸ್ಯೆಗಳು ಬಾಧಿಸುತ್ತಿವೆ.
ರಾಜಧನ ಸಂಗ್ರಹ ಸಾಧನೆ
ಜಿಲ್ಲೆಯಲ್ಲಿ ಕಲ್ಲು ಗಣಿಗಾರಿಕೆಯಿಂದ ಸರಾಸರಿ 60 ಕೋಟಿ ರೂ. ಹೆಚ್ಚು ಆದಾಯ ನಿರೀಕ್ಷೆ ಇದ್ದು, ಕಳೆದ ಮೂರು ವರ್ಷಗಳಲ್ಲಿ ಶೇ.85ಕ್ಕೂ ಹೆಚ್ಚು ಸಾಧನೆಯಾಗಿದೆ. ಇನ್ನು 2023-24ನೇ ಸಾಲಿನಲ್ಲಿ ಸರಾಸರಿಗಿಂತಲೂ ಎರಡು ಪಟ್ಟು ಗುರಿ ನಿಗದಿಯ ನಡುವೆ ಶೇ.45 ಸಾಧನೆ ತೋರಲಾಗಿದೆ.
ಪ್ರತಿಷ್ಠಾನದಲ್ಲಿನ ಹಣ ಅಭಿವೃದ್ಧಿಗೆ
ಗಣಿ ಆದಾಯದಲ್ಲಿ ನಿರ್ದಿಷ್ಟ ಪಾಲನ್ನು ಸಾರ್ವಜನಿಕ ಅಭಿವೃದ್ಧಿ ಕೆಲಸಕ್ಕೆ ಖರ್ಚು ಮಾಡುವ ಉದ್ದೇಶದಿಂದ ಸ್ಥಾಪನೆಗೊಂಡಿರುವ ಜಿಲ್ಲಾ ಖನಿಜ ಪ್ರತಿಷ್ಠಾನಕ್ಕೆ 68,09,79,197 ರೂ. ದೇಣಿಗೆ ವಸೂಲಿಯಾಗಿದೆ. ಇದರಲ್ಲಿ ಹೆಚ್ಚಿನ ಕಲ್ಲು ಕ್ರಷರ್‌ಗಳನ್ನು ಹೊಂದಿರುವ ಜಿಲ್ಲಾ ಕೇಂದ್ರದ್ದೇ ದೊಡ್ಡ ಪಾಲು ಇದೆ. ಪ್ರತಿಷ್ಠಾನದ ಹಣದಲ್ಲಿ ಮೂಲಸೌಕರ್ಯ, ಆರೋಗ್ಯ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ನೈರ್ಮಲೀಕರಣ, ಇಂಧನ ಮತ್ತು ಜಲಾನಯನ, ಕೌಶಲಾಭಿವೃದ್ಧಿ ಸೇರಿ ವಿವಿಧ ವಲಯಗಳ ಅಭಿವೃದ್ಧಿ ಕೆಲಸ ಕೈಗೊಳ್ಳುತ್ತಿದ್ದು, ಪ್ರತಿಷ್ಠಾನ ಸಮಿತಿಯ ಶಿಾರಸಿನಂತೆ 135 ಅಭಿವೃದ್ಧಿ ಕಾಮಗಾರಿಗಳಿಗೆ 47.89 ಕೋಟಿ ರೂ. ವೆಚ್ಚದ ಯೋಜನೆಯನ್ನು ರೂಪಿಸಲಾಗಿದೆ. ಇದರಲ್ಲಿ 79 ಕಾಮಗಾರಿಗಳು ಪೂರ್ಣಗೊಂಡಿದ್ದು 38 ಪ್ರಗತಿಯಲ್ಲಿವೆ. 30.85 ಕೋಟಿ ರೂ. ಖರ್ಚಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ತಿಳಿಸಿದೆ.
