ತಮಿಳುನಾಡು ಎಂಟ್ರಿಗೆ ಜ್ಯೋತಿಷಿ ಮೊರೆಹೋದ ಚಿನ್ನಮ್ಮ: ತೇಯ್ ತುರೈ ದಿನ ಬಿಟ್ಟು ಬರಲು ಸಲಹೆ!

Shashikala 3 jan 20
Published on

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ನಾಲ್ಕು ವರ್ಷಗಳ ಜೈಲುವಾಸ ಅನುಭವಿಸಿ ಜನವರಿ 27ರಂದು ಬಿಡುಗಡೆಯಾಗಿರುವ ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಆಪ್ತೆ ಶಶಿಕಲಾ (ಚಿನ್ನಮ್ಮ) ಕರೊನಾ ಸೋಂಕಿನಿಂದ ಗುಣಮುಖರಾಗಿದ್ದು ಇಂದು ವಿಕ್ಟೋರಿಯಾ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಲಿದ್ದಾರೆ.

ಶಶಿಕಲಾ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಬಳಿಕವೂ ಕೆಲಕಾಲ ಬೆಂಗಳೂರಿನಲ್ಲೇ ತಂಗಲಿದ್ದಾರೆ. ನಗರದ ಹೊರವಲಯದ ಎಲೆಕ್ಟ್ರಾನಿಕ್​ಸಿಟಿ-ಆನೇಕಲ್ ಸಮೀಪದ ಫಾರ್ಮ್ ಹೌಸ್​ನಲ್ಲಿ ಉಳಿದುಕೊಳ್ಳುವ ಬಗ್ಗೆ ಮಾಹಿತಿ ಇದೆ. ಶಶಿಕಲಾ ಅವರ ಆಪ್ತರೊಬ್ಬರಿಗೆ ಸೇರಿದ ಫಾರ್ಮ್ ಹೌಸ್ ಆಗಿದ್ದು, ಫೆಬ್ರವರಿ 3ರವರೆಗೆ ಶಶಿಕಲಾ ವಿಶ್ರಾಂತಿ ಪಡೆಯಲಿದ್ದಾರೆಂದು ತಿಳಿದುಬಂದಿದೆ.

ಸಾಧ್ಯವಾದಲ್ಲಿ ಫೆಬ್ರವರಿ 3 ಅಥವಾ ಫೆಬ್ರವರಿ 8ರಂದು ಚೆನ್ನೈ ಕಡೆ ಶಶಿಕಲಾ ಪ್ರಯಾಣ ಬೆಳೆಸುವ ಸಾಧ್ಯತೆ‌ ಇದೆ. ಅಲ್ಲಿಯವರೆಗೆ ಫಾರ್ಮ್ ಹೌಸ್​ನಲ್ಲಿ ತಂಗಲಿದ್ದಾರೆ. ಇನ್ನು ಚೆನ್ನೈಗೆ ತೆರಳುವ ಮಾರ್ಗದಲ್ಲಿ ಅದ್ದೂರಿ ಸ್ವಾಗತಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಮಾರ್ಗಮಧ್ಯೆ ಸಂಭ್ರಮಾಚರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಹೊಸೂರಿನಿಂದ ಚೆನ್ನೈ ನಡುವಿನ ಮಾರ್ಗಮಧ್ಯ ಶಶಿಕಲಾಗೆ ಭವ್ಯ ಸ್ವಾಗತ ಸಿಗಲಿದೆ.

ಜ್ಯೋತಿಷಿಯ ಮೊರೆಹೋದ ತಮಿಳುನಾಡಿನ ಚಿನ್ನಮ್ಮ

ತಿರುವಣ್ಣಮಲೈನ ದೇವಸ್ಥಾನದ ಪ್ರಖ್ಯಾತ ಜ್ಯೋತಿಷ್ಯ ಪಂಡಿತರೊಬ್ಬರ ಬಳಿ ಈಗಾಗಲೇ ಶಶಿಕಲಾ ಅವರು ಶಾಸ್ತ್ರ ಕೇಳಿದ್ದಾರೆನ್ನಲಾಗಿದೆ. ಇಂದು ಡಿಸ್ಚಾರ್ಜ್ ಆಗಿ ತಮಿಳುನಾಡಿಗೇ ಹೋದರು ಶುಭಶಕುನವಂತೆ. ಅಲ್ಲದೆ, ಜನವರಿ 31, ಫೆಬ್ರವರಿ 3, 5, 8 ಮತ್ತು 11 ನೇ ತಾರೀಖಿನ ಐದು ದಿನಗಳನ್ನು ಜ್ಯೋತಿಷಿ ಕೊಟ್ಟಿದ್ದಾರೆ. ಈ ನಾಲ್ಕು ದಿನಾಂಕಗಳಲ್ಲೇ ತಮಿಳುನಾಡಿಗೆ ಬರುವಂತೆ ಸಲಹೆ ನೀಡಿದ್ದಾರೆ.

ಅಮಾವಾಸ್ಯೆ ಮುಗಿದು ಹುಣ್ಣಿಮೆ ಬರುವುದರೊಳಗೆ ರಾಜ್ಯ ಪ್ರವೇಶ ಮಾಡಿದರೆ ಒಳಿತೆಂದು ಸಲಹೆ ನೀಡಲಾಗಿದೆ. ತೇಯ್ ತುರೈ ದಿನ ಬಿಟ್ಟು ಚೆನೈಗೆ ಹೋದ್ರೆ ಎಲ್ಲಾ ಸಮಸ್ಯೆ ಹೋಗಲಿದೆಯಂತೆ. ತೇಯ್ ತುರೈ ಅಂದರೆ ತಮಿಳುನಾಡಿನಲ್ಲಿ ಅಶುಭ ದಿನ ಎಂದರ್ಥ. ಹೀಗಾಗಿ ಜ್ಯೋತಿಷಿ ನೀಡಿರುವ ಪಂಚ ದಿನಗಳಲ್ಲಿ ಯಾವುದಾದರೂ ಒಂದು ದಿನ ಚಿನ್ನಮ್ಮ ಚೆನ್ನೈಗೆ ಎಂಟ್ರಿ ನೀಡಲಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net