

ಉಪ್ಪಿನಂಗಡಿ: ಟ್ಯಾಂಕರೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿ ದ್ವಿಚಕ್ರ ವಾಹನದಲ್ಲಿದ್ದ ಮಗು ಸಹಿತ ದಂಪತಿ ಗಂಭೀರ ಗಾಯಗೊಂಡ ಘಟನೆ ಉಪ್ಪಿನಂಗಡಿ ಸಮೀಪದ ನೆಕ್ಕಿಲಾಡಿಯಲ್ಲಿ ಬುಧವಾರ ನಡೆದಿದೆ. ದ್ವಿಚಕ್ರ ವಾಹನದಲ್ಲಿದ್ದ ಮುಹಮ್ಮದ್ ಶರೀಫ್, ಅವರ ಪತ್ನಿ ಆಯೀಷಾ ತಸ್ಲೀಮಾ ಹಾಗೂ ಮಗು ಮುಹಮ್ಮದ್ ರಫೀ ಗಾಯಗೊಂಡವರು. ಮುಹಮ್ಮದ್ ಶರೀಫ್ ಅವರ ಕಾಲಿಗೆ ಹಾಗೂ ಆಯಿಷಾ ತಸ್ಲೀಮಾ ಅವರ ತಲೆಗೆ ಗಂಭೀರ ಗಾಯಗಳಾಗಿದ್ದು, ಮಗು ಸಣ್ಣಪುಟ್ಟ ಗಾಯಗಳಿಂದ ಅಪಾಯದಿಂದ ಪಾರಾಗಿದೆ. ಗಾಯಾಳುಗಳನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳು ಸರಳೀಕಟ್ಟೆಯ ಉರ್ಲಡ್ಕ ನಿವಾಸಿಗಳು ಎನ್ನಲಾಗಿದೆ. 34 ನೆಕ್ಕಿಲಾಡಿಯ ಫ್ಲೈ ಓವರ್ ಬಳಿ ಈ ಅಪಘಾತ ಸಂಭವಿಸಿದ್ದು, ವಾಹನವೊಂದನ್ನು ಓವರ್‌ಟೇಕ್ ಮಾಡಿಕೊಂಡು ರಸ್ತೆ ವಿರುದಟಛಿ ದಿಕ್ಕಿನಲ್ಲಿ ಬಂದ ಟ್ಯಾಂಕರ್ ಎದುರಿನಿಂದ ಬಂದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತ ನಡೆದ ಬಳಿಕ ಚಾಲಕ ಟ್ಯಾಂಕರ್‌ನಿಂದ ಇಳಿದು ಓಡಲು ಯತ್ನಿಸಿದ್ದು, ಸಾರ್ವಜನಿಕರು ಆತನನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ. ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.