

ಬೆಳ್ತಂಗಡಿ: ಶಿಕ್ಷಣ ಇಲಾಖೆ ವತಿಯಿಂದ ನಡೆಯುತ್ತಿರುವ ಯೋಗಾಸನ ಸ್ಪರ್ಧೆಯ ಆಸನಗಳ ಆಯ್ಕೆ ಮತ್ತು ತೀರ್ಪುಗಾರಿಕೆಗೆ ಯೋಗ ಶಿಕ್ಷಕರಿಗೆ ಹಾಗೂ ತೀರ್ಪುಗಾರರಿಗೆ ಪ್ರತಿವರ್ಷ ಕಾರ್ಯಾಗಾರ ನಡೆಸುವುದು ಅಗತ್ಯ ಎಂದು ರಾಜ್ಯ ಯೋಗ ತೀರ್ಪುಗಾರ ಅಜಿತ್ ಕುಮಾರ್ ಕುಕ್ರಾಡಿ ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಮೊಗ್ರು ಮುಗೇರಡ್ಕ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಮೊಗ್ರು ಮುಗೇರಡ್ಕ ಸರ್ಕಾರಿ ಶಾಲಾ ಸೇವಾ ಟ್ರಸ್ಟ್ ಪ್ರಾಯೋಜಕತ್ವದಲ್ಲಿ ಆಯೋಜಿಸಲಾಗಿದ್ದ ಬೆಳ್ತಂಗಡಿ ತಾಲೂಕುಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಮಾತನಾಡಿದರು.
ಮುಗೇರಡ್ಕ ಸರ್ಕಾರಿ ಶಾಲಾ ಸೇವಾ ಟ್ರಸ್ಟ್ ಟ್ರಸ್ಟಿ ಬಾಬು ಗೌಡ ಹಾಗೂ ನಾಟಿ ವೈದ್ಯ ಕೃಷ್ಣಪ್ಪ ಗೌಡ ಮನ್ಕುಡೆ ಉದ್ಘಾಟಿಸಿದರು. ಯೋಗ ಗುರು ಕುಶಾಲಪ್ಪ ಗೌಡ ನೆಕ್ಕರಾಜೆ, ಬೆಳ್ತಂಗಡಿ ತಾಲೂಕು ಶಿಕ್ಷಣ ಇಲಾಖೆಯ ದೈಹಿಕ ಶಿಕ್ಷಣ ಪರಿವೀಕ್ಷಕಿ ಸುಜಯಾ ಶುಭಹಾರೈಸಿದರು. ಬಂದಾರು ಗ್ರಾ.ಪಂ. ಅಧ್ಯಕ್ಷ ದಿನೇಶ್ ಗೌಡ ಖಂಡಿಗ ಅಧ್ಯಕ್ಷತೆ ವಹಿಸಿದ್ದರು.
ಎಸ್.ಡಿ.ಎಂ.ಸಿ. ಅಧ್ಯಕ್ಷೆ ಪ್ರಜ್ಞಾ, ಪಂಚಾಯಿತಿ ಸದಸ್ಯರಾದ ಬಾಲಕೃಷ್ಣ ಗೌಡ ಮುಗೇರಡ್ಕ, ಗಂಗಾಧರ ಪೂಜಾರಿ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಯರಾಮ್, ಮೊಗ್ರು ಶಾಲೆಯ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಜಗದೀಶ ಅರ್ಬಿ, ಶ್ರೀ ಕ್ಷೇತ್ರ ಮುಗೇರಡ್ಕದ ಮೊಕ್ತೇಸರ ಚಂದ್ರಹಾಸ ದೇವಸ್ಯ, ಟ್ರಸ್ಟಿನ ಕೋಶಾಧಿಕಾರಿ ಪುರಂದರ ಗೌಡ ಮೊದಲಾದವರಿದ್ದರು.
ಮೊಗ್ರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಮಾಧವ ಗೌಡ ಸ್ವಾಗತಿಸಿದರು. ಶಿಕ್ಷಕಿ ಕೀರ್ತಿ ನಿರೂಪಿಸಿದರು. ಶಿಕ್ಷಕಿ ದಿವ್ಯಾ ವಂದಿಸಿದರು.