ಟಿಎಪಿಸಿಎಂಎಸ್ 9 ಹೊಸ ಮಾರಾಟ ಮಳಿಗೆ ಉದ್ಘಾಟನೆ

HUN-APR-4-1(TAPCMS STALL INAGURATION)
Published on

ಹುಣಸೂರು: ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ (ಟಿಎಪಿಸಿಎಂಎಸ್) ವತಿಯಿಂದ 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ 9 ಮಾರಾಟ ಮಳಿಗೆಗಳನ್ನು ಗುರುವಾರ ಶಾಸಕ ಜಿ.ಡಿ.ಹರೀಶ್‌ಗೌಡ ಉದ್ಘಾಟಿಸಿದರು.

ನಗರದ ಸಂತೆಮಾಳ ಮುಂಭಾಗದ ಮಳಿಗೆಗಳ ಸಂಕೀರ್ಣದ 9 ಮಳಿಗೆಗಳನ್ನು ಉದ್ಘಾಟಿಸಿದ ನಂತರ ಮಾತನಾಡಿದ ಶಾಸಕರು, ವರ್ಷದ ಹಿಂದೆ ಮೊದಲ ಹಂತವಾಗಿ 50 ಲಕ್ಷ ರೂ.ಗಳ ವೆಚ್ಚದಡಿ 9 ಮಳಿಗೆಗಳನ್ನು ನಿರ್ಮಿಸಿ ಉದ್ಘಾಟಿಸಲಾಗಿತ್ತು. ಇದೀಗ ಮತ್ತೆ 9 ಮಳಿಗೆಗಳನ್ನು ನಿರ್ಮಿಸಿ ಉದ್ಘಾಟಿಸಲಾಗಿದೆ. ಇನ್ನೂ 9 ಮಳಿಗೆಗಳನ್ನು ಮುಂದಿನ ದಿನಗಳಲ್ಲಿ ಉದ್ಘಾಟನೆಗೊಳ್ಳಲಿದ್ದು, ಒಟ್ಟು 18 ವಾಣಿಜ್ಯ ಮಳಿಗೆಗಳಿಂದ ಸಂಘಕ್ಕೆ ಹೆಚ್ಚಿನ ಆದಾಯ ಬರಲಿದೆ. ಟಿಎಪಿಸಿಎಂಎಸ್ ಆರ್ಥಿಕ ಸ್ವಾವಲಂಬನೆ ಸಾಧಿಸುವ ಮೂಲಕ ಇತರ ಸಂಘಗಳಿಗೆ ಮಾದರಿಯಾಗಿ ನಿಂತಿದೆ. ಮಳಿಗೆಗಳ ಆವರಣದಲ್ಲಿರುವ ರೈಸ್ ಮಿಲ್ ಅನ್ನು ನೆಲಸಮಗೊಳಿಸಿ ಕಲ್ಯಾಣ ಮಂಟಪ ನಿರ್ಮಿಸುವ ಉದ್ದೇಶ ಹೊಂದಲಾಗಿದೆ. ಸಂಘದ ಆಡಳಿತ ಮಂಡಳಿ ಮತ್ತು ಷೇರುದಾರರ ಸಹಕಾರದಿಂದ ಇಂತಹ ಸಾಧನೆಗಳನ್ನು ಮಾಡಲು ಸಾಧ್ಯವಾಗಿದೆ ಎಂದು ಸ್ಮರಿಸಿದರು.

ಸಂಘದ ಅಧ್ಯಕ್ಷ ಎಚ್.ಡಿ.ಬಾಬು ಮಾತನಾಡಿ, ಸರ್ಕಾರದ ಅನುದಾನವಿಲ್ಲದೆ ಶಾಸಕ ಜಿ.ಡಿ.ಹರೀಶಗೌಡರ ಸಹಕಾರದಿಂದ 1 ಕೋಟಿ ರೂ. ವೆಚ್ಚದಲ್ಲಿ 18 ಮಳಿಗೆಗಳನ್ನು ನಿರ್ಮಿಸಲಾಗಿದೆ. ನನ್ನ ಅವಧಿಯಲ್ಲಿ ಮಳಿಗೆಗಳು ಉದ್ಘಾಟನೆಗೊಂಡಿರುವುದಕ್ಕೆ ಸಂತೋಷವಾಗಿದೆ ಎಂದರು.

ಉಪಾಧ್ಯಕ್ಷ ರೇವಣ್ಣ, ನಿರ್ದೇಶಕರಾದ ಇಂದುಕಲಾ, ಸುಜಾತಾ, ಮಂಗಳಗೌರಿ, ನಾಗರಾಜು, ಕೆಂಪೇಗೌಡ, ವೆಂಕಟೇಶ್, ರಮೇಶ್, ಚಂದ್ರಶೇಖರ್, ಪ್ರೇಮಕುಮಾರ್, ಬಾಬು, ಕಾರ್ಯದರ್ಶಿ ಹೇಮಲತಾ ಸೇರಿದಂತೆ ಸಂಘದ ಸದಸ್ಯರು, ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net