ಹದಗೆಟ್ಟ ತಾರೆಮಾರ್-ಮಳಲಿ ರಸ್ತೆ : ಗಂಜಿಮಠ ಪಂಚಾಯಿತಿಯಲ್ಲಿ ದುರಸ್ತಿಗೆ ಹಣವಿಲ್ಲ ಸರ್ಕಾರದಿಂದ ಅನುದಾನ ನಿರೀಕ್ಷೆ

New Project (19)
Published on

ಧನಂಜಯ ಗುರುಪುರ

ಗಂಜಿಮಠ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾರೆಮಾರ್-ಮಳಲಿ ಒಳರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಹೊಂಡಗುಂಡಿಗಳಿಂದ ವಾಹನ ಸಂಚಾರ ಸಂಚಕಾರವೆನಿಸಿದೆ. ಈ ಬಾರಿಯಾದರೂ ರಸ್ತೆ ದುರಸ್ತಿಯೊಂದಿಗೆ ಡಾಂಬರು ಹಾಕುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಮುತ್ತೂರು-ಗಂಜಿಮಠ ಮುಖ್ಯ ರಸ್ತೆಯ ತಾರೆಮಾರ್‌ನಿಂದ ಮಳಲಿ ಸಂಪರ್ಕಿಸುವ ಅಂದಾಜು 4 ಕಿ.ಮೀ. ರಸ್ತೆಗೆ ವರ್ಷಗಳ ಹಿಂದೆ ಹಾಕಲಾಗಿದ್ದ ಡಾಂಬರು, ಜಲ್ಲಿ ಕಿತ್ತು ಹೋಗಿ ಬೃಹತ್ ಗುಂಡಿಗಳು ಸೃಷ್ಟಿಯಾಗಿವೆ. ಈ ರಸ್ತೆ ಮೂಲಕ ಮುಂದೆ ಸಾಗಬೇಕಿದ್ದರೆ ವಾಹನ ಸವಾರರು ಸರ್ಕಸ್ ಮಾಡಬೇಕಿದ್ದು, ಕೆಲವರು ಕೈಕಾಲಿಗೆ ಗಾಯ ಮಾಡಿಕೊಂಡಿದ್ದಾರೆ. ತಾರೆಮಾರ್, ಮೊಗರು ಮತ್ತು ನಾರಳ ಸುತ್ತಲ ಪ್ರದೇಶದ ಜನರಿಗೆ ಮಳಲಿ ಮೂಲಕ ಗಂಜಿಮಠ, ಗುರುಪುರ ಕೈಕಂಬ, ಪೊಳಲಿ ಮೂಲಕ ಬಿ.ಸಿ.ರೋಡ್‌ಗೆ ಸಂಚರಿಸಲು ಇರುವ ಏಕೈಕ ರಸ್ತೆ ಇದಾಗಿದೆ.

ಮಳೆಗಾಲದಲ್ಲಿ ಗುಂಡಿಗಳೇ ತುಂಬಿರುವ ರಸ್ತೆಯಲ್ಲಿ ಕೆಸರು ನೀರಿಂದ ಕೆರೆಯಂತೆ ಕಾಣುತ್ತದೆ. ವಾಹನ ಸವಾರಿ ಸವಾಲಿನ ಕೆಲಸವಾಗಿದೆ. ಗುಂಡಿಗಳ ಆಳ ಅರಿವಿಲ್ಲದೆ ಮುಂದೆ ಸಾಗುವ ದ್ವಿಚಕ್ರ ವಾಹನ ಸವಾರರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಕುಪ್ಪೆಪದವು, ಮೂಲರಪಟ್ಣ, ಮುತ್ತೂರು, ಇರುವೈಲು ಭಾಗದ ಜನರಿಗೆ ಪೊಳಲಿ ದೇವಳಕ್ಕೆ ತೆರಳಲು ಅತಿ ಹತ್ತಿರದ ಒಳರಸ್ತೆ ಇದಾಗಿದೆ. ಇಲ್ಲಿ ಪ್ರತಿದಿನ ನೂರಾರು ವಾಹನಗಳು ಸಂಚರಿಸುತ್ತವೆ. ಇನ್ನಾದರೂ ಈ ರಸ್ತೆ ದುರಸ್ತಿಗೆ ಸಂಬಂಧಪಟ್ಟ ಇಲಾಖೆ ಮುಂದಾಗಬೇಕು. ಇಲ್ಲವಾದಲ್ಲಿ ಅಪಘಾತಗಳಿಂದ ಸಾವು-ನೋವು ಸಂಭವಿಸಬಹುದು.

ಈ ರಸ್ತೆ ದುರಸ್ತಿಗೆ ಪಂಚಾಯಿತಿಯಲ್ಲಿ ಅನುದಾನ ಸಿಗುವುದು ಕಷ್ಟವಾಗಿದೆ. ಸರ್ಕಾರ ಇತ್ತ ಗಮನಿಸುತ್ತಿಲ್ಲ. ಶಾಸಕ ಡಾ.ಭರತ್ ಶೆಟ್ಟಿ ಅವರ ಮೂಲಕ ಈಗಾಗಲೇ ಪ್ರಗತಿ ಪಥ್ ಯೋಜನೆಯಲ್ಲಿ ಹೊಸ ರಸ್ತೆ ರಸ್ತೆ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಿದ್ದೇವೆ. ಶೋಹನ್ ಅತಿಕಾರಿ ಗಂಜಿಮಠ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ತಾರೆಮಾರ್-ಮಳಲಿ ರಸ್ತೆ ದುರಸ್ತಿ ಮಾಡುವಂತೆ ಕೋರಿ ಸ್ಥಳೀಯರಿಂದ ಹಲವು ಮನವಿಗಳು ಬಂದಿವೆ. ದುರಸ್ತಿಗೆ ಪಂಚಾಯಿತಿಯಲ್ಲಿ ಅನುದಾನವಿಲ್ಲ. ಸರ್ಕಾರ ಅನುದಾನ ಕೊಡುತ್ತಿಲ್ಲ. ಸ್ಥಳೀಯರೇ ಸೇರಿ ಹಲವು ಬಾರಿ ಗುಂಡಿ ಮುಚ್ಚುವ ಕೆಲಸ ಮಾಡಿದ್ದಾರೆ. ಸರ್ಕಾರ ಈ ರಸ್ತೆ ದುರಸ್ತಿಗೆ ಶೀಘ್ರ ಅನುದಾನ ಬಿಡುಗಡೆಗೊಳಿಸಬೇಕು. ಜಯಾನಂದ ಕುಲಾಲ್ ಗಂಜಿಮಠ ಗ್ರಾಪಂ ಸ್ಥಳೀಯ ವಾರ್ಡ್ ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net