

ಪಾಂಡವಪುರ: ಕೆರಗೋಡಿನಲ್ಲಿ ಉದ್ದೇಶಪೂರ್ವಕವಾಗಿ ಹನುಮ ಧ್ವಜ ಇಳಿಸಿ ಬಹುಸಂಖ್ಯಾತ ಹಿಂದುಗಳ ಭಾವನೆಗೆ ಧಕ್ಕೆ ಉಂಟು ಮಾಡಿದ್ದಾರೆ ಎಂದು ಆರೋಪಿಸಿ ಬಜರಂಗದಳ, ವಿಶ್ವ ಹಿಂದು ಪರಿಷತ್ ಹಾಗೂ ಹಿಂದು ಜಾಗರಣಾ ವೇದಿಕೆ ಕಾರ್ಯಕರ್ತರು ತಾಲೂಕು ಕಚೇರಿಗೆ ಶನಿವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಪಟ್ಟಣದ ಡಾ.ರಾಜ್‌ಕುಮಾರ್ ವೃತ್ತದಲ್ಲಿ ಜಮಾವಣೆಗೊಂಡ ಬಜರಂಗದಳ, ವಿಶ್ವ ಹಿಂದು ಪರಿಷತ್ ಹಾಗೂ ಹಿಂದು ಜಾಗರಣಾ ವೇದಿಕೆ ಕಾರ್ಯಕರ್ತರು ಶನಿವಾರ ಶ್ರೀರಂಗಪಟ್ಟಣ-ಜೇವರ್ಗಿ ರಾಷ್ಟ್ರೀಯ ಹೆದ್ದಾರಿ ಸಂಚಾರ ತಡೆದು ಪ್ರತಿಭಟನೆ ನಡೆಸಿದ ಬಳಿಕ ತಾಲೂಕು ಕಚೇರಿ ಮುತ್ತಿಗೆ ಹಾಕಿ ಉಪ ತಹಸೀಲ್ದಾರ್ ಎಸ್.ಸಂತೋಷ್ ಅವರಿಗೆ ಮನವಿ ಸಲ್ಲಿಸಿದರು.
ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಹಾಗೂ ಪೊಲೀಸ್ ಇಲಾಖೆ ಹನುಮ ಧ್ವಜ ವಿಚಾರವಾಗಿ ಕೋಮು ಸೌಹಾರ್ದ ಕೆಣಕುವ ಜತೆಗೆ ಗಲಭೆಯನ್ನು ಹುಟ್ಟು ಹಾಕುತ್ತಿದೆ ಎಂದು ಬಜರಂಗದಳದ ಮುಖ್ಯಸ್ಥ ಸುನೀಲ್‌ಗೌಡ ಆರೋಪಿಸಿದರು.
ಹಿಂದು ಧರ್ಮದ ಸಂಕೇತವಾಗಿರುವ ಹನುಮ ಧ್ವಜ ಕಂಡರೆ ಈ ಸರ್ಕಾರಕ್ಕೆ ಎಲ್ಲಿಲ್ಲದ ದ್ವೇಷ. ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರ ತುಘಲಕ್ ನೀತಿ ಹಾಗೂ ಸ್ಥಳೀಯ ಶಾಸಕ ಗಣಿಗ ರವಿಕುಮಾರ್ ಅವರ ಕುಮ್ಮಕ್ಕಿನಿಂದ ಹನುಮ ಧ್ವಜ ತೆರವುಗೊಳಿಸಲಾಗಿದೆ. ಜಿಲ್ಲೆಯಾದ್ಯಂತ ಪ್ರತಿ ಗ್ರಾಮಗಳಲ್ಲೂ ಹನುಮ ಧ್ವಜ ಹಾರಿಸುವ ಮೂಲಕ ಕಾಂಗ್ರೆಸ್ ನಾಯಕರಿಗೆ ತಕ್ಕ ಉತ್ತರ ನೀಡಲಾಗುವುದು ಎಂದರು.
ಕೆರಗೋಡಿನಲ್ಲಿ ಮೊಕ್ಕಂ ಹೂಡಿರುವ ಕಂದಾಯ ಇಲಾಖೆ, ಪೊಲೀಸ್ ಇಲಾಖೆ ಅಧಿಕಾರಿಗಳು ಮುಂದೆ ಪ್ರತಿ ಗ್ರಾಮದಲ್ಲೂ ಮೊಕ್ಕಂ ಹೂಡುವ ಪರಿಸ್ಥಿತಿ ಎದುರಾಗಲಿದೆ. ಮಂಡ್ಯ ಜಿಲ್ಲೆಯನ್ನು ಮಂಗಳೂರು ಮಾಡಲು ಬಿಡುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ. ಆದರೆ ಮಂಡ್ಯ ಜಿಲ್ಲೆ ಜನತೆ ಮಂಗಳೂರಿನ ಶೈಲಿ ಪಾಲಿಸುವುದಿಲ್ಲ. ಮಂಡ್ಯ ಜಿಲ್ಲೆಗೆ ತನ್ನದೇ ಆದ ಗತ್ತಿದೆ. ಆ ಮೂಲಕವೇ ಉತ್ತರ ಕೊಡುತ್ತೇವೆ. ಪೊಲೀಸರ ಯಾವುದೇ ಗೊಡ್ಡು ಬೆದರಿಕೆಗೆ ಹೆದರುವುದಿಲ್ಲ. ನಮ್ಮ ಕಾರ್ಯಕರ್ತರ ಮೇಲೆ ಇಲ್ಲಸಲ್ಲದ ಕೇಸುಗಳನ್ನು ದಾಖಲಿಸಲಾಗುತ್ತಿದೆ. ಇನ್ನೂ ಮುಂದೆ ಎಲ್ಲ ತಾಲೂಕುಗಳಲ್ಲಿಯೂ ಹನುಮ ಧ್ವಜವನ್ನು ಸ್ಥಾಪಿಸುತ್ತೇವೆ, ತಾಕತ್ತಿದ್ದವರು ತಡೆಯಲಿ ಎಂದು ಸವಾಲು ಹಾಕಿದರು.
ಬಿಜೆಪಿ ರೈತ ಮೋರ್ಚಾ ಮಾಜಿ ಅಧ್ಯಕ್ಷ ಎಚ್.ಎನ್.ಮಂಜುನಾಥ್, ವಿಎಚ್‌ಪಿ ತಾಲೂಕು ಸಂಚಾಲಕ ಕಮಲೇಶ್, ಬಜರಂಗದಳದ ಡಾಮಡಹಳ್ಳಿ ಕೇಶವ, ಚೇತನ್, ಹಿಂದು ಸಂಘಟನೆ ಮುಖಂಡರಾದ ಹಿರೇಮರಳಿ ದೊರೆಸ್ವಾಮಿ, ವೇಣು ಇತರರು ಇದ್ದರು.