ಸುರಕ್ಷತೆಗೆ ಆದ್ಯತೆ ಬೇಕು
ಜಿಲ್ಲೆಯಲ್ಲಿ ನಿರೀಕ್ಷೆಗೂ ಮೀರಿ ಗಣಿಗಾರಿಕೆ ನಡೆಯುತ್ತಿದೆ. ಆಂಧ್ರ ಭಾಗದ ಉದ್ಯಮಿಗಳು, ಬೇನಾಮಿ ಹೆಸರಿನಲ್ಲಿ ಜನಪ್ರತಿನಿಧಿಗಳು ಮತ್ತು ರಾಜಕೀಯ ವ್ಯಕ್ತಿಗಳು ಗುತ್ತಿಗೆ ಪಡೆದುಕೊಂಡಿದ್ದು ದೊಡ್ಡ ಪ್ರಮಾಣದ ವ್ಯವಹಾರದಲ್ಲಿ ಭಾರಿ ಆದಾಯ ಕಾಣುತ್ತಿದ್ದಾರೆ. ಇದರ ನಡುವೆ ಗಣಿ ಚಟುವಟಿಕೆ ನಡೆಯುವ ಸ್ಥಳೀಯ ಪ್ರದೇಶಗಳಲ್ಲಿ ಸುರಕ್ಷತೆಗೆ ಆದ್ಯತೆ ನೀಡಬೇಕಾಗಿದೆ. ಹಣದ ಪ್ರಭಾವದಲ್ಲಿ ಸುತ್ತಲಿನ ಜನರ ಸಮಸ್ಯೆಗಳನ್ನು ಬಗೆಹರಿಸುವ ಕೆಲಸವಾಗುತ್ತಿಲ್ಲ. ಭಾರಿ ತೂಕದ ಕಲ್ಲುಗಳನ್ನು ಸಾಗಿಸುವುದರಿಂದ ರಸ್ತೆಗಳು ಹಾಳಾಗುತ್ತಿವೆ. ಕ್ರಷರ್‌ಗಳ ಧೂಳು ಬೆಳೆ ಆವರಿಸಿಕೊಂಡು ಇಳುವರಿ ಕೈಸೇರುತ್ತಿಲ್ಲ. ಕಲ್ಲುಗಳನ್ನು ಸಾಗಿಸುವ ವಾಹನಗಳು ವೇಗವಾಗಿ ಸಂಚರಿಸುವುದರಿಂದ ಅಪಘಾತಗಳಿಗೆ ಕಾರಣವಾಗುತ್ತಿದೆ. ಈ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿ ಬಂದಿದೆ.
ನಿಯಮ ಉಲ್ಲಂಘನೆಗೆ ದಂಡ
ಕಲ್ಲು ಗಣಿಗಾರಿಕೆ ನಿಯಮ ಉಲ್ಲಂಘನೆಗೆ ದಂಡ ವಿಧಿಸಲಾಗುತ್ತದೆ. ಅದರಂತೆ 2023-24 ನೇ ಸಾಲಿನಲ್ಲಿ 361 ಪ್ರಕರಣಗಳನ್ನು ದಾಖಲಿಸಿ 1,30,61,623 ರೂ., 2024-25ನೇ ಸಾಲಿನಲ್ಲಿ (ಜೂನ್ ಅಂತ್ಯಕ್ಕೆ) 102 ಪ್ರಕರಣಗಳಲ್ಲಿ 20,66,939 ರೂ. ವಸೂಲಿ ಮಾಡಲಾಗಿದೆ.
ಜಿಲ್ಲಾ ಖನಿಜ ಪ್ರತಿಷ್ಠಾನ ಹಣ (ರೂ.ಗಳಲ್ಲಿ)
ತಾಲೂಕು ವಸೂಲಾದ ಹಣ
ಬಾಗೇಪಲ್ಲಿ 3,45,35,352
ಚಿಕ್ಕಬಳ್ಳಾಪುರ 56,90,22,976
ಚಿಂತಾಮಣಿ 75,50,627
ಗೌರಿಬಿದನೂರು 58,43,630
ಗುಡಿಬಂಡೆ 6,23,61,862
ಶಿಡ್ಲಘಟ್ಟ 16,64,750
ಕಲ್ಲು ಗಣಿ ಗುತ್ತಿಗೆ ಸಂಸ್ಥೆ ಮತ್ತು ಕ್ರಷರ್‌ಗಳ ವಿವರ
ತಾಲೂಕು ಸಂಸ್ಥೆ ಕ್ರಷರ್
ಬಾಗೇಪಲ್ಲಿ 20 2
ಚಿಕ್ಕಬಳ್ಳಾಪುರ 133 57
ಚಿಂತಾಮಣಿ 11 3
ಗೌರಿಬಿದನೂರು 2 2
ಗುಡಿಬಂಡೆ 28 15
ಶಿಡ್ಲಘಟ್ಟ 14 -
ಒಟ್ಟು 208 79
ರಾಜಧನ ಸಂಗ್ರಹ (ಕೋಟಿ ರೂ.)
ವರ್ಷ ವಾರ್ಷಿಕ ಗುರಿ ಸಂಗ್ರಹ ಶೇಕಡ
2020-21 62 55.35 ಶೇ.89
2021-22 80 66.90 ಶೇ.83.73
2022-23 80 69.73 ಶೇ.87
2023-24 225 101.11 ಶೇ.45
2024-25 63 23.70 ಶೇ.37.62